Gyanvapi Mosque
Gyanvapi Mosque 
ಸುದ್ದಿಗಳು

[ಜ್ಞಾನವಾಪಿ] ಹಿಂದೂ ಪಕ್ಷಕಾರರು ಪೂಜಾ ಹಕ್ಕು ಪ್ರತಿಪಾದಿಸಿದ್ದಾರೆ, ಭೂಮಿಯ ಒಡೆತನವನ್ನಲ್ಲ: ವಾರಾಣಸಿ ನ್ಯಾಯಾಲಯ

Bar & Bench

ಜ್ಞಾನವಾಪಿ ಮಸೀದಿಯೊಳಗೆ ಪೂಜಾ ಹಕ್ಕು ಕೋರಿ ಹಿಂದೂ ಪಕ್ಷಕಾರರು ಹೂಡಿರುವ ದಾವೆಯನ್ನು ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿ) ಕಾಯಿದೆ- 1991ರಡಿ ನಿರ್ಬಂಧಿಸಲಾಗಿಲ್ಲ ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯ ಸೋಮವಾರ ಹೇಳಿದೆ.

ಜ್ಞಾನವಾಪಿ ಮಸೀದಿಯೊಳಗೆ ಪೂಜಾ ಹಕ್ಕು ಕೋರಿ ಹಿಂದೂ ಪಕ್ಷಕಾರರು ಹೂಡಿರುವ ದಾವೆ ವಿಚಾರಣಾರ್ಹ ಎಂದು ವಾರಣಾಸಿ ನ್ಯಾಯಾಲಯ ನಿನ್ನೆ ತೀರ್ಪು ನೀಡಿತ್ತು. ಈ ವೇಳೆ ನ್ಯಾಯಾಲಯ ಮಾಡಿದ ಪ್ರಮುಖ ಅವಲೋಕನಗಳ ಮಾಹಿತಿ ಇಲ್ಲಿದೆ.

ಫಿರ್ಯಾದಿಗಳು ಕೇವಲ ಪೂಜೆ ಮಾಡುವ ಹಕ್ಕು ಕೋರಿದ್ದಾರೆಯೇ ಹೊರತು ಭೂಮಿ ಮೇಲಿನ ಒಡೆತನವನ್ನಲ್ಲ ಎಂದ ಜಿಲ್ಲಾ ನ್ಯಾಯಾಧೀಶ ಡಾ. ಎ ಕೆ ವಿಶ್ವೇಶ ದಾವೆಯ ವಿಚಾರಣಾರ್ಹತೆ ಪ್ರಶ್ನಿಸಿ ಮುಸ್ಲಿಂ ಅರ್ಜಿದಾರ ಸಂಸ್ಥೆಯಾದ ಅಂಜುಮನ್ ಇಂತೆಝಾಮಿಯಾ ಮಸೀದಿಯ ಆಡಳಿತ ಸಮಿತಿ ಸಲ್ಲಿಸಿದ ಮನವಿಯನ್ನು ವಜಾಗೊಳಿಸಿದರು.

ಮಸೀದಿಯನ್ನು ದೇವಾಲಯವಾಗಿ ಪರಿವರ್ತಿಸಲು ನಾವು ಕೋರಿಲ್ಲ ಎಂಬ ಫಿರ್ಯಾದುದಾರರ ವಾದವನ್ನು ನ್ಯಾಯಾಯಲಯ ಮನ್ನಿಸಿತು.

ನ್ಯಾಯಾಲಯ ತೀರ್ಪಿನ ಪ್ರಮುಖಾಂಶಗಳು

  • ಹಿಂದೂ ಪಕ್ಷಕಾರರು ತಾವು 1993ರವರೆಗೆ ಅಲ್ಲಿ ಪೂಜಿಸುತ್ತಿದ್ದ ಮಾ ಶೃಂಗಾರ್ ಗೌರಿ ಇನ್ನಿತರ ಗೋಚರ ಇಲ್ಲವೇ ಅಗೋಚರ ದೇವತಾ ವಿಗ್ರಹಗಳನ್ನು ಪೂಜಿಸುವ ಹಕ್ಕನ್ನು ಮಾತ್ರ ಕೋರುತ್ತಿದ್ದಾರೆಯೇ ಹೊರತು ವಿವಾದಿತ ಆಸ್ತಿಯ ಮಾಲೀಕತ್ವವನ್ನಲ್ಲ.

  • 1993ರವರೆಗೆ ಪ್ರತಿನಿತ್ಯ ಪೂಜೆಗೊಳಗಾಗುತ್ತಿದ್ದು ನಂತರ ವರ್ಷಕ್ಕೊಮ್ಮೆ ಪೂಜೆಗೊಳಗಾಗುತ್ತಿದ್ದ  ಮಾ ಶೃಂಗಾರ್ ಗೌರಿ ಇನ್ನಿತರ ಗೋಚರ ಇಲ್ಲವೇ ಅಗೋಚರ ದೇವತಾ ವಿಗ್ರಹಗಳನ್ನು ಪೂಜಿಸುವ ಹಕ್ಕಿಗೆ ಮನವಿ ಸೀಮಿತಗೊಂಡಿದೆ.

  • ಆದ್ದರಿಂದ, ಪೂಜಾ ಸ್ಥಳಗಳ ಕಾಯಿದೆ ಫಿರ್ಯಾದಿಗಳ ಮೊಕದ್ದಮೆಗೆ ಅನ್ವಯವಾಗುವುದಿಲ್ಲ. ಇದು ನಾಗರಿಕ ಹಕ್ಕಾದ ಪೂಜಾ ಹಕ್ಕಿಗೆ ಮತ್ತು ಮೂಲಭೂತ ಹಕ್ಕಿಗೆ ಹಾಗೂ ಧಾರ್ಮಿಕ ಆಚರಣಾ ಹಕ್ಕಿಗೆ ಸೀಮಿತವಾಗಿದೆ. ಫಿರ್ಯಾದಿಗಳ ಪರ ವಕೀಲರ ವಾದ ಸ್ವೀಕಾರಾರ್ಹ.

  • ಇದಲ್ಲದೆ, ಫಿರ್ಯಾದಿಗಳು ಮುಸ್ಲಿಮರಲ್ಲದೇ ಇರುವುದರಿಂದ ಹಾಗೂ ವಿವಾದಿತ ಆಸ್ತಿಯಲ್ಲಿ ರೂಪುಗೊಂಡ ವಕ್ಫ್‌ಗೆ ಹೊರತಾದವರು ಎಂಬ ಕಾರಣಕ್ಕೆ ಮೊಕದ್ದಮೆಯನ್ನು ವಕ್ಫ್ ಕಾಯಿದೆಯಡಿ ನಿರ್ಬಂಧಿಸುವಂತಿಲ್ಲ.

  • ಉತ್ತರ ಪ್ರದೇಶ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ  ಕಾಯಿದೆ, 1983ರ ಅಡಿಯಲ್ಲಿ ದೇವಾಲಯದ ಆವರಣದ ಒಳಗೆ ಅಥವಾ ಹೊರಗೆ ದತ್ತಿಯಲ್ಲಿ ಸ್ಥಾಪಿಸಲಾದ ವಿಗ್ರಹಗಳನ್ನು ಪೂಜಿಸುವ ಹಕ್ಕನ್ನು ಪ್ರತಿಪಾದಿಸುವ ದಾವೆಗೆ ಯಾವುದೇ ನಿರ್ಬಂಧವಿಲ್ಲ.

ಹಿನ್ನೆಲೆ

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ, ಅಂದರೆ 1947ರ ಆಗಸ್ಟ್‌ 15ರಲ್ಲಿ ಇದ್ದಂತೆ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದ ಎಬ್ಬಿಸುವ ಪ್ರಕರಣಗಳನ್ನು ನ್ಯಾಯಾಲಯಗಳು ಪುರಸ್ಕರಿಸದಂತೆ ರಾಮ ಜನ್ಮಭೂಮಿ ವಿವಾದ ಉತ್ತುಂಗದಲ್ಲಿದ್ದಾಗ ಜಾರಿಗೆ ಬಂದ ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿಗಳು) ಕಾಯಿದೆ ಹೇಳುತ್ತಿದ್ದು ಅದರಂತೆ ಮುಸ್ಲಿಂ ಪಕ್ಷಕಾರರು ಸಿಪಿಸಿ ಆದೇಶ VII ನಿಯಮ 11ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದವು.

ಆದರೆ ಪ್ರಸ್ತುತ ಪ್ರಕರಣದಲ್ಲಿರುವ ಸಮಸ್ಯೆಯ ಸೂಕ್ಷ್ಮತೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್‌ ಸಿವಿಲ್‌ ನ್ಯಾಯಾಲಯದ ಮುಂದಿದ್ದ ಮೊಕದ್ದಮೆಯನ್ನು ಕಳೆದ ಮೇ 20ರಂದು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

ಧಾರ್ಮಿಕ ಕಟ್ಟಡದ ಸ್ವರೂಪದ ವಿಚಾರವು ವ್ಯಾಜ್ಯದ ಕೇಂದ್ರದಲ್ಲಿರುವುದರಿಂದ ಸಮೀಕ್ಷಾ ವರದಿಯನ್ನು ಪರಿಗಣಿಸದೆ ದಾವೆಯ ವಿಚಾರಣಾರ್ಹತೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹಿಂದೂ ಪಕ್ಷಕಾರರು ಜಿಲ್ಲಾ ನ್ಯಾಯಾಲಯದ ಮುಂದೆ ವಾದಿಸಿದ್ದರು.

ನಂತರ ಜಿಲ್ಲಾ ನ್ಯಾಯಾಲಯ ವಕೀಲ ಕಮಿಷನರ್ ಸಲ್ಲಿಸಿದ್ದ ಸಮೀಕ್ಷಾ ವರದಿಗೆ ತಮ್ಮ ಆಕ್ಷೇಪಣೆ ಸಲ್ಲಿಸುವಂತೆ ಪ್ರಕರಣದ ಕಕ್ಷಿದಾರರಿಗೆ ತಿಳಿಸಿತ್ತು. ಆಗಸ್ಟ್ 24 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ವಿಶ್ವೇಶ ಅವರು ತೀರ್ಪನ್ನು ನಿನ್ನೆಗೆ ಕಾಯ್ದಿರಿಸಿದ್ದರು.