ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನೆದುರು ಬಾಕಿಯಿರುವ ಎಂಟು ಮೊಕದ್ದಮೆಗಳನ್ನು ಒಗ್ಗೂಡಿಸಿ ಆಲಿಸುವಂತೆ ಕೋರಿದ್ದ ಅರ್ಜಿಯನ್ನು ವಾರಣಾಸಿ ನ್ಯಾಯಾಲಯ ಸೋಮವಾರ ಪುರಸ್ಕರಿಸಿದೆ [ಭಗವಾನ್ ಆದಿ ವಿಶ್ವೇಶ್ವರ ವಿರಾಜ್‌ಮಾನ್ ಮತ್ತಿತರರ ನಡುವಣ ಪ್ರಕರಣ].
ಎಲ್ಲಾ ಪ್ರಕರಣಗಳಲ್ಲಿ ಎತ್ತಿರುವ ಅಂಶಗಳು ಮತ್ತು ಕೋರಿದ ಪರಿಹಾರಗಳು ಬಹುತೇಕ ಒಂದೇ ಆಗಿವೆ ಎಂದು ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ ಅವರು ತಿಳಿಸಿದರು. ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಉಳಿದರೆ ವ್ಯತಿರಿಕ್ತ ಆದೇಶಗ ಹೊರಡಿಸುವ ಸಾಧ್ಯತೆಯಿದೆ ಎಂಬ ತನ್ನ ಹಿಂದಿನ ಅವಲೋಕನವನ್ನು ನ್ಯಾಯಾಲಯ ಪುನರುಚ್ಚರಿಸಿತು.
ದಾವೆಗಳು ಮತ್ತು ವಿಚಾರಣೆಯನ್ನು ಒಗ್ಗೂಡಿಸಿ ಆಲಿಸಲು ಅನುವಾಗುವಂತೆ ಉತ್ತರಪ್ರದೇಶದಲ್ಲಿ ಉತ್ತರ ಪ್ರದೇಶ ನಾಗರಿಕ ಕಾನೂನುಗಳು (ಸುಧಾರಣೆಗಳು ಮತ್ತು ತಿದ್ದುಪಡಿ) ಕಾಯಿದೆಯ ಹೊಸ ಆದೇಶ 4 ಎ ಅನ್ನು ಸಿಪಿಸಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಅದರಂತೆ ಎಲ್ಲಾ ಪ್ರಕರಣಗಳಲ್ಲಿ ಕೋರಿದ ಪರಿಹಾರ ಮತ್ತು ಎತ್ತಿದ ಅಂಶ ಒಂದೇ ಆಗಿರುವುದರಿಂದ ಎಲ್ಲಾ ಪ್ರಕರಣಗಳನ್ನು ಒಗ್ಗೂಡಿಸಿ ಆಲಿಸಲು ಕೋರಿದ್ದರು.
ಮತ್ತೊಂದೆಡೆ ಫಿರ್ಯಾದಿಗಳು ಅರ್ಜಿ ವಿರೋಧಿಸಿದರು. ಅರ್ಜಿದಾರರು ಮತ್ತೊಂದು ಮೊಕದ್ದಮೆಯಲ್ಲಿ ಕಕ್ಷಿದಾರರಾಗಿದ್ದಾರೆಯೇ ವಿನಾ ಈ ಮೊಕದ್ದಮೆಯಲ್ಲಿ ಅಲ್ಲ ಎಂದು ವಾದಿಸಿದರು. ಆದರೆ ಸುಪ್ರೀಂ ಕೋರ್ಟ್ ಆದೇಶವೊಂದನ್ನು ಗಮನಿಸಿದ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿ ಎಲ್ಲಾ ಮೊಕದ್ದಮೆಗಳನ್ನು ಒಟ್ಟಿಗೆ ವಿಚಾರಣೆ ನಡೆಸುವಂತೆ ನಿರ್ದೇಶಿಸಿತು.