A1
A1
ಸುದ್ದಿಗಳು

[ಹನುಮಾನ್‌ ಚಾಲೀಸಾ] ದೇಶದ್ರೋಹ ಪ್ರಕರಣದಲ್ಲಿ ರಾಣಾ ದಂಪತಿ ಜಾಮೀನು ಅರ್ಜಿ ಕುರಿತು ನಾಳೆ ಮುಂಬೈ ನ್ಯಾಯಾಲಯ ತೀರ್ಪು

Bar & Bench

ತಮ್ಮ ವಿರುದ್ಧ ದಾಖಲಾದ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಕೋರಿ ಸಂಸತ್ ಸದಸ್ಯ ನವೀನ್ ರಾಣಾ ಮತ್ತು ಅವರ ಪತಿ ಮತ್ತು ಮಹಾರಾಷ್ಟ್ರ ವಿಧಾನಸಭೆ ಸದಸ್ಯ ರವಿ ರಾಣಾ ಅವರು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ಮೇ 2ರಂದು ಪ್ರಕಟಿಸಲಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಬೆದರಿಕೆ ಹಾಕಿದ ನಂತರ ದಂಪತಿಗಳನ್ನು ಏಪ್ರಿಲ್ 23ರಂದು ಮುಂಬೈ ಪೊಲೀಸರು ಬಂಧಿಸಿದ್ದರು.

ಶನಿವಾರ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ದಂಪತಿಗಳ ಮೇಲೆ ಆರಂಭದಲ್ಲಿ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉಂಟುಮಾಡುವುದು), ಸೆಕ್ಷನ್ 34ರ (ಸಾಮಾನ್ಯ ಉದ್ದೇಶ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಸರ್ಕಾರಕ್ಕೆ ಸವಾಲು ಹಾಕಿ ಮುಖ್ಯಮಂತ್ರಿ ವಿರುದ್ಧ ಟೀಕೆ ಮಾಡಿದ್ದಕ್ಕಾಗಿ ಸೆಕ್ಷನ್ 124 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಮುಂಬೈನ ಸೆವ್ರಿಯಲ್ಲಿರುವ ಜನಪ್ರತಿನಿಧಿಗಳ ವಿಶೇಷ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಏಪ್ರಿಲ್ 24ರಂದು ದಂಪತಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದರು.