Navneet Rana and Ravi Rana  Facebook
ಸುದ್ದಿಗಳು

[ಹನುಮಾನ್‌ ಚಾಲಿಸಾ ವಿವಾದ] ಕಾನೂನು, ಸುವ್ಯವಸ್ಥೆಗೆ ಧಕ್ಕೆ ಎಂದು ಸರ್ಕಾರವನ್ನು ವಜಾಗೊಳಿಸುವ ತಂತ್ರ: ಮುಂಬೈ ಪೊಲೀಸ್‌

ಮಹಾರಾಷ್ಟ್ರ ವಿಕಾಸ ಆಘಾಡಿ ಸರ್ಕಾರದ ಭಾಗವಾಗಿರುವ ಶಿವಸೇನೆಯು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂಬ ಭಾವನೆಯನ್ನು ಜನಸಾಮಾನ್ಯರಲ್ಲಿ ಮೊಳೆಯುವಂತೆ ಮಾಡಲು ನವನೀತ್‌ ಮತ್ತು ರವಿ ರಾಣಾ ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

Bar & Bench

ಹನುಮಾನ್‌ ಚಾಲಿಸಾ ಪಠಿಸುವ ಮೂಲಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಿ, ಆ ಮೂಲಕ ಮಹಾರಾಷ್ಟ್ರ ವಿಕಾಸ್‌ ಆಘಾಡಿ ಸರ್ಕಾರವನ್ನು ವಜಾ ಮಾಡಿಸುವ ತಂತ್ರವನ್ನು ಲೋಕಸಭಾ ಸದಸ್ಯೆ ನವನೀತ್‌ ರಾಣಾ ಮತ್ತು ಶಾಸಕ ರವಿ ರಾಣಾ ದಂಪತಿ ಪ್ರಯತ್ನಿಸಿದ್ದರು ಎಂದು ಸತ್ರ ನ್ಯಾಯಾಲಯಕ್ಕೆ ಶುಕ್ರವಾರ ಮುಂಬೈ ಪೊಲೀಸರು ವಿವರಿಸಿದ್ದಾರೆ.

ಆಘಾಡಿ ಸರ್ಕಾರದ ಭಾಗವಾಗಿರುವ ಶಿವಸೇನೆಯು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಮತ್ತು ಹಿಂದೂಗಳು ಮುಕ್ತವಾಗಿ ತಮ್ಮ ಧಾರ್ಮಿಕ ನಂಬಿಕೆಗಳನ್ನು ಆಚರಿಸಲು ಸಮಸ್ಯೆ ಉಂಟು ಮಾಡಲಾಗುತ್ತಿದೆ ಎಂಬ ಭಾವನೆಯನ್ನು ಜನಸಾಮಾನ್ಯರಲ್ಲಿ ಮೊಳೆಯುವಂತೆ ಮಾಡಲು ಹನುಮಾನ್‌ ಚಾಲಿಸಾ ಪಠಿಸುವ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ಪೊಲೀಸರು ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ.

ನವನೀತ್‌ ಮತ್ತು ರವಿ ರಾಣಾ ದಂಪತಿಯ ಜಾಮೀನು ಮನವಿ ವಿರೋಧಿಸಿ ಪೊಲೀಸರು ಸಲ್ಲಿಸಿರುವ 18 ಪುಟಗಳ ಅಫಿಡವಿಟ್‌ನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಖಾಸಗಿ ಬಂಗಲೆಗೆ ನುಗ್ಗಿ ಹನುಮಾನ್‌ ಚಾಲಿಸಾ ಪಠಿಸಲು ರಾಣಾ ದಂಪತಿ ಮುಂದಾದ ಹಿಂದಿನ ಮರ್ಮವನ್ನು ವಿವರಿಸಲಾಗಿದೆ.

ಮುಖ್ಯಮಂತ್ರಿ ಠಾಕ್ರೆ ಅವರ ಮನೆಗೆ ನುಗ್ಗಿ ಹನುಮಾನ್‌ ಚಾಲಿಸಾ ಹಾಡುವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ರಾಣಾ ದಂಪತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 124ಎ ಅಡಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಖಾಸಗಿ ಮನೆಯ ಮಾಲೀಕರ ಅನುಮತಿ ಪಡೆಯದೇ ಅವರ ಮನೆಗೆ ತೆರಳಿ ಹನುಮಾನ್‌ ಚಾಲಿಸಾದಂತಹ ಧಾರ್ಮಿಕ ಮಂತ್ರ ಪಠಿಸುವುದು ಅತಿಕ್ರಮ ಪ್ರವೇಶವಾಗುತ್ತದೆ ಎಂದು ಪೊಲೀಸರು ತಮ್ಮ ಪ್ರತಿಕ್ರಿಯೆಯಲ್ಲಿ ವಿವರಿಸಿದ್ದಾರೆ.