ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ರದ್ದುಪಡಿಸುವಂತೆ ಕೋರಿ ಎಚ್ ಡಿ ರೇವಣ್ಣ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರಕರಣದ ಕುರಿತು ವಾದ ಆಲಿಸಿದ ಪೀಠವು ಎಸ್‌ಐಟಿಗೆ ನೋಟಿಸ್, ಎರಡನೇ ಪ್ರತಿವಾದಿಗೆ (ದೂರುದಾರ ಸಂತ್ರಸ್ತೆ) ತುರ್ತು ನೋಟಿಸ್ ಜಾರಿ ಮಾಡಿತು. ಅಲ್ಲದೇ, ವಿಚಾರಣೆಯನ್ನು ಜೂನ್ 21ಕ್ಕೆ ಮುಂದೂಡಲಾಗಿದೆ ಎಂದು ಆದೇಶಿಸಿತು.
ಇದಕ್ಕೂ ಮುನ್ನ, ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಕಳೆದ ವಿಚಾರಣೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರು ಎರಡೂ ಪ್ರಕರಣಗಳಲ್ಲಿ ಬಹುತೇಕ ತನಿಖೆ ಪೂರ್ಣಗೊಂಡಿದೆ ಎಂದು ಹೇಳಿದ್ದರು” ಎಂದರು.
ಇದಕ್ಕೆ ಆಕ್ಷೇಪಿಸಿದ ಎಸ್‌ಪಿಪಿ ಪ್ರೊ. ಕುಮಾರ್ ಅವರು “ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ನಾನು ಏನನ್ನೂ ಹೇಳಿಲ್ಲ. ಅಪಹರಣ ಪ್ರಕರಣಗಳಲ್ಲಿ ಬಹುತೇಕ ವಿಚಾರಣೆ ಮುಗಿದಿದೆ ಎಂದಿದ್ದೇನೆ. ಕಿಂಗ್‌ಪಿನ್ ಇನ್ನೂ ಸಿಕ್ಕೇ ಇಲ್ಲ. ಇಂದು ಸಾಹೇಬ್ರು ಆದೇಶ ಮಾಡಿದ್ದಾರೆ. ಭವಾನಿ ಅವರು ಈ ಪ್ರಕರಣದ ಮಾಸ್ಟರ್‌ಮೈಂಡ್” ಎಂದರು.
ಆಗ ಪೀಠವು “ಕ್ವೀನ್ ಪಿನ್. ಕಿಂಗ್ ಪಿನ್ ಅಲ್ಲ. ನಾನು ಭಾಷೆ ತಿರುಚುತ್ತಿದ್ದೇನೆ” ಎಂದು ನಕ್ಕರು.
ಈ ವೇಳೆಯಲ್ಲಿ ನಾಗೇಶ್ ಅವರು “ಒಂದೊಮ್ಮೆ ನನ್ನ ಅರ್ಜಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಿದರೆ ನನ್ನ ಅರ್ಜಿ ಏನಾಗಬೇಕು?” ಎಂದು ಪೀಠವನ್ನು ಪ್ರಶ್ನಿಸಿದರು.
ಆಗ ಪೀಠವು “ನಿಮ್ಮ ಅರ್ಜಿಗೆ ಏನಾಗುವುದಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿದೆ” ಎಂದು ವಿಚಾರಣೆ ಮುಂದೂಡಿದರು.
ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಏಪ್ರಿಲ್ 28ರಂದು ಮಹಿಳೆಯೊಬ್ಬರು ಹೊಳೆನರಸೀಪುರ ಠಾಣೆಯಲ್ಲಿ ಎಚ್ ಡಿ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ವಿರುದ್ಧ ದೂರು ನೀಡಿದ್ದರು. ಇದನ್ನು ಆಧರಿಸಿ ರೇವಣ್ಣರನ್ನು ಮೊದಲ ಹಾಗೂ ಪ್ರಜ್ವಲ್‌ರನ್ನು ಎರಡನೇ ಆರೋಪಿಯನ್ನಾಗಿಸಿ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 354(ಎ),354(ಡಿ),506 ಅಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ರೇವಣ್ಣ ಜಾಮೀನು ಪಡೆದುಕೊಂಡಿದ್ದಾರೆ.
ಆನಂತರ ಪ್ರಜ್ವಲ್ ವಿರುದ್ಧ ಅತ್ಯಾಚಾರ (ಐಪಿಸಿ 376) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ (ಮಹಿಳೆಯರ ಖಾಸಗಿ ಅಂಗ ಸೆರೆ ಹಿಡಿದು ಬಿತ್ತರಿಸುವುದು) ಸೇರ್ಪಡೆ ಮಾಡಿದ್ದಾರೆ.
ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಎಚ್ ಡಿ ರೇವಣ್ಣ ಅವರ ಜಾಮೀನು ರದ್ದುಪಡಿಸಬೇಕು ಎಂದು ಕೋರಿ ಎಸ್‌ಐಟಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜೂನ್ 21ಕ್ಕೆ ಮುಂದೂಡಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ದೀಕ್ಷಿತ್ ಅವರ ಪೀಠದ ಮುಂದೆ ಹಾಜರಾದ ರೇವಣ್ಣ ಪರ ವಕೀಲರು “ನೋಟಿಸ್ ಮಾತ್ರ ಸಿಕ್ಕಿದ್ದು, ದಾಖಲೆಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಹೀಗಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದನ್ನು ಪುರಸ್ಕರಿಸಿದ ಪೀಠವು ಅರ್ಜಿ ವಿಚಾರಣೆ ಮುಂದೂಡಿತು.
ಲೈಂಗಿಕ ದೌರ್ಜನ್ಯ ಸಂತ್ರಸ್ತೆ ಅಪಹರಣ ಸಂಬಂಧ ಆಕೆಯ ಪುತ್ರ ನೀಡಿದ ದೂರು ಆಧರಿಸಿ ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ಎಚ್ ಡಿ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 364ಎ, 365 ಜೊತೆಗೆ 34 ಅಡಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಸತೀಶ್ ಬಾಬಣ್ಣ ಎರಡನೇ ಆರೋಪಿಯಾಗಿದ್ದಾರೆ. ಇನ್ನೂ ನಾಲ್ವರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಭವಾನಿ ಅವರ ಮೇಲೂ ಗಂಭೀರ ಆರೋಪವಿದೆ. ಈ ಮಧ್ಯೆ, ಭವಾನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ತಮ್ಮ ವಿರುದ್ಧದ ಅಪಹರಣ ಪ್ರಕರಣವನ್ನೂ ರದ್ದುಪಡಿಸುವಂತೆ ಕೋರಿ ರೇವಣ್ಣ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ. ಇದು ವಿಚಾರಣೆಗೆ ಬಾಕಿ ಇದೆ.