ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ
ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ 
ಸುದ್ದಿಗಳು

ಜ್ಞಾನವಾಪಿ: ಸರ್ಕಾರ ಮತ್ತು ಹಿಂದೂ ದಾವೆದಾರರಿಗೆ ನಂಟಿದೆ ಎಂದು ಅಲಾಹಾಬಾದ್‌ ಹೈಕೋರ್ಟ್‌ನಲ್ಲಿ ಆರೋಪ

Bar & Bench

ಜ್ಞಾನವಾಪಿ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರ ಹಿಂದೂ ದಾವೆದಾರರೊಂದಿಗೆ ನಂಟು ಹೊಂದಿದೆಯೇ ಎಂದು ಮುಸ್ಲಿಂ ಪಕ್ಷಕಾರರು ಬುಧವಾರ ಅಲಾಹಾಬಾದ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್‌ ಅವರೆದುರು ಹಾಜರಾದ ಹಿರಿಯ ವಕೀಲ ಎಸ್ಎಫ್ಎ ನಖ್ವಿ, ಪ್ರಕರಣದಲ್ಲಿ ಸರ್ಕಾರವನ್ನು ಇನ್ನೂ ಪಕ್ಷಕಾರರನ್ನಾಗಿ ಸೇರಿಸದಿರುವಾಗ ನ್ಯಾಯಾಲಯದಲ್ಲಿ ರಾಜ್ಯದ ಅಡ್ವೊಕೇಟ್ ಜನರಲ್ ಏಕಿದ್ದಾರೆ ಎಂದು ಪ್ರಶ್ನಿಸಿದರು. "ಅವರು ಕೇವಲ ಸಹಾಯ ಮಾಡುತ್ತಿದ್ದಾರೆ" ಎಂದು ನ್ಯಾಯಮೂರ್ತಿ ಅಗರ್ವಾಲ್ ಉತ್ತರಿಸಿದರು.

ಆಗ ನಖ್ವಿ ಅವರು ರಾಜ್ಯ ಸರ್ಕಾರ ಮತ್ತು ಹಿಂದೂ ಪಕ್ಷಕಾರರ ನಡುವೆ ಸಂಬಂಧವಿದೆ. ಸರ್ಕಾರಕ್ಕೆ ನಿರ್ದೇಶನ ನೀಡಿದರೆ ಆ ಬಗ್ಗೆ ತಿಳಿಯಬಹುದು. ಅಡ್ವೊಕೇಟ್‌ ಜನರಲ್‌ ಅವರು ಇಲ್ಲಿರುವುದು ಏಕೆ ಎಂದರು. ಈ ಹಂತದಲ್ಲಿ ಪೀಠ "ಹಾಗಾದರೆ ನೀವು ನ್ಯಾಯಾಲಯದ ವಿರುದ್ಧವೂ ಆರೋಪ ಮಾಡುತ್ತಿದ್ದೀರಾ?" ಎಂದು ಪ್ರಶ್ನಿಸಿತು.

ನಾವು ನ್ಯಾಯಾಲಯದ ವಿರುದ್ಧ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ನಖ್ವಿ ಉತ್ತರಿಸಿದಾಗ ನ್ಯಾಯಾಧೀಶರು ಸಿವಿಲ್ ನ್ಯಾಯಾಲಯವನ್ನು ಉಲ್ಲೇಖಿಸುತ್ತಿದ್ದಾರೆಯೇ ಹೊರತು ಹೈಕೋರ್ಟ್ ಅನ್ನು ಅಲ್ಲ ಎಂದು ಸ್ಪಷ್ಟಪಡಿಸಿದರು.

ವಿಶೇಷವೆಂದರೆ, ವಿಚಾರಣೆಯ ಆರಂಭದಲ್ಲಿ, ನ್ಯಾಯಾಲಯ ದಾವೆಯಲ್ಲಿ ರಾಜ್ಯ ಸರ್ಕಾರವನ್ನು ಒಳಗೊಳ್ಳುವುದು ಸೂಕ್ತ ಎಂದು ಹೇಳಿ ಅದನ್ನು ಪಕ್ಷಕಾರನನ್ನಾಗಿ ಮಾಡುವಂತೆ ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಡ್ವೊಕೇಟ್ ಜನರಲ್, ಸೂಚನೆಗಳನ್ನು ಪಡೆಯಲು ಸಮಯಾವಕಾಶ ಕೋರಿದ್ದರು.

ಇದೇ ವೇಳೆ 1993ರಲ್ಲಿ ಜ್ಞಾನವಾಪಿ ಮಸೀದಿಯ ಬಳಿ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿದಾಗ ವಿವಾದಿತ ಸ್ಥಳ ಯಾರ ಹಿಡಿತದಲ್ಲಿತ್ತು ಎಂಬುದನ್ನು ಪುನರಾವಲೋಕನ ಮಾಡಬೇಕಿದೆ ಎಂದು ನ್ಯಾಯಾಲಯ ತಿಳಿಸಿತು. ಹೀಗಾಗಿ ಮಸೀದಿ ಯಾರ ಸ್ವಾಧೀನದಲ್ಲಿತ್ತು ಎಂಬುದನ್ನು ಸಾಬೀತುಪಡಿಸುವಂತೆ ಎರಡೂ ಕಡೆಯ ಪಕ್ಷಕಾರರಿಗೆ ನ್ಯಾಯಾಲಯ ಸೂಚಿಸಿತು.

ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 12ರಂದು ನಡೆಯಲಿದೆ.