ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು 2006ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಮಾಡಿದ ಜಮೀನನ್ನು ಖರೀದಿಸಿದ ಆರೋಪದ ಮೇಲೆ 13 ಮಂದಿ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ಬುಧವಾರ ಆದೇಶಿಸಿದೆ.
ತಮ್ಮ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಎಂ ಯೋಗಾಮೂರ್ತಿ ಸೇರಿದಂತೆ 13 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಪ್ರಕರಣದ ಇತರೆ ಸಾಕ್ಷಿಗಳ ವಿಚಾರಣೆ ವೇಳೆ ಆಧಾರ ಸಿಕ್ಕರೆ ಮಾತ್ರ ಅರ್ಜಿದಾರರನ್ನು ಆರೋಪಿಗಳನ್ನಾಗಿಸಬಹುದು ಎಂದು ಪೀಠ ಇದೇ ವೇಳೆ ತಿಳಿಸಿದೆ.
ಪ್ರಕರಣದ ಹಿನ್ನೆಲೆ: 2006ರಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿಯಲ್ಲಿ ಬಿಡಿಎ ಬಡಾವಣೆಗಾಗಿ ವಶಪಡಿಸಿಕೊಂಡಿದ್ದ 3 ಎಕರೆ 34 ಗುಂಟೆ ಜಮೀನನ್ನು ನಿಯಮ ಬಾಹಿರವಾಗಿ ಡಿನೋಟಿಫೈ ಮಾಡಲಾಗಿದೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಎಂ ಎಸ್ ಮಹದೇವಸ್ವಾಮಿ ಅವರು ಲೋಕಾಯುಕ್ತಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ದೂರಿನ ಮೇರೆಗೆ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು 2019ರ ಜನವರಿಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ʼಬಿʼ ರಿಪೋರ್ಟ್ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪಿಸಿ ದೂರುದಾರ ಮಹಾದೇವಸ್ವಾಮಿ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು 2019ರ ಜುಲೈ 20ರಂದು ಬಿ ರಿಪೋರ್ಟ್ ರದ್ದುಪಡಿಸಿ, ಕುಮಾರಸ್ವಾಮಿ ಸೇರಿ 19 ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಆದೇಶ ಪ್ರಶ್ಮಿಸಿ ಯೋಗಾಮೂರ್ತಿ ಸೇರಿ 13 ಮಂದಿ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.