ಕೇರಳ ಹೈಕೋರ್ಟ್ ಮತ್ತು ವೈದ್ಯರು
ಕೇರಳ ಹೈಕೋರ್ಟ್ ಮತ್ತು ವೈದ್ಯರು 
ಸುದ್ದಿಗಳು

ಲೈಂಗಿಕ ಸಂತ್ರಸ್ತರನ್ನು ಮಹಿಳಾ ಸ್ತ್ರೀರೋಗ ತಜ್ಞರಷ್ಟೇ ಪರೀಕ್ಷಿಸಬೇಕೆಂಬ ಆದೇಶ: ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನೆ

Bar & Bench

ಲೈಂಗಿಕ ಅಪರಾಧಗಳ ಸಂತ್ರಸ್ತರನ್ನು ಸ್ತ್ರೀರೋಗ ತಜ್ಞರೇ ಪರೀಕ್ಷೆ ನಡೆಸಬೇಕು ಎಂಬ ಶಿಷ್ಟಾಚಾರ ಪ್ರಶ್ನಿಸಿ ಕೇರಳದ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಸ್ತ್ರೀರೋಗ ತಜ್ಞರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಲೈಂಗಿಕ ಅಪರಾಧಗಳ ಸಂತ್ರಸ್ತರ ಪರೀಕ್ಷೆಗಾಗಿ ಕೇರಳ ವೈದ್ಯಕೀಯ- ಕಾನೂನು ಶಿಷ್ಟಾಚಾರ- 2019 ರ ಕಲಂ 6 ಮತ್ತು ಏಪ್ರಿಲ್ 2023 ರಲ್ಲಿ ಮಾಡಿದ ತಿದ್ದುಪಡಿಯನ್ನು ಪ್ರಮುಖವಾಗಿ ಸ್ತ್ರೀರೋಗ ತಜ್ಞರು ಪ್ರಶ್ನಿಸಿದ್ದಾರೆ.

2023ರ ತಿದ್ದುಪಡಿಯ ಪ್ರಕಾರ, ಲೈಂಗಿಕ ಅಪರಾಧಕ್ಕೆ ತುತ್ತಾದ ಸಂತ್ರಸ್ತರನ್ನು ಪರೀಕ್ಷಿಸುವಂತೆ ಪೊಲೀಸರು ಮಹಿಳಾ ಸ್ತ್ರೀರೋಗ ತಜ್ಞರಿಗಷ್ಟೇ ಮನವಿ ಮಾಡಬಹುದಾಗಿದೆ.

ಅರ್ಜಿಯ ಪ್ರಮುಖಾಂಶಗಳು

  • ಯಾವುದೇ ನೋಂದಾಯಿತ ವೈದ್ಯರ ಬದಲು ಸ್ತ್ರೀ ರೋಗ ತಜ್ಞರಷ್ಟೇ ಲೈಂಗಿಕ ಅಪರಾಧಕ್ಕೆ ತುತ್ತಾದ ಸಂತ್ರಸ್ತರನ್ನು ಪರೀಕ್ಷೆ ನಡೆಸುವಂತೆ ಕಡ್ಡಾಯಗೊಳಿಸುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ (ಪೋಕ್ಸೊ ಕಾಯಿದೆ) ಸೆಕ್ಷನ್ 27 (2) ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 164ಎಗೆ ವಿರುದ್ಧವಾಗಿದೆ.

  • ಕೇರಳ ವೈದ್ಯಕೀಯ- ಕಾನೂನು ಶಿಷ್ಟಾಚಾರ- 2019 ರ ಕಲಂ 6ರಲ್ಲಿ ಕಂಡು ಬರುವ ಆದೇಶ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಾರ್ಗಸೂಚಿಗಳಲ್ಲಿ ಇಲ್ಲ.

  • ಕಡಿಮೆ ಸಿಬ್ಬಂದಿ ಇರುವ ಆಸ್ಪತ್ರೆಗಳಲ್ಲಿ ಮಹಿಳಾ ಸ್ತ್ರೀರೋಗತಜ್ಞರೇ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದವರ ಪರೀಕ್ಷೆ ನಡೆಸಲು ಕಾಯಬೇಕಾಗುವುದರಿಂದ ಈ ಶಿಷ್ಟಾಚಾರ ಜಾರಿ ಲೈಂಗಿಕ ದೌರ್ಜನ್ಯಕ್ಕೊಳಗಾದವರ ಮೇಲೆ ಪರಿಣಾಮ ಬೀರಿದೆ.

  • ವೈದ್ಯಕೀಯ ಕಾನೂನು ಪರೀಕ್ಷೆಯ ಜವಾಬ್ದಾರಿಯನ್ನು ನಿರ್ದಿಷ್ಟ ರೀತಿಯ ತಜ್ಞರಿಗೆ ವಹಿಸುವುದು ಪ್ರಭುತ್ವ ಸಾಕಾರಗೊಳಿಸಲು ಬಯಸುವ ನಿಜವಾದ ಉದ್ದೇಶಕ್ಕೆ ವಿರುದ್ಧವಾಗಿದೆ.

  • ಪ್ರಸೂತಿ ತಜ್ಞರ ಮೇಲೆ ಇದು ಒತ್ತಡ ಹೇರುತ್ತದೆ.

  • ಸಿಆರ್‌ಪಿಸಿ ಸೆಕ್ಷನ್ 53 (2) (ಬಿ) ವ್ಯಾಖ್ಯಾನದೊಳಗೆ ಬರುವ ಎಲ್ಲಾ ನೋಂದಾಯಿತ ವೈದ್ಯರು ಸಿಆರ್‌ಪಿಸಿ ಸೆಕ್ಷನ್ 164 ಎನಲ್ಲಿ ತಿಳಿಸಿರುವಂತೆ ಸಂತ್ರಸ್ತರ ವೈದ್ಯಕೀಯ ಪರೀಕ್ಷೆ ನಡೆಸಬಹುದು.

  • ವೈದ್ಯಕೀಯ ಶಿಕ್ಷಣ ಪಡೆಯುವಾಗಲೇ ವೈದ್ಯಕೀಯಕ್ಕೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳನ್ನು ವೈದ್ಯರು ಅಭ್ಯಾಸ ಮಾಡಿರುವುದರಿಂದ ಲೈಂಗಿಕ ಅಪರಾಧಗಳಿಂದ ಸಂತ್ರಸ್ತರನ್ನು ಪರೀಕ್ಷಿಸಲು ಎಲ್ಲಾ ಭಾರತೀಯ ವೈದ್ಯಕೀಯ ಪದವೀಧರರು ಸಮರ್ಥರಾಗಿದ್ದಾರೆ.

  • ಸ್ತ್ರೀರೋಗತಜ್ಞರ ಮೇಲೆ ಮಾತ್ರ ಹೊರೆ ಹೊರಿಸುವುದು ಕಾನೂನುಬಾಹಿರ, ಅನುಚಿತ, ಅಸಮಂಜಸ ಹಾಗೂ ನಿರಂಕುಶ ನಿರ್ಧಾರವಾಗುತ್ತದೆ.

  • ಆದ್ದರಿಂದ ಶಿಷ್ಟಾಚಾರದ ಕಲಂ 6ಕ್ಕೆ ಮಾರ್ಪಾಡು ಮಾಡಬೇಕು.

  • ಸಂತ್ರಸ್ತರನ್ನು ಪರೀಕ್ಷಿಸಲು ಎಲ್ಲಾ ನೋಂದಾಯಿತ ವೈದ್ಯರಿಗೆ ಅಗತ್ಯ ತರಬೇತಿ ನೀಡಬೇಕು.

ನಿನ್ನೆ (ಬುಧವಾರ) ಪ್ರಕರಣದ ವಿಚಾರಣೆ ನಡೆದಾಗ ನ್ಯಾ. ದೇವನ್‌ ರಾಮಚಂದ್ರನ್‌ ಅವರು "ಈ ಶಿಷ್ಟಾಚಾರ ತಪ್ಪು ಎಂದು ನಾನು ಭಾವಿಸುವುದಿಲ್ಲ ಆದರೆ ಅದರ ಕಾರ್ಯನಿರ್ವಹಣೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ಖಂಡಿತವಾಗಿಯೂ ಪರಿಹರಿಸಬಹುದು" ಎಂದಿದ್ದರು. ಮಾರ್ಚ್ 5ಕ್ಕೆ ಪ್ರಕರಣವನ್ನು ಮತ್ತೆ ಆಲಿಸುವುದಾಗಿ ನ್ಯಾಯಾಲಯ ಈ ವೇಳೆ ತಿಳಿಸಿತ್ತು.