ವಿವಾದಿತ ಜ್ಞಾನವಾಪಿ ಮಸೀದಿಯ ಕುರಿತಾದ ವ್ಯಾಜ್ಯದ ನಿರ್ವಹಣೆಯನ್ನು ಪ್ರಶ್ನಿಸಿ ಮುಸ್ಲಿಂ ಕಕ್ಷಿದಾರರು ಸಲ್ಲಿಸಿದ ಅರ್ಜಿಯ ವಿಚಾರಣೆ ಆರಂಭಿಸುವುದಕ್ಕೂ ಮುನ್ನ, ಮಸೀದಿಯ ಸಮೀಕ್ಷೆ ನಡೆಸಿರುವ ಕೋರ್ಟ್ ಕಮಿಷನರ್ ವರದಿಯನ್ನು ಪರಿಗಣಿಸಿ ಅದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಬೇಕೆ ಎನ್ನುವ ಕುರಿತು ವಾರಾಣಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಳೆ ನಿರ್ಧಾರ ಕೈಗೊಳ್ಳಲಿದೆ.
ಸಮೀಕ್ಷೆಯ ವರದಿಗೆ ಸಲ್ಲಿಸುವ ಆಕ್ಷೇಪಣಾ ಅರ್ಜಿಯನ್ನು ಮೊದಲು ಆಲಿಸಬೇಕು ಎಂದು ಹಿಂದೂ ಪಕ್ಷಕಾರರು ಇಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಾ. ಎ ಕೆ ವಿಶ್ವೇಶ ಅವರು ನಾಳೆ ಈ ಸೀಮಿತ ಅಂಶದ ಕುರಿತು ಆದೇಶ ಹೊರಡಿಸಲಿದ್ದಾರೆ.
ಜ್ಞಾನವಾಪಿ ಮಸೀದಿ ಹಿಂದೂ ದೇವಾಲಯವಾಗಿದ್ದು ಅಲ್ಲಿ ಹಿಂದೂ ದೈವಗಳ ಮೂರ್ತಿಯ ಕುರುಹುಗಳಿವೆ. ಹೀಗಾಗಿ ಆವರಣದೊಳಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಕೋರಿ ಹಿಂದೂ ಭಕ್ತರು ಸಲ್ಲಿಸಿದ ಸಿವಿಲ್ ಮೊಕದ್ದಮೆ ಇದಾಗಿದೆ.
ರಾಮ ಜನ್ಮಭೂಮಿ ಆಂದೋಲನ ಉತ್ತುಂಗದಲ್ಲಿದ್ದಾಗ ಜಾರಿಗೆ ಬಂದ ಆರಾಧನಾ ಸ್ಥಳಗಳ ಕಾಯಿದೆಯು ದೇಶದ ಸ್ವಾತಂತ್ರ್ಯ ಬಂದ ದಿನ, ಅಂದರೆ 1947ರ ಆಗಸ್ಟ್ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು ಎಂದು ತಿಳಿಸುತ್ತದೆ ಎಂಬ ನೆಲೆಯಲ್ಲಿ ಮುಸ್ಲಿಂ ಪಕ್ಷಕಾರರು ಹಿಂದೂ ಪಕ್ಷಕಾರರ ಅರ್ಜಿಯನ್ನು ಪ್ರಶ್ನಿಸಿವೆ. ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದ ಎಬ್ಬಿಸುವ ಪ್ರಕರಣಗಳನ್ನು ನ್ಯಾಯಾಲಯಗಳು ಪುರಸ್ಕರಿಸದಂತೆ ಕಾಯಿದೆಯ ಸೆಕ್ಷನ್ 4 ನಿರ್ಬಂಧ ವಿಧಿಸುತ್ತದೆ.
ಧಾರ್ಮಿಕ ಕಟ್ಟಡದ ಸ್ವರೂಪ ವಿವಾದದ ವಿಷಯವಾಗಿರುವುದರಿಂದ ಸಮೀಕ್ಷಾ ವರದಿ ಪರಿಗಣಿಸದೆ ದಾವೆಯ ವಿಚಾರಣೆ ಕುರಿತು ನಿರ್ಧರಿಸಲಾಗದು ಎಂದು ಹಿಂದೂ ಪಕ್ಷಕಾರರು ಜಿಲ್ಲಾ ನ್ಯಾಯಾಲಯದ ಮುಂದೆ ವಾದಿಸಿದ್ದಾರೆ. ಈ ಸೀಮಿತ ಅಂಶದ ಕುರಿತು ನಾಳೆ ನ್ಯಾಯಾಲಯ ನಿರ್ಧಾರ ಕೈಗೊಳ್ಳಲಿದೆ.