Gyanvapi Mosque and the ancient temple Varanasi  
ಸುದ್ದಿಗಳು

ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ: ಎಎಸ್ಐಗೆ ವಾರಾಣಸಿ ನ್ಯಾಯಾಲಯ ನೀಡಿರುವ ನಿರ್ದೇಶನಗಳು ಇವು

ಸಮೀಕ್ಷೆಯಿಂದಾಗಿ ʼಪ್ರಕರಣದ ನ್ಯಾಯಯುತ ಮತ್ತು ಸೂಕ್ತ ವಿಲೇವಾರಿ ಸಾಧ್ಯವಾಗುತ್ತದೆ ಎಂದಿರುವ ನ್ಯಾಯಾಲಯ ʼನೈಜ ಸಂಗತಿಗಳನ್ನುʼ ತನ್ನ ಮುಂದೆ ಇಡುವಂತೆ ಶುಕ್ರವಾರ ನೀಡಿದ ಆದೇಶದಲ್ಲಿ ಸೂಚಿಸಿದೆ.

Bar & Bench

ವುಜುಖಾನಾ ಇದ್ದ ಮೊಹರು ಮಾಡಿದ ಜಾಗ ಹೊರತುಪಡಿಸಿ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಶುಕ್ರವಾರ ನಿರ್ದೇಶನ ನೀಡಿರುವ ವಾರಾಣಸಿ ನ್ಯಾಯಾಲಯ ಸಮೀಕ್ಷೆಗೆ ಸಂಬಂಧಿಸಿದಂತೆ ಪ್ರಮುಖ ಸೂಚನೆಗಳನ್ನು ಕೊಟ್ಟಿದೆ.

ವೈಜ್ಞಾನಿಕ ಸಮೀಕ್ಷೆಗಳನ್ನು ನಡೆಸಲು ಅಗತ್ಯವಾದ ಮೂಲಸೌಕರ್ಯ ಮತ್ತು ಉಪಕರಣಗಳನ್ನು ಹೊಂದಿರುವ ದೇಶದ ಪ್ರಮುಖ ಸಂಸ್ಥೆಯಾಗಿ ಎಎಸ್‌ಐಯನ್ನು ಪರಿಗಣಿಸಿರುವ ವಾರಾಣಸಿ ಜಿಲ್ಲಾ ನ್ಯಾಯಾಧೀಶ ಎ ಕೆ ವಿಶ್ವೇಶ ಅವರು  ಆದೇಶದಲ್ಲಿ ಈ ಕೆಳಗಿನ ಅಂಶಗಳನ್ನು ಪಾಲಿಸುವಂತೆ ಇಲಾಖೆಗೆ ಸೂಚಿಸಿದ್ದಾರೆ:

(ಎ) ಮೊಹರು ಮಾಡಿದ ಪ್ರದೇಶಗಳನ್ನು ಹೊರತುಪಡಿಸಿ ವಿವಾದಾತ್ಮಕ ಆಸ್ತಿಯಲ್ಲಿ ವೈಜ್ಞಾನಿಕ ತನಿಖೆ / ಸಮೀಕ್ಷೆ / ಉತ್ಖನನ ಕೈಗೊಳ್ಳಿ.

(ಬಿ) ಭೂ ಭೇದನ ರೆಡಾರ್‌ ( ಜಿಯೋ ಪೆನೆಟ್ರೇಟಿಂಗ್ ರೆಡಾರ್‌ - ಜಿಪಿಆರ್‌) ಸಮೀಕ್ಷೆ, ಉತ್ಖನನ ಹಾಗೂ ಕಾರ್ಬನ್‌ ಡೇಟಿಂಗ್‌ ವಿಧಾನ ಮತ್ತಿತರ ಆಧುನಿಕ ತಂತ್ರಗಳನ್ನು ಬಳಸಿ ವಿವರವಾದ ವೈಜ್ಞಾನಿಕ ತನಿಖೆ ನಡೆಸಬೇಕು. ಈ ಹಿಂದೆ ಅಸ್ತಿತ್ವದಲ್ಲಿದ್ದ ಹಿಂದೂ ದೇಗುಲದ ಕಟ್ಟಡದ ಮೇಲೆ ಇದನ್ನು ನಿರ್ಮಿಸಲಾಗಿದೆಯೇ ಎಂಬುದನ್ನು ಕಂಡುಕೊಳ್ಳಬೇಕು.

(ಸಿ) ವೈಜ್ಞಾನಿಕ ತನಿಖೆ ನಡೆಸಿ ಮತ್ತು ಆಗಸ್ಟ್ 4, 2023 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಸಂಪೂರ್ಣ ಸಮೀಕ್ಷೆ ಪ್ರಕ್ರಿಯೆಗಳ ಚಿತ್ರೀಕರಣ ನಡೆಸಬೇಕು.

(ಡಿ) ವೈಜ್ಞಾನಿಕ ವಿಧಾನ(ಗಳ) ಮೂಲಕ ಕಟ್ಟಡದ ಪಶ್ಚಿಮ ಗೋಡೆಯ ನಿರ್ಮಾಣದ ಕಾಲಾವಧಿ ಮತ್ತು ಸ್ವರೂಪವನ್ನು ತನಿಖೆ ಮಾಡಿ.

(ಇ) ವಿವಾದಸ್ಪದ ಕಟ್ಟಡದ 3 ಗುಮ್ಮಟಗಳ ಕೆಳಗೆ ಜಿಪಿಆರ್‌ ಸಮೀಕ್ಷೆ ನಡೆಸಬೇಕು. ಅಗತ್ಯ ಬಿದ್ದರೆ ಉತ್ಖನನ ನಡೆಸಬೇಕು.

(ಎಫ್) ಕಟ್ಟಡದ ಪಶ್ಚಿಮ ಗೋಡೆಯ ಕೆಳಗೆ ಜಿಪಿಆರ್‌ ಸಮೀಕ್ಷೆ ನಡೆಸತಕ್ಕದ್ದು ಮತ್ತು ಅಗತ್ಯವಿದ್ದರೆ ಉತ್ಖನನಕ್ಕೆ ಮುಂದಾಗತಕ್ಕದ್ದು.

(ಜಿ) ಎಲ್ಲಾ ನೆಲಮಾಳಿಗೆಗಳ ನೆಲದ ಜಿಪಿಆರ್‌ ಸಮೀಕ್ಷೆ ಮತ್ತು ಅಗತ್ಯವಿದ್ದರೆ ಉತ್ಖನನಕ್ಕೆ ಮುಂದಾಗಬೇಕು

(ಎಚ್‌) ಕಟ್ಟಡದಲ್ಲಿ ಕಂಡುಬರುವ ಎಲ್ಲಾ ಕಲಾಕೃತಿಗಳ ಪಟ್ಟಿ ತಯಾರಿಸಿ ಅವುಗಳ ವಸ್ತು ವಿಷಯಗಳನ್ನು ನಿರ್ದಿಷ್ಟಪಡಿಸಿ ವೈಜ್ಞಾನಿಕ ಸಮೀಕ್ಷೆ  ಕೈಗೊಳ್ಳಿ. ಅಂತಹ ಕಲಾಕೃತಿಗಳ ಕಾಲಮಾನ ಮತ್ತು ಸ್ವರೂಪವನ್ನು ಕಂಡುಹಿಡಿಯಲು ಕಾರ್ಬನ್‌ ಡೇಟಿಂಗ್‌ ಪ್ರಕ್ರಿಯೆ ನಡೆಸಿ.

(ಐ) ನಿರ್ಮಾಣದ ಅವಧಿ ಮತ್ತು ಸ್ವರೂಪ  ಪತ್ತೆಗಾಗಿ ಕಟ್ಟಡದ ಕಂಬ ಮತ್ತು ಸ್ತಂಭಗಳ ಕಾರ್ಬನ್‌ ಡೇಟಿಂಗ್‌ ಪ್ರಕ್ರಿಯೆ ನಡೆಸಿ.

(ಜೆ) ಜಿಪಿಆರ್ ಸಮೀಕ್ಷೆ, ಅಗತ್ಯವಿರುವಲ್ಲೆಲ್ಲಾ ಉತ್ಖನನ, ಕಾರ್ಬನ್‌ ಡೇಟಿಂಗ್‌ ಪ್ರಕ್ರಿಯೆ  ಹಾಗೂ ಪ್ರಶ್ನಾರ್ಹ ಸ್ಥಳದಲ್ಲಿ ಅಸ್ತಿತ್ವದಲ್ಲಿರುವ ನಿರ್ಮಾಣದ ವಯಸ್ಸು ಮತ್ತು ಸ್ವರೂಪವನ್ನು ನಿರ್ಧರಿಸಲು ಇತರ ವೈಜ್ಞಾನಿಕ ಪ್ರಕ್ರಿಯೆಗಳನ್ನು ಕೈಗೊಳ್ಳತಕ್ಕದ್ದು.

(ಕೆ) ಕಟ್ಟಡದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿರುವ ಕಲಾಕೃತಿಗಳು ಮತ್ತಿತರ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ವಸ್ತುಗಳನ್ನು ಜೊತೆಗೆ, ವೈಜ್ಞಾನಿಕ ಸಮೀಕ್ಷೆ ವೇಳೆ ಕಟ್ಟಡದ ಕೆಳಗೆ ಏನಿದೆ ಎಂಬುದನ್ನು ತನಿಖೆ ಮಾಡುವುದು.