Supreme Court, Nuh violence 
ಸುದ್ದಿಗಳು

ನೂಹ್‌ ಹಿಂಸಾಚಾರ: ದೆಹಲಿಯಲ್ಲಿ ವಿಎಚ್‌ಪಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗಳ ಬಗ್ಗೆ ಸುಪ್ರೀಂನಲ್ಲಿ ಮನವಿ ಸಲ್ಲಿಕೆ

ಹರಿಯಾಣದ ನೂಹ್‌ನಲ್ಲಿ ನಡೆದ ಕೋಮು ಹಿಂಸಾಚಾರವನ್ನು ಪ್ರತಿಭಟಿಸಿ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಲು ವಿಎಚ್‌ಪಿ ಮುಂದಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Bar & Bench

ಹರಿಯಾಣದ ನೂಹ್ ಜಿಲ್ಲೆಯಲ್ಲಿ ಸೋಮವಾರ ಭುಗಿಲೆದ್ದ ಕೋಮು ಹಿಂಸಾಚಾರದ ಕುರಿತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಬುಧವಾರ ನಡೆಯಲಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರತಿಭಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ತುರ್ತಾಗಿ ಮನವಿಯೊಂದನ್ನು ಬುಧವಾರ ಉಲ್ಲೇಖಿಸಲಾಯಿತು.

 ಹಿರಿಯ ವಕೀಲ ಸಿ ಯು ಸಿಂಗ್ ಅವರು ಮನವಿಯ ಕುರಿತು ಮೊದಲಿಗೆ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ನೇತೃತ್ವದ ಪೀಠದ ಮುಂದೆ ಉಲ್ಲೇಖಿಸಿದರು.

"ದ್ವೇಷ ಭಾಷಣದ ಕುರಿತಾದ ಶಾಹೀನ್ ಅಬ್ದುಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಹೊಸ ಮದ್ಯಂತರ  ಅರ್ಜಿ ಆಗಿದೆ. ನಿನ್ನೆ ಹರಿಯಾಣದ ನೂಹ್ ನಲ್ಲಿ ನಡೆದ ಘಟನೆಗೆ ಪ್ರತಿಕ್ರಿಯೆಯಾಗಿ ದೆಹಲಿಯಲ್ಲಿ 27 ಪ್ರತಿಭಟನಾ ಸಭೆಗಳನ್ನು ಯೋಜಿಸಲಾಗಿದೆ ಎಂದು ಹೇಳಲಾಗಿದೆ" ಎಂದು ಸಿಂಗ್ ಪೀಠದ ಮುಂದೆ ಮನವಿಯನ್ನು ಉಲ್ಲೇಖಿಸಲು ಅಹವಾಲು ಇರಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಬೋಸ್ ಅವರು ತುರ್ತು ವಿನಂತಿಗೆ ತಾವು ಅವಕಾಶ ನೀಡಬಹುದೇ ಎಂಬ ಬಗ್ಗೆ ತಮಗೆ ಖಚಿತತೆ ಇಲ್ಲ ಎಂದರು. ಹಾಗೆ ಮಾಡುವ ಅಧಿಕಾರವು ಸಿಜೆಐ ಅವರಿಗೆ ಮಾತ್ರವೇ ಇದೆ ಎಂದರು.

ಮುಂದುವರೆದು, “ನಾವು ಉಲ್ಲೇಖಗಳನ್ನು ತೆಗೆದುಕೊಳ್ಳಬಹುದೇ ಎಂಬ ಬಗ್ಗೆ ಸಿಜೆಐ ಅವರಿಂದ  ಖಚಿತಪಡಿಸಿ. (ನಂತರ) ನಾವು ಅವಕಾಶ ಕಲ್ಪಿಸುತ್ತೇವೆ,” ಎಂದು ಸಿಂಗ್ ಅವರಿಗೆ ತಿಳಿಸಿದರು.

ಇದಕ್ಕೆ ಸಮ್ಮತಿಸಿದ ಸಿಂಗ್‌ ಅವರು ಆರ್ಟಿಕಲ್ 370 ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಸಜ್ಜಾಗಿದ್ದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ಮುಂದೆ ವಿಷಯದ ಬಗ್ಗೆ ಪ್ರಸ್ತಾಪಿಸಿ ಸ್ಪಷ್ಟತೆ ಕೋರಿದರು.

ಅಗ ಸಿಜೆಐ ಅವರು ಇಮೇಲ್ ಕಳುಹಿಸಿದರೆ ವಿಷಯವನ್ನು ಪಟ್ಟಿ ಮಾಡಲಾಗುವುದು ಎಂದು ಸಿಂಗ್‌ ಅವರಿಗೆ ಭರವಸೆ ನೀಡಿದರು. ಈ ಕುರಿತಾದ ಪ್ರಮಾಣಿತ ಕಾರ್ಯಾಚರಣಾ ವಿಧಾನದ (ಎಸ್‌ಒಪಿ) ಬಗ್ಗೆ ಈ ವೇಳೆ ಸಿಜೆಐ ಅವರು ಸಿಂಗ್‌ ಅವರಿಗೆ ಮಾಹಿತಿಯನ್ನೂ ನೀಡಿದರು. ಅದರಂತೆ ಎಸ್‌ಒಪಿ ಅನುಸರಿಸಲು ಸೂಚಿಸಿ ತಾವು ಪ್ರಕರಣ ಪಟ್ಟಿ ಮಾಡಲು ದಿನಾಂಕ ನೀಡುವುದಾಗಿ ತಿಳಿಸಿದರು. ಸಿಂಗ್ ಪ್ರಕರಣವನ್ನು ತುರ್ತಾಗಿ ಪಟ್ಟಿ ಮಾಡಲು ಕೋರಿ ತಾವು ತುರ್ತಾಗಿ ಇಮೇಲ್‌ ಕಳುಹಿಸುವುದಾಗಿ ತಿಳಿಸಿದರು. ಪ್ರಕರಣವು ಗಂಭೀರವಾದದ್ದು ಎಂದು ಪೀಠಕ್ಕೆ ಹೇಳಿದರು.