H D Revanna and Karnataka HC 
ಸುದ್ದಿಗಳು

ಸಂತ್ರಸ್ತೆ ಅಪಹರಣ ಪ್ರಕರಣ ರದ್ದತಿ ಕೋರಿದ್ದ ಅರ್ಜಿ ಹಿಂಪಡೆದ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ

2026ರ ಫೆಬ್ರವರಿ 5ರಂದು ಹೈಕೋರ್ಟ್‌ ಮಧ್ಯಂತರ ಆದೇಶ ತೆರವುಗೊಳಿಸಿ, ರೇವಣ್ಣಗೆ ಆಘಾತ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ರೇವಣ್ಣ ಅರ್ಜಿ ಹಿಂಪಡೆದಿದ್ದಾರೆ.

Bar & Bench

ಪುತ್ರ ಪ್ರಜ್ವಲ್‌ ರೇವಣ್ಣರಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯನ್ನು ಅಪಹರಿಸಿದ ಸಂಬಂಧ ದಾಖಲಾಗಿದ್ದ ಪ್ರಕರಣ ಮತ್ತು ಆನಂತರ ವಿಶೇಷ ತನಿಖಾ ದಳ (ಎಸ್‌ಐಟಿ) ಆರೋಪ ಪಟ್ಟಿ ಸಲ್ಲಿಸಿರುವುದನ್ನು ವಜಾಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಗುರುವಾರ ಹಿಂಪಡೆದಿದ್ದಾರೆ.

ರೇವಣ್ಣ ಪರ ವಕೀಲ ಬಿ ಎಂ ಗಿರೀಶ್‌ ಕುಮಾರ್‌ ಸಲ್ಲಿಸಿದ್ದ ಮೆಮೊ ದಾಖಲಿಸಿಕೊಂಡ ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠವು ಅರ್ಜಿ ವಿಲೇವಾರಿ ಮಾಡಿತು.

“ಅರ್ಜಿ ಹಿಂಪಡೆಯುವ ಸಂಬಂಧ ಸಲ್ಲಿಸಲಾದ ಮೆಮೊ ಪರಿಗಣಿಸಿ, ಅರ್ಜಿಯನ್ನು ಹಿಂಪಡೆಯಲು ಅನುಮತಿಸಲಾಗಿದೆ. ಕಾನೂನಿನ ಅನ್ವಯ ಆಕ್ಷೇಪಾರ್ಹವಾದ ಆದೇಶದ ಕುರಿತು ಕ್ರಮಕೈಗೊಳ್ಳುವ ಸ್ವಾತಂತ್ರ್ಯ ಅರ್ಜಿದಾರರಿಗಿದ್ದು, ಎಲ್ಲಾ ವಾದಗಳನ್ನು ಮುಕ್ತವಾಗಿರಿಸಲಾಗಿದೆ” ಎಂದು ಆದೇಶಿಸಿತು.

2025ರ ಜನವರಿ 17ರಂದು ನ್ಯಾಯಾಲಯವು ರೇವಣ್ಣ ವಿರುದ್ಧ ಆರೋಪ ನಿಗದಿ ಮಾಡದಂತೆ ವಿಚಾರಣಾಧೀನ ನ್ಯಾಯಾಲಯವನ್ನು ನಿರ್ಬಂಧಿಸಿತ್ತು. ಆನಂತರ ರೇವಣ್ಣ ಅವರ ಪರ ವಕೀಲರು ಹಲವು ಬಾರಿ ವಿನಾ ಕಾರಣ ವಿಚಾರಣೆ ಮುಂದೂಡಿಕೆ ಕೋರಿದ್ದರು. ಈ ಹಿನ್ನೆಲೆಯಲ್ಲಿ 2026ರ ಫೆಬ್ರವರಿ 5ರಂದು ಹೈಕೋರ್ಟ್‌ ಮಧ್ಯಂತರ ಆದೇಶ ತೆರವುಗೊಳಿಸಿ, ರೇವಣ್ಣಗೆ ಆಘಾತ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ರೇವಣ್ಣ ಅರ್ಜಿ ಹಿಂಪಡೆದಿದ್ದಾರೆ.

ಸಂತ್ರಸ್ತೆಯು ಪ್ರಜ್ವಲ್‌ ವಿರುದ್ಧ ಸಾಕ್ಷಿ ನುಡಿಯುವುದರಿಂದ ತಪ್ಪಿಸಲು ರೇವಣ್ಣ, ಅವರ ಪತ್ನಿ ಭವಾನಿ ಸೇರಿದಂತೆ ಒಂಭತ್ತು ಮಂದಿ ಸಂತ್ರಸ್ತೆಯನ್ನು ಅಪಹರಿಸಿದ್ದರು ಎಂದು ಆರೋಪಿಸಿ ಮೈಸೂರು ಗ್ರಾಮಾಂತರ ವಿಭಾಗದ ಕೆ ಆರ್‌ ಪೇಟೆ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 364A (ಅಪಹರಣ), 365 (ಬಚ್ಚಿಡುವ ಉದ್ದೇಶದಿಂದ ಅಪಹರಣ) ಮತ್ತು 34ರ (ಸಮಾನ ಉದ್ದೇಶ) ಅಡಿ ಪ್ರಕರಣ ದಾಖಲಿಸಿದ್ದರು.

ರೇವಣ್ಣ ಅವರ ಮನೆಯಲ್ಲಿ ಮನೆಕೆಲಸದವಳಾಗಿದ್ದ ಸಂತ್ರಸ್ತೆಯನ್ನು 2024ರ ಏಪ್ರಿಲ್‌ನಲ್ಲಿ ಅಪಹರಿಸಿ ಹುಣಸೂರು ತಾಲ್ಲೂಕಿನ ಫಾರ್ಮ್‌ಹೌಸ್‌ನಲ್ಲಿ ಬಚ್ಚಿಡಲಾಗಿತ್ತು. ಪ್ರಜ್ವಲ್‌ನನ್ನು ರಕ್ಷಿಸುವ ಉದ್ದೇಶದಿಂದ ಸಂತ್ರಸ್ತೆಯನ್ನು ಅಪಹರಿಸಲಾಗಿತ್ತು ಎಂದು ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿತ್ತು.

ಇದೇ ಪ್ರಕರಣದಲ್ಲಿ ರೇವಣ್ಣ 2024ರ ಮೇ 4ರಂದು ಬಂಧಿತರಾಗಿದ್ದರು. ಆನಂತರ ಜಾಮೀನು ನೀಡಲಾಗಿತ್ತು. ಭವಾನಿಗೆ ಹೈಕೋರ್ಟ್‌ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.