ಹನುಮಾನ್ ಚಾಲೀಸಾ ಪಠಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸಂಸದೆ ನವನೀತ್ ರಾಣಾ ಮತ್ತವರ ಪತಿ ವಿಧಾನಸಭಾ ಸದಸ್ಯ ರವಿ ರಾಣಾ ಅವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.
ಅರ್ಜಿದಾರರು ತಲಾ ₹ 50,000 ಜಾಮೀನು ಬಾಂಡ್ ಸಲ್ಲಿಸಬೇಕು. ಮಾಧ್ಯಮಗಳೊಂದಿಗೆ ಮಾತನಾಡಬಾರದು. ಇಂಥದ್ದೇ ತಪ್ಪೆಸಗಬಾರದು ಇತ್ಯಾದಿ ಸೂಚನೆಗಳನ್ನು ವಿಶೇಷ ನ್ಯಾಯಾಧೀಶ ಆರ್ ಎನ್ ರೋಕಡೆ ನೀಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಬೆದರಿಕೆ ಹಾಕಿದ ನಂತರ ಈ ಇಬ್ಬರೂ ಪಕ್ಷೇತರ ಜನಪ್ರತಿನಿಧಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ದಂಪತಿ ಮೇಲೆ ಆರಂಭದಲ್ಲಿ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉಂಟುಮಾಡುವುದು), ಸೆಕ್ಷನ್ 34ರ (ಸಾಮಾನ್ಯ ಉದ್ದೇಶ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಸರ್ಕಾರಕ್ಕೆ ಸವಾಲು ಹಾಕಿ ಮುಖ್ಯಮಂತ್ರಿ ವಿರುದ್ಧ ಟೀಕೆ ಮಾಡಿದ್ದಕ್ಕಾಗಿ ಸೆಕ್ಷನ್ 124 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.