ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಗ್ಯಾನ್‌ವಪಿ ಮಸೀದಿಯೊಳಗೆ ಹಿಂದೂ ದೇವತಾ ಮೂರ್ತಿಗಳ ಇರುವಿಕೆ ಕುರಿತು ಪರಿಶೀಲನೆ ಮಾಡಲು ಹಾಗೂ ವಿಡಿಯೋ ಚಿತ್ರೀಕರಣ ಮತ್ತು ಸಾಕ್ಷ್ಯ ಸಂಗ್ರಹಕ್ಕಾಗಿ ತಾನು ನೇಮಿಸಿರುವ ಕೋರ್ಟ್ ಕಮಿಷನರ್‌ಗೆ ವಾರಣಾಸಿ ನ್ಯಾಯಾಲಯ ಗುರುವಾರ ಅನುಮತಿ ನೀಡಿದೆ.
ಸಮೀಕ್ಷೆ ನಡೆಸಲು ನೇಮಕಗೊಂಡಿರುವ ನ್ಯಾಯಾಲಯದ ಕಮಿಷನರ್ ಪಕ್ಷಪಾತ ಎಸಗಿದ್ದಾರೆ ಎಂದು ಆರೋಪಿಸಿ ಅಂಜುಮಾನ್ ಇಂತೇಜಾಮಿಯಾ ಮಸ್ಜಿದ್ ಸಲ್ಲಿಸಿದ್ದ ಮನವಿಯನ್ನು ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ವಜಾಗೊಳಿಸಿದರು.
ಸಮೀಕ್ಷೆ ಮುಂದುವರಿಸಬೇಕು ಮತ್ತು ಇಬ್ಬರು ವಕೀಲರನ್ನು ಸಮೀಕ್ಷಾ ತಂಡಕ್ಕೆ ಸೇರಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ.
ವಾರಣಾಸಿ ನ್ಯಾಯಾಲಯ ಈ ಹಿಂದೆ ಮಸೀದಿ ಪರಿಶೀಲನೆಗೆ ನಿರ್ದೇಶನ ನೀಡಿತ್ತು, ಆದರೆ ಅದನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಏಪ್ರಿಲ್ 21 ರಂದು ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.