Madurai Bench of Madras HC , Christian cross
Madurai Bench of Madras HC , Christian cross 
ಸುದ್ದಿಗಳು

ಶಿಲುಬೆ ಇರುವುದು, ಚರ್ಚ್‌ಗೆ ಹೋಗುವುದನ್ನು ಆಧರಿಸಿ ಎಸ್‌ಸಿ ಪ್ರಮಾಣಪತ್ರ ರದ್ದುಗೊಳಿಸಲಾಗದು: ಮದ್ರಾಸ್ ಹೈಕೋರ್ಟ್

Bar & Bench

ಗೋಡೆ ಮೇಲೆ ಶಿಲುಬೆ ನೇತು ಹಾಕಿದ್ದಾರೆ, ಚರ್ಚ್‌ಗೆ ಹೋಗುತ್ತಾರೆ ಎಂದ ಮಾತ್ರಕ್ಕೆ ವ್ಯಕ್ತಿ ತಮ್ಮ ಮೂಲ ಶ್ರದ್ಧೆಯನ್ನು ಸಂಪೂರ್ಣ ತೊರೆದಿದ್ದಾರೆ ಎಂದಲ್ಲ. ಗೋಡೆಯಲ ಮೇಲೆ ಶಿಲುಬೆ ನೇತು ಹಾಕಿರುವುದು, ಚರ್ಚ್‌ಗೆ ಹೋಗುವುದನ್ನು ಆಧರಿಸಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ರದ್ದುಗೊಳಿಸಲಾಗದು ಎಂದು ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ತೀರ್ಪು ನೀಡಿದೆ (ಡಾ. ಪಿ ಮುನೀಶ್ವರಿ ಮತ್ತು ಸರ್ಕಾರದ ಕಾರ್ಯದರ್ಶಿ, ಆದಿ ದ್ರಾವಿಡ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆ ಮತ್ತಿತರರ ನಡುವಣ ಪ್ರಕರಣ).

ಅರ್ಜಿದಾರರ ಆಸ್ಪತ್ರೆಯ ಗೋಡೆಯ ಮೇಲೆ ಶಿಲುಬೆ ನೇತು ಹಾಕಿದ್ದರಿಂದ ಅವರು ಹಿಂದೂ ಪಲ್ಲನ್‌ ಸಮುದಾಯಕ್ಕೆ ಸೇರಿದವರು ಎಂಬ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಬೇಕು ಎಂದು ಅಧಿಕಾರಿಗಳು ಕೋರಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಎಂ. ದುರೈಸ್ವಾಮಿ ಅವರಿದ್ದ ಪೀಠ ನಡೆಸಿತು. ಅರ್ಜಿದಾರರು ಕ್ರೈಸ್ತ ಧರ್ಮ ಸ್ವೀಕರಿಸಿದ್ದಾರೆ ಎಂದು ತೀರ್ಮಾನಿಸಲು ಗೋಡೆಯ ಮೇಲೆ ಶಿಲುಬೆ ನೇತು ಹಾಕಿರುವುದು ಕಾರಣವಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ನ್ಯಾಯಾಲಯ ಹೇಳಿದ ಪ್ರಮುಖ ಅಂಶಗಳು:

  • ಅರ್ಜಿದಾರರು ತನ್ನ ಕ್ರೈಸ್ತ ಪತಿ ಮತ್ತು ಮಕ್ಕಳೊಂದಿಗೆ ಚರ್ಚ್‌ಗೆ ಹೋದರೂ ಸಹ, ಆಕೆ ತನ್ನ ಮೂಲ ಶ್ರದ್ಧೆಯನ್ನು ಸಂಪೂರ್ಣ ತ್ಯಜಿಸಿದ್ದಾರೆ ಎಂಬುದನ್ನು ಅದು ಸೂಚಿಸುವುದಿಲ್ಲ.

  • ಅರ್ಜಿದಾರೆ ತಮ್ಮ ಧರ್ಮಶ್ರದ್ಧೆ ತೊರೆದಿದ್ದಾರೆ ಅಥವಾ ಕ್ರೈಸ್ತ ಧರ್ಮ ಸ್ವೀಕರಿಸಿದ್ದಾರೆ ಎಂಬುದಕ್ಕೆ ಅಫಿಡವಿಟ್‌ನಲ್ಲಿ ಯಾವುದೇ ಸೂಚನೆಗಳಿಲ್ಲ.

  • ಅಧಿಕಾರಿಗಳ ಕೆಲಸ ಸಂವಿಧಾನ ಪ್ರೋತ್ಸಾಹ ನೀಡದ ಸಂಕುಚಿತ ಮನೋಭಾವವನ್ನು ಸೂಚಿಸುತ್ತದೆ.

  • ಒಂದು ನಿರ್ದಿಷ್ಟ ಸಮುದಾಯದ ಸದಸ್ಯರು ಇನ್ನೊಂದು ಸಮುದಾಯ ಅಥವಾ ಇನ್ನೊಂದು ಧರ್ಮವನ್ನು ಗೌರವಿಸುವುದನ್ನು ಪರಿಗಣಿಸಿ ಏನನ್ನೂ ಊಹಿಸಲಾಗುವುದಿಲ್ಲ. ನಿಜಕ್ಕೂ ಅದು ಸಾಂವಿಧಾನಿಕ ಅವಶ್ಯಕತೆಯಾಗಿದ್ದು ಬೇರೇನೂ ಅಲ್ಲ.

  • ಅಧಿಕಾರಿಗಳ ನಿರ್ಧಾರ ಮನಸೋ ಇಚ್ಛೆಯಿಂದ ಕೂಡಿದ್ದು ಯಾವುದೇ ಆಧಾರವಿಲ್ಲದ ಊಹೆಗಳನ್ನು ಅವಲಂಬಿಸಿದೆ. ಅರ್ಜಿದಾರರ ಜಾತಿ ಪ್ರಮಾಣ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಊರ್ಜಿತಗೊಳಿಸಬೇಕು.

  • ಪರಿಶೀಲನಾ ಸಮಿತಿಯ ಸದಸ್ಯರು ಪ್ರಸ್ತುತ ಪ್ರಕರಣದಲ್ಲಿ ಕಂಡುಬಂದದ್ದಕ್ಕಿಂತ ವಿಶಾಲ ಮನಸ್ಸಿನಿಂದ ವಿಷಯವನ್ನು ನೋಡುವುದು ಒಳ್ಳೆಯದು.

ಈ ಹಿನ್ನೆಲೆಯಲ್ಲಿ ಜಾತಿಪ್ರಮಾಣ ಪತ್ರ ರದ್ದತಿ ಕೋರಿಕೆಯನ್ನು ನ್ಯಾಯಾಲಯ ಮನ್ನಿಸಲಿಲ್ಲ. ಅರ್ಜಿದಾರರ ಪರವಾಗಿ ಸಿ ಮಯಿಲ್ ವಾಹನ ರಾಜೇಂದ್ರನ್‌ ಹಾಜರಿದ್ದರು. ಸರ್ಕಾರದ ಅಧಿಕಾರಿಗಳ ಪರವಾಗಿ ಹೆಚ್ಚುವರಿ ಸರ್ಕಾರಿ ಪ್ಲೀಡರ್‌ ಪಿ ತಿಲಕ್‌ ಕುಮಾರ್‌ ವಿಚಾರಣೆಯಲ್ಲಿ ಭಾಗವಹಿಸಿದ್ದರು.