Senior Advocate Harish Salve
Senior Advocate Harish Salve 
ಸುದ್ದಿಗಳು

ಸಿಜೆಐ ಶಾಲೆಯಿಂದ ಗೊತ್ತು ಎಂಬ ಕಾರಣಕ್ಕೆ ಪ್ರಕರಣದ ಮೇಲೆ ಕರಿನೆರಳು ಕವಿಯಬಾರದು: ಅಮಿಕಸ್‌ ಸ್ಥಾನದಿಂದ ಹಿಂಸರಿದ ಸಾಳ್ವೆ

Bar & Bench

ದೇಶಾದ್ಯಂತ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿ ನೇಮಕಗೊಂಡಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ಆ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.

ಪ್ರಕರಣದಲ್ಲಿ ಸಾಳ್ವೆ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಲಾಗಿತ್ತು. ಪ್ರಕರಣದ ಸಂಬಂಧ ಸಾಳ್ವೆ ಹಾಗೂ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಮಾತ್ರ ಆಲಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ್‌ ರಾವ್‌ ಮತ್ತು ರವೀಂದ್ರ ಭಟ್‌ ಅವರಿದ್ದ ತ್ರಿಸದಸ್ಯ ಪೀಠವು ನಿನ್ನೆಯ ವಿಚಾರಣೆ ವೇಳೆ ಹೇಳಿತ್ತು.

“ಈ ನ್ಯಾಯಾಲಯ ಆಲಿಸಲಿರುವ ಅತ್ಯಂತ ಸೂಕ್ಷ್ಮ ಪ್ರಕರಣ ಇದಾಗಿದೆ. ಸಿಜೆಐ ನನಗೆ ಶಾಲಾ ಮತ್ತು ಕಾಲೇಜು ದಿನಗಳಿಂದ ಗೊತ್ತು ಎಂಬ ಕರಿನೆರಳಿನ ಅಡಿ ಸದರಿ ಪ್ರಕರಣ ನಿರ್ಧಾರವಾಗುವುದು ನನಗೆ ಇಷ್ಟವಿಲ್ಲ. ಅಲ್ಲದೇ ಇದರಲ್ಲಿ ಹಿತಾಸಕ್ತಿ ಸಂಘರ್ಷವಿದೆ ಎಂಬ ಆರೋಪವನ್ನೂ ಮಾಡಲಾಗಿದೆ” ಎಂದು ಸಾಳ್ವೆ ಅವರು ಅಮಿಕಸ್‌ ಕ್ಯೂರಿ ಜವಾಬ್ದಾರಿಯಿಂದ ಹಿಂದೆ ಸರಿಯುವ ವೇಳೆ ನ್ಯಾಯಾಲಯಕ್ಕೆ ತಿಳಿಸಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಿಜೆಐ ಬೊಬ್ಡೆ ಅವರು, ನಮ್ಮ ಸಂಬಂಧದಲ್ಲಿ ಯಾವುದೇ ರಹಸ್ಯವಿಲ್ಲ ಎಂದರು.

“ನಾವು ಪ್ರತಿನಿಧಿಸುವ ಕೈಗಾರಿಕೆಗಳ ಆಧಾರದಲ್ಲಿ ಪರಿಷತ್‌ ಇಬ್ಭಾಗವಾಗಿದೆ ಎಂಬುದು ನನಗೆ ತಿಳಿದಿರಲಿಲ್ಲ. ವಿನಯಪೂರ್ವಕವಾಗಿ ಪ್ರಕರಣದಿಂದ ಹಿಂದೆ ಸರಿಯಲು ನನಗೆ ಅವಕಾಶ ಮಾಡಿಕೊಡಿ. ನಾನು ವೇದಾಂತ ಸಂಸ್ಥೆಯನ್ನು ಪ್ರತಿನಿಧಿಸಿದ್ದು, ಅದನ್ನು ಉಲ್ಲೇಖಿಸುವುದಕ್ಕೂ ಹತ್ತು ನಿಮಿಷ ಮುಂಚಿತವಾಗಿ ನನಗೆ ವಿಷಯ ತಿಳಿಸಲಾಗಿದೆ. ಇಲ್ಲಿ ಇನ್ನೊಂದು ಉಪಕಥನ ನನಗೆ ಇಷ್ಟವಿಲ್ಲ. ಇಂದಿನ ಸಂಕಥನದ ಭಾಷೆಯೇ ಬೇರೆಯಾಗಿದೆ” ಎಂದು ಅವರು ಹೇಳಿದರು.

“ನಿಮ್ಮ ಭಾವನೆಗಳನ್ನು ನಾವು ಗೌರವಿಸುತ್ತೇವೆ ಮತ್ತು ಇದರಿಂದ ನಿಮಗೆ ನೋವಾಗಿರಬಹುದು. ನಿಮ್ಮ ಕೋರಿಕೆಗೆ ನಾವು ಅನುಮತಿಸುತ್ತೇವೆ. ಹಿರಿಯ ವಕೀಲರು ಏನು ಹೇಳಿದ್ದಾರೆ ಎಂದೂ ನಾನು ಗಮನಿಸಿದ್ದೇನೆ. ಆದರೆ, ಪ್ರತಿಯೊಬ್ಬರೂ ಅಭಿಪ್ರಾಯ ಹೊಂದಬಹುದು” ಎಂದು ಹೇಳಿದ ಸಿಜೆಐ ಬೊಬ್ಡೆ ಅವರು ಸಾಳ್ವೆ ಅವರಿಗೆ ಹಿಂದೆ ಸರಿಯಲು ಅನುಮತಿಸಿದರು.

ದೇಶಾದ್ಯಂತ ಕೋವಿಡ್‌ ವ್ಯಾಪಿಸಿರುವುದರಿಂದ ಆಸ್ಪತ್ರೆಗಳು ಆಮ್ಲಜನಕದ ಕೊರತೆ ಎದುರಿಸುತ್ತಿದ್ದು, ವೇದಾಂತ ಕಂಪೆನಿಯು ತಮಿಳುನಾಡಿನ ತೂತುಕುಡಿಯಲ್ಲಿರುವ ತನ್ನ ಸ್ಟೆರ್‌ಲೈಟ್‌ ಘಟಕದಲ್ಲಿ ಆಮ್ಲಜನಕ ಉತ್ಪಾದಿಸಲು ಅನುಮತಿಸಬೇಕು ಎಂದು ಗುರುವಾರ ವೇದಾಂತ ಪರವಾಗಿ ಸಾಳ್ವೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು ಎಂದು ವರದಿಯಾಗಿತ್ತು.

ಇಂದಿನ ವಿಚಾರಣೆಗೂ ಮುನ್ನ ಸ್ವಯಂಪ್ರೇರಿತ ಪ್ರಕರಣದಲ್ಲಿ ಮಧ್ಯಪ್ರವೇಶಕಾರರಾಗಿ ಮನವಿ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ಸಾಕೇತ್‌ ಗೋಖಲೆ ಅವರು ಸಾಳ್ವೆ ಅವರು ಅಮಿಕಸ್‌ ಕ್ಯೂರಿ ಸ್ಥಾನದಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿದ್ದರು.

“ಅಮಿಕಸ್ ಕ್ಯೂರಿಯ ಪಾತ್ರದ ವ್ಯಾಖ್ಯಾನವು ಹಾಗೆ ನೇಮಕಗೊಂಡ ವ್ಯಕ್ತಿಯು ನಿಷ್ಪಕ್ಷಪಾತವಾಗಿರಬೇಕೆಂಬುದನ್ನು ಸೂಚಿಸುತ್ತದೆ. ವಿಷಯಗಳ ಬಗ್ಗೆ ತಜ್ಞ ಜ್ಞಾನವನ್ನು ಹೊಂದಿರಬೇಕು ಎನ್ನುತ್ತದೆ. ಆದರೆ, ಅಮಿಕಸ್ ಕ್ಯೂರಿಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಮಾನ್ಯ ನ್ಯಾಯಾಲಯವು ನ್ಯಾಯಯುತವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಲು ಹರೀಶ್ ಸಾಳ್ವೆ ಪ್ರಸ್ತುತ ವಿಷಯದಲ್ಲಿ ಅಗತ್ಯವಾದ ಮೂಲಭೂತ ಷರತ್ತುಗಳನ್ನು ಪೂರೈಸುತ್ತಿಲ್ಲ...” ಎಂದು ಅವರು ಆಕ್ಷೇಪಿಸಿದ್ದರು. ಸಾಳ್ವೆ ಅವರು ವೇದಾಂತದ ಪರವಾಗಿ ಪ್ರತಿನಿಧಿಸುತ್ತಿರುವುದು ಈ ಆಕ್ಷೇಪಣೆಯ ತಿರುಳಾಗಿತ್ತು.