ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಜಾಮೀನು ನೀಡಿದೆ. ಸೊರೇನ್ ವಿರುದ್ಧ ಆಪಾದಿಸಲಾದ ಭೂ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಮೂರ್ತಿ ರೊಂಗೋನ್ ಮುಖೋಪಾಧ್ಯಾಯ ಅವರು ಶುಕ್ರವಾರ ಸೊರೇನ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ (ಹೇಮಂತ್ ಸೊರೆನ್ ವಿರುದ್ಧ ಜಾರಿ ನಿರ್ದೇಶನಾಲಯ).
ಈ ಹಿಂದೆ ನ್ಯಾಯಮೂರ್ತಿ ಮುಖೋಪಾಧ್ಯಾಯ ಅವರು ಸೊರೇನ್ ತನ್ನ ಚಿಕ್ಕಪ್ಪನ ಅಂತ್ಯಕ್ರಿಯೆಯ ವಿಧಿಗಳಲ್ಲಿ ಪಾಲ್ಗೊಳ್ಳಲು ಮಧ್ಯಂತರ ಜಾಮೀನಿನ ಮನವಿಯನ್ನು ನಿರಾಕರಿಸಿದ್ದರು. ಅಂತಹ ಮನವಿ ಅನುಮತಿಸಲು ಯಾವುದೇ ಅಸಾಧಾರಣ ಸನ್ನಿವೇಶವನ್ನು ಸೊರೇನ್ ನಿರೂಪಿಸಿಲ್ಲ ಎಂದು ಅವರು ಹೇಳಿದ್ದರು. ಆದರೆ ಇಂದು ಅವರು ನಿಯತ ಜಾಮೀನು ಅರ್ಜಿಗೆ ಅನುಮತಿಸಿದ್ದಾರೆ.
ರಾಜ್ಯದಲ್ಲಿ ಭೂ ಮಾಫಿಯಾದಿಂದ ಭೂಮಿಯ ಮಾಲೀಕತ್ವದ ಅಕ್ರಮ ವರ್ಗಾವಣೆ ನಡೆಯುತ್ತಿದೆ ಎಂದು ಆಪಾದಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಸೊರೇನ್ ಅವರನ್ನು ಬಂಧಿಸಿತ್ತು. ಈ ಹಿನ್ನೆಲೆಯಲ್ಲಿ ಸೊರೇನ್ ಜನವರಿ 31 ರಂದು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಅಕ್ರಮ ಹಣ ವರ್ಗಾವಣೆ ಆರೋಪವನ್ನು ಸೊರೆನ್ ನಿರಾಕರಿಸಿದ್ದರು. ನಕಲಿ ದಾಖಲೆಗಳ ಆಧಾರದಲ್ಲಿ ಇ ಡಿ ತನ್ನನ್ನು ಬಂಧಿಸಿದೆ ಎಂದು ಅವರು ಹೇಳಿದ್ದರು.
ಇ ಡಿ ಅವರ ಬಂಧನವನ್ನು ಪ್ರಶ್ನಿಸಿ ಸೊರೇನ್ ಸಲ್ಲಿಸಿದ್ದ ಅರ್ಜಿಯನ್ನು ಮೇ 3 ರಂದು ಹೈಕೋರ್ಟ್‌ನ ವಿಭಾಗೀಯ ಪೀಠವು ವಜಾಗೊಳಿಸಿತ್ತು. ಇದರ ವಿರುದ್ಧ ಸೊರೇನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಮೊದಲು ಜಾರ್ಖಂಡ್ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಸೂಚಿಸಿತ್ತು.
ಜಾಮೀನು ಆದೇಶದ ಪ್ರತಿಯನ್ನು ನಿರೀಕ್ಷಿಸಲಾಗಿದೆ.