ಸುದ್ದಿಗಳು

ಜ್ಞಾನವಾಪಿ ಮಸೀದಿ ವಿವಾದ: ಏನು ಹೇಳುತ್ತದೆ ಕೋರ್ಟ್ ಕಮಿಷನರ್ ವರದಿ?

ಮಸೀದಿಯ ವೀಡಿಯೊ ಚಿತ್ರಣ ಮತ್ತು ಸಮೀಕ್ಷೆ ನಡೆಸುವಂತೆ ಸಿವಿಲ್ ನ್ಯಾಯಾಲಯ ನಿರ್ದೇಶಿಸಿತ್ತು. ಅದರಂತೆ ವರದಿ ಸಲ್ಲಿಸಲಾಗಿತ್ತು.

Bar & Bench

ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೈವಗಳ ಕುರುಹುಗಳಿವೆ ಎಂಬ ಕಾರಣಕ್ಕಾಗಿ ಮಸೀದಿಯಲ್ಲಿ ಪೂಜೆ ಸಲ್ಲಿಸುವ ಹಕ್ಕಿದೆ ಎಂಬ ಹಿಂದೂ ಪಕ್ಷಕಾರರ ವಾದದ ಹಿನ್ನೆಲೆಯಲ್ಲಿ ಮಸೀದಿಯ ವೀಡಿಯೊ ಚಿತ್ರಣ ಮತ್ತು ಸಮೀಕ್ಷೆ ನಡೆಸುವಂತೆ ಸಿವಿಲ್‌ ನ್ಯಾಯಾಲಯ ನಿರ್ದೇಶಿಸಿತ್ತು. ಅದರಂತೆ ಕೋರ್ಟ್‌ ಕಮಿಷನರ್‌ ವರದಿ ಸಲ್ಲಿಸಿದ್ದರು.

ಸಮೀಕ್ಷೆಯ ಪ್ರಮುಖಾಂಶಗಳು ಹೀಗಿವೆ:

- ಪ್ರಾಚೀನ ಕಾಲದ ಹಿಂದಿಯಲ್ಲಿ ಬರೆಯಲಾದ ಏಳು ಸಾಲುಗಳಿರುವ ಕಂಬವೊಂದು ಕಂಡುಬಂದಿದ್ದು ಅದರ ಮೇಲೆ ದೇವತೆಯ ಮಸುಕಾದ ಬಿಂಬ ಕೆತ್ತಲಾಗಿದೆ. ಅದು ನೆಲದಿಂದ ಮೇಲೆ ಸುಮಾರು 2 ಅಡಿ ಎತ್ತರ ಇದೆ.

- ಪಶ್ಚಿಮ ಗೋಡೆಯ ಮೇಲೆ, ಆನೆಯ ಸೊಂಡಿಲು, ಸ್ವಸ್ತಿಕ್ ಹಾಗೂ ತ್ರಿಶೂಲದ ಭಗ್ನ ಕಲಾಕೃತಿಗಳು ಗೋಚರಿಸಿವೆ.

- ಕಲ್ಲಿನ ಮೇಲೆ, ಕಮಲದ ಭಾವಚಿತ್ರ ಕಂಡುಬಂದಿದೆ. ಪುರಾತನ ದೇವಾಲಯದ ಶಿಖರ ಎಂದು ಫಿರ್ಯಾದಿಗಳು ಹೇಳಿರುವಂತೆ ಮೂರು ಹೊರ ಗುಮ್ಮಟಗಳ ಕೆಳಗೆ ಮೂರು ಶಂಕುವಿನಾಕಾರದ ಶಿಖರಾಕೃತಿಗಳು ಕಂಡುಬಂದಿವೆ.

- ದೊಡ್ಡ ಮಿನಾರ್‌ನಲ್ಲಿ ಕೆತ್ತನೆ ಬರಹಗಳಿವೆ. ಆದರೂ ಮೂಲದ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ. ಅದನ್ನು ಭಾಷಾ ತಜ್ಞರು ಮಾತ್ರ ಸ್ಪಷ್ಟಪಡಿಸಬಹುದು.

- ಮಸೀದಿಯ ಒಳಗಿನ ಗೋಡೆಯ ಮೇಲೆ, ತ್ರಿಶೂಲದ ಭಾವಚಿತ್ರವನ್ನು ಕೆತ್ತಲಾಗಿದ್ದು ಅದರ ಪಕ್ಕದಲ್ಲಿ, ಸ್ವಸ್ತಿಕ್‌ ಚಿಹ್ನೆ ಕಂಡುಬಂದಿದೆ.

- ಮಸೀದಿಯೊಳಗೆ, ಆನೆಯ ಸೊಂಡಿಲಿನ ಚಿತ್ರಗಳು ಸಹ ಇದ್ದವು. ಒಳಗಿನ ಕಲಾಕೃತಿಗಳು, ಲಕ್ಷಣಗಳು ಮತ್ತು ವಿನ್ಯಾಸಗಳು ಪ್ರಾಚೀನ ಭಾರತೀಯ ಶೈಲಿಗೆ ಸ್ವಲ್ಪಮಟ್ಟಿಗೆ ಹೋಲುತ್ತವೆ.

- ಸ್ಟೋರ್ ರೂಂನಲ್ಲಿ ಹಲವಾರು ಸ್ವಸ್ತಿಕ್‌ ಕಲಾಕೃತಿಗಳು ಕಂಡುಬಂದಿವೆ.

- ಶಿವಲಿಂಗವನ್ನು ಹೋಲುವ ವಸ್ತು ಕಂಡುಬಂದಿದೆ, ಆದರೂ, ಇದು ಕಾರಂಜಿ ಎಂದು ಪ್ರತಿವಾದಿಗಳು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.

- ಪಶ್ಚಿಮ ಗೋಡೆಯ ಮೂಲೆಯಲ್ಲಿ, ದೇವಿ, ದೇವರುಗಳ ಕಲಾಕೃತಿಗಳು ಮತ್ತು ಕಮಲದ ಆಕೃತಿಯೊಂದಿಗೆ ಹಳೆಯ ದೇವಾಲಯಗಳ ಪುರಾತನ ಅವಶೇಷಗಳು ಕಂಡುಬಂದವು.

- ಅಡಿಪಾಯದ ಕಲ್ಲಿನ ಮೇಲೆ ಸಿಂಧೂರಿ ಬಣ್ಣದ ಕಲಾಕೃತಿ ಇದೆ.

- ಧ್ವಜಗಲ್ಲಿನ ಮೇಲೆ, ಸಿಂದೂರಿ ಬಣ್ಣದ ʼದೇವʼ ಮೂರ್ತಿ ಗೋಚರಿಸಿದೆ. ಇನ್ನೊಂದು ಆಕಾರ, ವಿಗ್ರಹದಂತೆ ಕಂಡುಬಂದಿತು, ಅದರ ಮೇಲೆ ಸಿಂಧೂರದ ದಪ್ಪ ಲೇಪನ ಕೂಡ ಗೋಚರಿಸಿತು.

- ದೀಪ ಬೆಳಗಿಸುವ ತ್ರಿಕೋನಾಕಾರದ ಗೂಡು (ತಾಖಾ) ಕಂಡುಬಂದಿದೆ. ಅದರಲ್ಲಿ ಹೂವುಗಳನ್ನು ಇರಿಸಲಾಗಿತ್ತು.