BJP MLA Basanagouda Patil Yatnal 
ಸುದ್ದಿಗಳು

ಸಚಿವ ದಿನೇಶ್‌ ಕುರಿತು ಅರ್ಧ ಪಾಕಿಸ್ತಾನ ಹೇಳಿಕೆ: ಯತ್ನಾಳ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನ್ಯಾಯಾಲಯದ ಆದೇಶ

Bar & Bench

“ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮನೇಲಿ ಅರ್ಧ ಪಾಕಿಸ್ತಾನವಿದೆ. ದೇಶವಿರೋಧಿ ಹೇಳಿಕೆ ನೀಡುವುದು ಚಟವಾಗಿದೆ” ಎಂದು ಆರೋಪಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರ ಪತ್ನಿ ತಬಸ್ಸುಮ್‌ ದಿನೇಶ್‌ ರಾವ್‌ ದಾಖಲಿಸಿದ್ದ ಖಾಸಗಿ ದೂರಿನ ಸಂಜ್ಞೇ ಪರಿಗಣಿಸಿರುವ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶ ಕೆ ಎಂ ಶಿವಕುಮಾರ್ ಅವರು ಆರೋಪಿ ಯತ್ನಾಳ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಲು ಆದೇಶಿಸಿದ್ದಾರೆ.

“ನನ್ನನ್ನು ದೇಶವಿರೋಧಿ ಎಂದು ಹೇಳಿರುವ ಯತ್ನಾಳ್‌ ಅವರ ಹೇಳಿಕೆಯಿಂದ ನನಗೆ ನೋವಾಗಿದೆ” ಎಂದು ಆರೋಪಿಸಿ ತಬಸ್ಸುಮ್‌ ಅವರು, ಯತ್ನಾಳ್‌ ವಿರುದ್ಧ ಐಪಿಸಿ ಸೆಕ್ಷನ್‌ 499 ಮತ್ತು 500ರ ಅಡಿಯಲ್ಲಿ 2024ರ ಏಪ್ರಿಲ್‌ 15ರಂದು ಖಾಸಗಿ ದೂರು ದಾಖಲಿಸಿದ್ದರು. ಈ ದೂರನ್ನು ಪರಿಗಣಿಸಿರುವ ನ್ಯಾಯಾಲಯವು ಆರೋಪಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಲು ಸಂಬಂಧಿಸಿ ಠಾಣಾ ಪೊಲೀಸರಿಗೆ ನಿರ್ದೇಶಿಸಿದೆ.

ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಲಾಗಿದೆ. ತಬಸ್ಸುಮ್‌ ಪರ ಹೈಕೋರ್ಟ್‌ ವಕೀಲ ಸೂರ್ಯ ಮುಕುಂದರಾಜ್‌ ಮತ್ತು ಬಿ ಸಂಜಯ ಯಾದವ್‌ ವಕಾಲತ್ತು ವಹಿಸಿದ್ದಾರೆ.