Gyanvapi Mosque: Survey Report Details
Gyanvapi Mosque: Survey Report Details indiatimes.com
ಸುದ್ದಿಗಳು

ಜ್ಞಾನವಾಪಿ ಮಸೀದಿ ಸಮೀಕ್ಷೆ: ನ್ಯಾಯಾಲಯ ನೇಮಿಸಿರುವ ಆಯುಕ್ತರ ಸಮೀಕ್ಷಾ ವರದಿಯಲ್ಲಿ ಏನಿದೆ?

Bar & Bench

ದೇಶಾದ್ಯಂತ ಭಾರಿ ಚರ್ಚೆ ಹುಟ್ಟುಹಾಕಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿಯನ್ನು ಅಡ್ವೊಕೇಟ್‌ ಕಮಿಷನರ್‌ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದು ಬಾರ್‌ ಅಂಡ್‌ ಬೆಂಚ್‌ಗೆ ಲಭ್ಯವಾಗಿದೆ.

ವಾರಾಣಸಿ ಸಿವಿಲ್‌ ನ್ಯಾಯಾಲಯದ ಆದೇಶದ ಅನ್ವಯ ಮಸೀದಿಯಲ್ಲಿ ವಿಡಿಯೊಗ್ರಫಿ ಮತ್ತು ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ. ಇದು ಹಿಂದೂ ದೇವಾಲಯ ಎಂದು ಹಿಂದೂ ಸಮುದಾಯದ ಭಕ್ತರು ಹಕ್ಕು ಪ್ರತಿಪಾದಿಸುತ್ತಿದ್ದಾರೆ.

ನ್ಯಾಯಾಲಯ ನೇಮಿಸಿರುವ ಆಯುಕ್ತರ ವರದಿಯಲ್ಲಿ ಏನಿದೆ?

  • ಮೇ 16 ರಂದು ಆಯೋಗದ ಸಮೀಕ್ಷೆಯ ಸಂದರ್ಭದಲ್ಲಿ ಫಿರ್ಯಾದುದಾರರ ವಕೀಲರು ಕೊಳದ ಮಧ್ಯದಲ್ಲಿ ಶಿವಲಿಂಗವಿದೆ ಎಂದು ಆಯೋಗದ ಗಮನ ಸೆಳೆದರು.

  • ನಗರಸಭೆಯ ಸಹಾಯದಿಂದ ಕೊಳದಲ್ಲಿ ನೀರಿನ ಮಟ್ಟ ಕಡಿಮೆ ಮಾಡಿದಾಗ 2.5 ಅಡಿ ಎತ್ತರದ ಕಪ್ಪು ವೃತ್ತಾಕಾರದ ಕಲ್ಲಿನ ಆಕೃತಿ (ಬ್ಲಾಕ್‌ ಸರ್ಕ್ಯುಲರ್‌ ಸ್ಟೋನ್‌ ಶೇಪ್) ಪತ್ತೆಯಾಗಿದೆ.

  • ಕಪ್ಪು ವೃತ್ತಾಕಾರದ ಕಲ್ಲಿನ ಆಕೃತಿಯ ಮೇಲ್ಭಾಗದಲ್ಲಿ ಬಿಳಿಯ ಕಲ್ಲಿದ್ದು ಅದರ ಮಧ್ಯದಲ್ಲಿ ಅರ್ಧ ಇಂಚಿಗಿಂತ ಕಡಿಮೆ ಇರುವ ರಂಧ್ರವಿದೆ.

  • ವೃತ್ತಾಕಾರದ ಕಲ್ಲನ್ನು ಅಳತೆ ಮಾಡಿದಾಗ, ತಳದ ವ್ಯಾಸವು ಸುಮಾರು 4 ಅಡಿಗಳಷ್ಟು ಇತ್ತು.

  • ವೃತ್ತಾಕಾರದ ಕಪ್ಪು ಕಲ್ಲನ್ನು ಶಿವಲಿಂಗ ಎಂದು ಫಿರ್ಯಾದುದಾರರ ವಕೀಲರು ಕರೆದಿದ್ದು, ಪ್ರತಿವಾದಿಯ ಪರ ವಕೀಲರು ಇದನ್ನು ಫವ್ವಾರ (ಕಾರಂಜಿ) ಎಂದು ಹೇಳಿದ್ದಾರೆ.

  • ವೃತ್ತಾಕಾರದ ರಚನೆಯ ಒಳಭಾಗದಿಂದ ನೀರನ್ನು ತೆಗೆದ ನಂತರ, ಕೆಳಭಾಗದಲ್ಲಿ ಅಂಡಾಕಾರದ ರಚನೆ ಪತ್ತೆಯಾಗಿದ್ದು, ಮೇಲಿನ ತುದಿಯಲ್ಲಿ ಪ್ರತ್ಯೇಕ ಕಲ್ಲಿನ ಮೇಲೆ ಸ್ವಲ್ಪ ವೃತ್ತಾಕಾರದ ಕತ್ತರಿಸಿರುವ ಆಕಾರದ ವಿನ್ಯಾಸವಿದೆ. ಇದನ್ನು ವಿಡಿಯೊ ಮಾಡಲಾಗಿದೆ.

  • ವಾಜು ಪ್ರದೇಶದ ಪೂರ್ವ ದಿಕ್ಕಿನ ಹಿಂದೆ ಕೆಳಗಿಳಿಯಲು ಸ್ಥಳವಿದೆ ಎಂದು ಸಮೀಕ್ಷೆಯ ಸಂದರ್ಭದಲ್ಲಿ ಫಿರ್ಯಾದುದಾರರ ಪರ ವಕೀಲರು ತಿಳಿಸಿದರು. ಇದರ ಮಾಪನವನ್ನು ಮಾಡಲಾಗಿದ್ದು, ನಾಲ್ಕು ಮೆಟ್ಟಿಲುಗಳ ಕೆಳಗೆ ಮತ್ತು 4 ಅಡಿ 2 ಇಂಚು ಅಗಲದ ಉತ್ತರ ದಿಕ್ಕಿಗೆ ಹಾದಿ ಕಂಡು ಬಂದಿದೆ.

  • ಮಸೀದಿಯ ಪೂರ್ವಭಾಗದ ಸಭಾಂಗಣದಲ್ಲಿ ಪೂರ್ವ ಭಾಗಕ್ಕೆ ಮೂರು ಶೌಚಾಲಯಗಳಿದ್ದು, ದಕ್ಷಿಣ ಭಾಗಕ್ಕೆ ಮೂರು ಶೌಚಾಲಯಗಳು ಇವೆ. ಮೂರು ದಿಕ್ಕುಗಳಲ್ಲಿ ದೊಡ್ಡದಾದ ಸ್ನಾನದ ಕೋಣೆ ಮತ್ತು ಶೌಚಾಲಯಗಳು ಇವೆ. ಅಲ್ಲಿಂದ ಸ್ವಲ್ಪ ಮುಂದೆ ಬಾವಿ ಇದ್ದು, ಅಲ್ಲಿ ನೀರು ಇದೆ. ಇದನ್ನು ವಿಡಿಯೊ ಮಾಡಲಾಗಿದೆ.

  • ಕೊನೆಯಲ್ಲಿ ನೆಲ ಮಹಡಿಯಲ್ಲಿ ವೃತ್ತಾಕಾರದ ಶಿವಲಿಂಗ ಆಕೃತಿ ಅಸ್ತಿತ್ವ ತಿಳಿಸುವ ಆಕಾರದ ಶಿವಲಿಂಗವು ಮೊದಲ ಮಹಡಿಯಲ್ಲಿನ ಕೊಳದ ಮಧ್ಯದಲ್ಲಿ ಇದ್ದು ಅದರ ವಿಡಿಯೊ ಮಾಡಬೇಕು ಎಂದು ಫಿರ್ಯಾದುದಾರರು ಒತ್ತಾಯಿಸಿದರು. ಇದಕ್ಕೆ ನಾಲ್ಕನೇ ಪ್ರತಿವಾದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

  • ಮೊದಲ ಮಹಡಿಯ ಮಧ್ಯದಲ್ಲಿರುವ ಕೊಳದಲ್ಲಿನ ವೃತ್ತಾಕಾರದ ಶಿವಲಿಂಗದ ಸ್ವರೂಪವಿರುವ ಆಕೃತಿಯ ಕೆಳಗಿನ ಭಾಗದ ನೆಲ ಅಂತಸ್ತಿನಲ್ಲಿರುವ ಆಕೃತಿಯನ್ನು ವಿಡಿಯೊಗ್ರಫಿ ಮಾಡಬೇಕು ಎಂದು ಅರ್ಜಿದಾರರ ಪರ ವಕೀಳರು ಒತ್ತಾಯಿಸಿದರು.

  • ನ್ಯಾಯಾಲಯದ ಕಮಿಷನರ್‌ಗಳ ಹಿಂದಿನ ತಪಾಸಣೆ ಮತ್ತು ವಿಡಿಯೊದ ಆಧಾರದ ಹಿನ್ನೆಲೆಯಲ್ಲಿ ಭೂಮಿಯ ಕೆಳಗಿನ ಭಾಗವು ಉತ್ತರ ಮತ್ತು ದಕ್ಷಿಣದ ನೆಲಮಾಳಿಗೆಯ ಗೋಡೆಗಳಿಂದ ಮುಚ್ಚಲ್ಪಟ್ಟಿರುವುದರಿಂದ ಈ ವೃತ್ತಾಕಾರದಲ್ಲಿ ನೆಲವನ್ನು ತಲುಪಲು ಸಾಧ್ಯವಿಲ್ಲ. ಕೊಳದ ತಳಭಾಗದ ಗೋಡೆಯು ಪೂರ್ವಕ್ಕೆ ಇದೆ ಎಂದು ಹೇಳಲಾಗಿದೆ.

  • ಸ್ಥಳದಲ್ಲಿ ಗೋಡೆಗಳ ತಡೆಯಿಂದ ಸದ್ಯಕ್ಕೆ ಸಮೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.