Supreme Court 
ಸುದ್ದಿಗಳು

ಜಗತ್ತು ನಮ್ಮ ಸುಪ್ರೀಂಕೋರ್ಟಿನ ಮೇಲೆ ಭರವಸೆ ಕಳೆದುಕೊಂಡಿದೆಯೇ?

'ಕಳೆದ ಆರು ವರ್ಷಗಳಲ್ಲಿ, ನ್ಯಾಯಾಲಯವು ರಾಜಕೀಯ ಕಾರ್ಯಾಂಗದೊಂದಿಗೆ ಹೊಂದಿಕೆ, ಹೊಂದಾಣಿಕೆ ಮಾಡಿಕೊಳ್ಳುವ ವಿವರಿಸಲಾಗದ ಹುರುಪನ್ನು ಪ್ರದರ್ಶಿಸಿದೆ,' ಎನ್ನುತ್ತಾರೆ ನ್ಯಾಯವಾದಿ ಸಂಜಯ್‌ ಘೋಷ್.

Bar & Bench

ವಿದೇಶದ ಸಾಂವಿಧಾನಿಕ ನ್ಯಾಯಾಲಯವೊಂದು ನಮ್ಮದೇ ಸುಪ್ರೀಂಕೋರ್ಟ್‌ ತೀರ್ಪನ್ನು ಉಲ್ಲೇಖಿಸಿ ತೀರ್ಪು ನೀಡಿದಾಗಲೆಲ್ಲಾ ನನ್ನ ಹೃದಯ ಹೆಮ್ಮೆಯಿಂದ ತುಂಬಿಬರುತ್ತಿತ್ತು. 70ರ ದಶಕದ ಆರಂಭದ ಕಾಲಘಟ್ಟದಲ್ಲಿ ದೆಹಲಿಯ ಚಳಿಗಾಲದಲ್ಲಿ ಬೆಚ್ಚಗೆ ರೂಪಗೊಂಡ ‘ಮೂಲ ರಚನೆʼ ಎನ್ನುವಂತಹ ಸಿದ್ಧಾಂತವನ್ನು ಕಲ್ಪಿಸಿಕೊಳ್ಳಿ. ಅದು ಉದಯೋನ್ಮುಖ ಆಫ್ರಿಕನ್ ರಾಜ್ಯಗಳ ನ್ಯಾಯಶಾಸ್ತ್ರವನ್ನು ಫಲವತ್ತಾಗಿಸಲೊಸುಗ ಅರಬ್ಬೀ ಸಮುದ್ರವನ್ನು ದಾಟಿ ಸಾಗಿತು! ನರೇಂದ್ರ ಮಂಡಲದ (ಚೇಂಬರ್ ಆಫ್ ಪ್ರಿನ್ಸಸ್‌) ತಾತ್ಕಾಲಿಕ ನಿವಾಸಿಯಾಗಿ ತನ್ನ ಪ್ರಯಾಣ ಆರಂಭಿಸಿದ ನ್ಯಾಯಾಲಯದ ಪ್ರಭಾವ ಆ ರೀತಿಯದ್ದು.

ಇತ್ತೀಚೆಗೆ ಓದಿದ ಲೇಖನವೊಂದರಲ್ಲಿ ವಿದೇಶದ ನ್ಯಾಯಾಲಯಗಳು ಭಾರತೀಯ ಪ್ರಕರಣಗಳ ಉಲ್ಲೇಖ ಕಡಿಮೆ ಮಾಡುತ್ತಿರುವ ಬಗ್ಗೆ ಓದಿದಾಗ ನನ್ನ ಹೃದಯ ದುಃಖದ ಮಡುವಾಯಿತು! ಭಾರತೀಯರ ಹೃದಯ ತುಂಬಿ ಬರಲು ವಿದೇಶಿ ಮೂಲದ ಉದಾರ ಉಲ್ಲೇಖಕ್ಕಿಂತ ಇನ್ನೇನು ತಾನೆ ಬೇಕು. ಅದರಲ್ಲಿಯೂ, ತುಂಬಾ ಬೆಳ್ಳಗಿರುವುದು ಎಂದರೆ ತುಂಬಾ ಉತ್ತಮ ಎನ್ನುವ ಪೈಕಿ ನಾವು! ಕಲ್ಕತ್ತೆಯಲ್ಲಿ ಸಾವನ್ನಪ್ಪುತ್ತಿದ್ದವರನ್ನು ಅನಾಮಧೇಯವಾಗಿ ಹಲವು ವರ್ಷಗಳ ಕಾಲ ಆರೈಕೆ ಮಾಡುತ್ತಿದ್ದ ಆಲ್ಬೇನಿಯಾದ ಸೊರಗಿದ, ಕುಗ್ಗಿದ ದೇಹದ ಆ ಸನ್ಯಾಸಿನಿಯನ್ನು (ಮದರ್‌ ಥೆರೆಸಾ) ನಮ್ಮ ದೇಶ ಗುರುತಿಸಲು ಆಕೆಗೆ ನೊಬೆಲ್‌ ಪ್ರಶಸ್ತಿಯೇ ಬರಬೇಕಾಯಿತು. (ಸತ್ಯಜಿತ್‌) ರೇ ಅವರ ಸಿನಿಮಾ ಮೋಡಿ ಅಥವಾ ಅಮರ್ತ್ಯ ಸೇನ್‌ ಅವರ ಸೈದ್ಧಾಂತಿಕ ಪ್ರೌಢಿಮೆ ವಿಚಾರದಲ್ಲೂ ಇದೇ ಆಗಿದೆ.

ಜಗತ್ತು ನಿಜಕ್ಕೂ ನಮ್ಮ ಸುಪ್ರೀಂ ಕೋರ್ಟಿನ ಮೆಲೆ ಭರವಸೆ ಕಳೆದುಕೊಂಡಿದೆಯೇ?

(ನ್ಯಾಯಲೋಕದ) ದಂತಕತೆ ರುತ್ ಗಿನ್ಸ್‌ಬರ್ಗ್‌ ಅವರ ಸ್ಥಾನ ತುಂಬುವ ಪ್ರಕ್ರಿಯೆಗೆ (ಅಮೆರಿಕ ಅಧ್ಯಕ್ಷ) ಟ್ರಂಪ್‌ ಮುಂದಾಗಿದ್ದನ್ನು ಇಡೀ ಜಗತ್ತು ಉಸಿರು ಬಿಗಿಹಿಡಿದು ನೋಡಿದೆ. ನಿಕಟ ಸ್ಪರ್ಧೆಯ ಸಂದರ್ಭದಲ್ಲಿ ಪಕ್ಷಪಾತಿ ಸುಪ್ರೀಂಕೋರ್ಟ್ ಟ್ರಂಪ್ ಪರವಾಗಿ ʼಬುಷ್ ಮತ್ತು ಗೋರ್ʼ ನಡುವಣ ಪ್ರಕರಣವನ್ನೇ ಮರುಕಳಿಸುವಂತೆ ಮಾಡುತ್ತದೇನೋ ಎಂದೆಣಿಸಲಾಗಿತ್ತು. ಆದರೂ, ಕೆಲ ವಾರಗಳ ಹಿಂದೆ ಟೀಮ್ ಟ್ರಂಪ್ ನ್ಯಾಯಾಲಯಕ್ಕೆ ಮೊರೆ ಹೋದಾಗ ನ್ಯಾಯಾಲಯ ಎಷ್ಟು ಸಂಯಮದಿಂದ ವರ್ತಿಸಿತು ಎಂಬುದನ್ನು ನಾವು ನೋಡಿದ್ದೇವೆ. ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಮಂಗಳವಾರದ ನಂತರ ಸ್ವೀಕರಿಸಲಾದ ಅಂಚೆ ಮತಪತ್ರಗಳನ್ನು ಬೇರ್ಪಡಿಸಲು ಸೂಚಿಸಿದ ನ್ಯಾಯಾಲಯದ ಆದೇಶ ಮಾತ್ರವೇ ಅವರಿಗೆ ದೊರೆತಿದ್ದು.

ತನ್ನ ಸಾಂಸ್ಥಿಕ ಸಮಗ್ರತೆ ಮತ್ತು ಸಾರ್ವಜನಿಕ ನಿಲುವನ್ನು ಕಾಯ್ದುಕೊಳ್ಳುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಅದನ್ನು ಮಾತನಾಡಲೂ ಆಗದು ಅಥವಾ ನ್ಯಾಯಾಂಗ ನಿಂದನೆ ಭೀತಿಯಿಂದ ತಳ್ಳಿಹಾಕಲೂ ಆಗದು. ದಕ್ಷಿಣ ಏಷ್ಯಾದ ಸರ್ವೋಚ್ಛ ನ್ಯಾಯಾಲಯಗಳು ಉಪಖಂಡದಲ್ಲಾಗುತ್ತಿರುವ ಸಾಂಕ್ರಾಮಿಕ ರಾಜಕಾರಣಕ್ಕೆ ತಮ್ಮನ್ನು ಒಡ್ಡಿಕೊಂಡಿವೆ. ಪಾಕಿಸ್ತಾನದ ಸುಪ್ರೀಂಕೋರ್ಟ್ ಅತ್ಯಂತ ಚಂಚಲವಾಗಿದೆ. ಬೇಗಂ ನುಸ್ರತ್ ಭುಟ್ಟೋ ಮತ್ತು ಪಾಕಿಸ್ತಾನ ಒಕ್ಕೂಟ ನಡುವಣ ಪ್ರಕರಣವನ್ನೇ ನೆನೆಸಿಕೊಳ್ಳಿ? ಮಿಲಿಟರಿ ಆಡಳಿತದ ದಿನಗಳಿಂದಲೂ, ಸೇನಾ ಕಾನೂನನ್ನು ನ್ಯಾಯಸಮ್ಮತವಾಗಿ ಅಪ್ಪಿಕೊಳ್ಳಲು ʼಅನಿವಾರ್ಯತೆ' ಸಿದ್ಧಾಂತದ ಬಣ್ಣ ಹಚ್ಚಿದಾಗ, ನಿಜಕ್ಕೂ ಪ್ರಜಾಪ್ರಭುತ್ವದಿಂದ ಚುನಾಯಿತವಾದ ಸರ್ಕಾರಗಳನ್ನು ಉರುಳಿಸುವಾಗ - ಇತ್ತೀಚಿಗೆ ಪ್ರಧಾನ ಮಂತ್ರಿ ನವಾಜ್ ಷರೀಫ್ ನೈಜ ಮುಸ್ಲಿಂ ಅಲ್ಲ ಎಂಬ ಕಾರಣಕ್ಕೆ ಅನರ್ಹಗೊಳಿಸಿದಾಗ - ಆ ನ್ಯಾಯಾಲಯ ರಾಜಕೀಯ ಲೆಕ್ಕಾಚಾರದೊಟ್ಟಿಗೆ ಸರಸವಾಡಿರುವುದು ಮತ್ತು ಅತ್ಯಂತ ಬಹಿರಂಗವಾಗಿಯೇ ರಾಜಕೀಯ ವ್ಯವಸ್ಥೆಯೊಂದಿಗೆ ತಿಕ್ಕಾಟಕ್ಕಿಳಿದಿದ್ದು ಕಂಡುಬರುತ್ತದೆ.

ಭ್ರಷ್ಟಾಚಾರದ ಆರೋಪದ ಮೇಲೆ ಸರಿಯಾದ ವಿಚಾರಣೆ ಕೂಡ ನಡೆಸದೆ ಗಡಿಪಾರಾದ ಬಾಂಗ್ಲಾದೇಶದ ಮೊದಲ ಹಿಂದೂ ಮುಖ್ಯ ನ್ಯಾಯಾಧೀಶರನ್ನು ಕೆಟ್ಟದಾಗಿ ನಡೆಸಿಕೊಂಡ ರೀತಿ ಮತ್ತು 'ಮುಕ್ತಿ ಜುದೋ' ವೇಳೆ ಪಾಕಿಸ್ತಾನದ ಸಹಯೋಗಿಗಳಾಗಿ ಸೇವೆ ಸಲ್ಲಿಸಿದ್ದಕ್ಕಾಗಿ ಹಸೀನಾ ಅಪಾ ಅವರ ರಾಜಕೀಯ ವಿರೋಧಿಗಳಿಗೆ ಮರಣದಂಡನೆ ಶಿಕ್ಷೆ ನೀಡಿದ್ದನ್ನು ಕಂಡಾಗ ಬಾಂಗ್ಲಾದೇಶ ಸುಪ್ರೀಂಕೋರ್ಟ್‌ನ ಗುಣ ಕೂಡ ಪರೀಕ್ಷೆಗೊಳಗಾಗುತ್ತದೆ.

Justice Sushila Karki, Justice Surendra Kumar Sinha

ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಸುಶೀಲಾ ಕರ್ಕಿ ಅವರನ್ನು ನೇಮಿಸುವ ಮೂಲಕ ನೇಪಾಳ ತನ್ನ ದೊಡ್ಡಣ್ಣನನ್ನು (ಭಾರತ) ಹಿಂದಿಕ್ಕಿತು. ಆದರೆ ನ್ಯಾ. ಸುಶೀಲಾ ಅವರು ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳ ವಿಚಾರಣೆಗೆ ಮುಂದಾದಾಗ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ನೇಪಾಳದ ಸಂಸತ್ತು ಮುಂದಾಯಿತು. ಆಡಳಿತ ಪಕ್ಷದ ಬಗ್ಗೆ ನ್ಯಾಯಮೂರ್ತಿ ಪೂರ್ವಾಗ್ರಹಪೀಡಿತರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದವು.

ಕನ್ಯಾಕುಮಾರಿಯ ದಕ್ಷಿಣದ ದ್ವೀಪ ರಾಷ್ಟ್ರಗಳ ಉನ್ನತ ನ್ಯಾಯಾಲಯಗಳು ಆ ದೇಶಗಳಲ್ಲಿನ ರಾಜಕೀಯ ಪ್ರಕ್ರಿಯೆಗಳಿಂದ ಪ್ರಭಾವಿತವಾಗಿವೆ. ರಾಜಕೀಯ ಭಿನ್ನಮತೀಯರನ್ನು ಬಿಡುಗಡೆ ಮಾಡುವ ನ್ಯಾಯಾಲಯದ ಆದೇಶವನ್ನು ಪಾಲಿಸಲು ‘ಅಧ್ಯಕ್ಷ ಅಬ್ದುಲ್ಲಾ ಯಮೀನ್ ನಿರಾಕರಿಸಿ ತುರ್ತು ಪರಿಸ್ಥಿತಿ ಹೇರಿದ ನಂತರ ಮಾಲ್ಡೀವ್ಸ್ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಬ್ದುಲ್ಹಾ ಸಯೀದ್ ಮತ್ತು ನ್ಯಾಯಮೂರ್ತಿ ಅಲಿ ಹಮೀದ್ ಅವರನ್ನು ಹೇಗೆ ಬಂಧಿಸಲಾಯಿತು ಎಂದು ಹಲವರು ನೆನಪಿಸಿಕೊಳ್ಳಬಹುದು.

ಸಂವಿಧಾನದ ಚೈತನ್ಯವನ್ನು ಉಳಿಸಿಕೊಳ್ಳಲೋ ಅಥವಾ ಅದನ್ನು ಹತ್ತಿಕ್ಕಲು ಸಹಕರಿಸುತ್ತಲೋ ಭಾರತೀಯ ಉಪಖಂಡದ ಸರ್ವೋಚ್ಚ ನ್ಯಾಯಾಲಯಗಳು ತಮ್ಮ ಕೈಗೆ ಮಣ್ಣೊತ್ತಿಕೊಂಡು ʼರಾಜಕೀಯ ಅಖಾಡʼಕ್ಕೆ ಇಳಿದಿವೆ. ಬೇಸರದ ಸಂಗತಿ ಎಂದರೆ ನಿರ್ಲಿಪ್ತವಾಗಿ ಉಳಿಯುವುದೀಗ ಆಯ್ಕೆಯಾಗಿಲ್ಲ.

ಇಂತಹ ಪ್ರಕ್ಷುಬ್ಧ ಸ್ಥಿತಿಯಲ್ಲಿ ಭಾರತ ಈವರೆಗೆ ಶಾಂತವಾಗಿ ಉಳಿದಿತ್ತು. ನಮ್ಮ ಸುಪ್ರೀಂಕೋರ್ಟ್‌ ಇಷ್ಟು ವರ್ಷಗಳ ಕಾಲ ಚಾಣಾಕ್ಷತೆಯಿಂದ ತನಗೆ ತಾನೇ ಲಕ್ಷ್ಮಣರೇಖೆಯನ್ನು ಎಳೆದುಕೊಂಡು ಅದನ್ನು ಗೌರವಿಸಲೂ, ಮೀರದಿರಲೂ ಶ್ರಮಿಸಿದೆ. ದಕ್ಷಿಣ ಏಷ್ಯಾದ ಇತರ ಸಾಂವಿಧಾನಿಕ ನ್ಯಾಯಾಲಯಗಳಂತೆ ತನ್ನ ಕೈಗೆ ಕೊಳಕು ಮೆತ್ತಿಕೊಳ್ಳಲು ಸಿದ್ಧವಿಲ್ಲ ಎಂಬ ಸಂದೇಶಗಳನ್ನು ಬಹಿರಂಗವಾಗಿ ರವಾನಿಸಲು "ರಾಜಕೀಯ ಮೆಳೆ" (The political thicket) ಎನ್ನುವಂತಹ ತತ್ವಗಳನ್ನು ಬಳಸಿಕೊಂಡಿತು.

Supreme Court Corridor

ನಮ್ಮ ಸುಪ್ರೀಂಕೋರ್ಟ್ ರಾಜಕೀಯ ವಿಷಯಗಳಿಂದ "ಪ್ರತ್ಯೇಕತೆಯ ಗೋಡೆ" ಕಟ್ಟಿಕೊಂಡಿದೆ ಎಂಬ ಅಭಿಪ್ರಾಯದಲ್ಲಿ ಒಂದು ಕ್ಷಣವೂ ಇರಬೇಕಿಲ್ಲ. ನ್ಯಾಯಾಲಯದ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದಕ್ಕಾಗಿ ತಾನು ʼಇಚ್ಛೆಯಿಲ್ಲದʼ ಮಧ್ಯವರ್ತಿ ಎಂದು ತೋರಿಸಿಕೊಳ್ಳುವಲ್ಲಿ ಈವರೆಗೆ ಅದು ಯಶಸ್ವಿಯಾಗಿದೆ ಜೊತೆಗೆ ತನ್ನ ರಾಜಕೀಯ ಯಾನಗಳನ್ನು ಸಕ್ರಮಗೊಳಿಸುವ ಚತುರ ಸಾಂವಿಧಾನಿಕ ತತ್ವಗಳನ್ನು ರೂಪಿಸುವಲ್ಲಿ ಸಮರ್ಥವಾಗಿದೆ ಕೂಡ.

ಬೊಮ್ಮಾಯಿ ಪ್ರಕರಣದ ಉದಾಹರಣೆಯನ್ನೇ ತೆಗೆದುಕೊಳ್ಳಿ, ಪವಿತ್ರ ಒಡಂಬಡಿಕೆ ಎಂದೇ ಭಾವಿಸಲಾಗುವ ಮುಖ್ಯ ಕಾರ್ಯನಿರ್ವಾಹಕರಿಗೆ ನೀಡುವ ಸಚಿವ ಸಮಿತಿಯ ಸಲಹೆಯನ್ನು ನ್ಯಾಯಾಂಗವು ಅತಿಕ್ರಮಿಸುತ್ತಿದೆ ಎನ್ನುವ ವಾದವನ್ನು ವಿವರಣೆ ನೀಡುವ ಮೂಲಕ ನ್ಯಾಯಾಂಗವು ಚಾಕಚಕ್ಯತೆಯಿಂದ ಪರಿಹರಿಸಿಕೊಂಡಿತು. ನ್ಯಾಯಾಲಯವು ಸಮಿತಿ ನೀಡಿರುವ ನಿರ್ಣಯವನ್ನು ಪ್ರಶ್ನಿಸುವುದಿಲ್ಲ ಬದಲಿಗೆ ನಿರ್ಣಯ ಕೈಗೊಂಡ ಪ್ರಕ್ರಿಯೆಯನ್ನಷ್ಟೇ ಪರಿಶೀಲಿಸುತ್ತದೆ; ಸಚಿವ ಸಮಿತಿಯು ಚುನಾಯಿತ ಸರ್ಕಾರವನ್ನು ವಜಾಗೊಳಿಸಲು ತುರ್ತು ಅಧಿಕಾರವನ್ನು ಬಳಸಲು ಸಲಹೆ ನೀಡುವುದಕ್ಕೆ ಆಧರಿಸಿದ ವಸ್ತುವಿಷಯದ ಸಮರ್ಥನೀಯತೆಯನ್ನು ಮಾತ್ರವೇ ಪರೀಕ್ಷಿಸಲಿದೆ ಎಂದು ಅದು ವಿವರಣೆಯನ್ನು ನೀಡಿತ್ತು.

ಹೀಗೆ, ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ರಾಜಕೀಯ ವಿಷಯಗಳ ಇತ್ಯರ್ಥಕ್ಕಾಗಿ ಆಹ್ವಾನಿಸುವುದು ರೂಢಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಗಮನಿಸುವುದಾದರೆ, ನ್ಯಾಯಮೂರ್ತಿ ಪುಂಚಿ ಅವರ ನವೀನ ಪರಿಕಲ್ಪನೆಯಾದ ‘ಕಾಂಪೋಸಿಟ್ ಫ್ಲೋರ್ ಟೆಸ್ಟ್’ ಎನ್ನುವುದು ಭಾರತದ ಸಂಸದೀಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅವಿಶ್ವಾಸ ಗೊತ್ತುವಳಿ ಹಾಗೂ ವಿಶ್ವಾಸಮತಯಾಚನೆಯು ಏಕಕಾಲಕ್ಕೇ ಮಂಡನೆಯಾಗುವಂತೆ ಮಾಡುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಜಗದಂಬಿಕಾ ಪಾಲ್‌ ಅವರ ಸರ್ಕಾರ ಒಂದೆಡೆ ಪತನವಾಗುವಂತೆ ಮಾಡಿದರೆ, ಮತ್ತೊಂದೆಡೆ ಜನಸಾಮಾನ್ಯರ ಹೃದಯದಲ್ಲಿ ಸರ್ವೋಚ್ಚ ನ್ಯಾಯಾಲಯದೆಡೆಗಿನ ಗೌರವವನ್ನು ಅಗಣಿತಗೊಳಿಸಿತ್ತು.

ಅಂದಿನಿಂದ, ನ್ಯಾಯಾಲಯ ಅನೇಕ ಬಾರಿ ಮಧ್ಯಪ್ರವೇಶಿಸಬೇಕಾಗಿಬಂತು. ಶಾಸಕರು ದಿನಗಟ್ಟಲೆ ರೆಸಾರ್ಟ್‌ಗಳಲ್ಲಿ ಕುಳಿತು, ಇಂತಹ ರಾಜಕೀಯ ತೊಡಕುಗಳನ್ನು ಚಾಕಚಕ್ಯತೆಯಂದ ಪರಿಹರಿಸಿಸುವಂತೆ ನ್ಯಾಯಾಲಯಕ್ಕೆ ಕೃತಜ್ಞತೆಯಿಂದ ಮೌನ ಕೋರಿಕೆಯಿಟ್ಟಿದ್ದಾರೆ. ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಅಷ್ಟೇ ಏಕೆ ಇತ್ತೀಚಿನ ರಾಜಸ್ಥಾನದ ಪ್ರಹಸನದಲ್ಲಿ ಕೂಡ ಸುಪ್ರೀಂಕೋರ್ಟ್‌ "ಇಷ್ಟವಿಲ್ಲದೆ" (ಕೆಲವರು ಹೇಳುವಂತೆ, ರಾಜಸ್ಥಾನ ಪ್ರಕರಣದಲ್ಲಿ ಅಷ್ಟೇನೂ ಇಷ್ಟವಿಲ್ಲದಂತೆ ತೋರಿಸಿಕೊಳ್ಳುತ್ತಲೇ) ನಮ್ಮ ರಾಜಕೀಯ ನಾಯಕರು ಎಬ್ಬಿಸಿದ ರಾಡಿಯನ್ನು ತಿಳಿಯಾಗಿಸಲು ಹೊರಟಿತು.

ವಾಸ್ತವವಾಗಿ, ಭ್ರಷ್ಟ ಮತ್ತು ಅನಿರ್ಣಾಯಕವೆಂದು ಕಂಡುಬಂದ ದುರ್ಬಲ ಮತ್ತು ಅಸಮರ್ಥ ಆಡಳಿತದ ಯುಗದಲ್ಲಿ, ಉನ್ನತ ನ್ಯಾಯಾಲಯ ರಾಜಕೀಯ ಹರಿವಿನೆಡೆಗೆ ಸಾಗಿದಾಗ ಸಾರ್ವಜನಿಕರು ಹುರಿದುಂಬಿಸಿದ್ದಾರೆ ಕೂಡ. ಸಮಸ್ಯೆಗಳನ್ನು ಕೈಗೆತ್ತಿಕೊಂಡಾಗ ಅಗತ್ಯವಿದ್ದಾಗಲೆಲ್ಲಾ ನ್ಯಾಯಾಂಗ ಕಾರ್ಯಾಂಗಕ್ಕೆ ಪೂರ್ಣ ಬಿಸಿಮುಟ್ಟಿಸಲು ಹಿಂಜರಿದಿಲ್ಲ. ಟಿ ಎನ್‌ ಶೇಷನ್‌ ಅವರ ರೆಕ್ಕೆಗಳನ್ನು ಕಟ್ಟಿಹಾಕುವ ಸರ್ಕಾರದ ನಿರ್ಧಾರಕ್ಕೆ ಕೊಕ್ಕೆ ಹಾಕಿ ಭಾರತದ ಚುನಾವಣಾ ಆಯೋಗದ ಪ್ರಭಾವ, ಸ್ವಾತಂತ್ರ್ಯ ಮತ್ತು ಸಮಗ್ರತೆಯನ್ನು ರಕ್ಷಿಸುವಲ್ಲಿ ಮತ್ತು ಪ್ರಜಾಪ್ರಭುತ್ವಕ್ಕೆ ಭದ್ರತೆ ಒದಗಿಸುವಲ್ಲಿ ನ್ಯಾಯಾಲಯ ನೀಡಿದ ಮಹತ್ವದ ಕೊಡುಗೆ ಎಂದು ನಾನು ಭಾವಿಸುವೆ. ವಿನೀತ್ ನರೈನ್ ಪ್ರಕರಣದಲ್ಲಿ, ನ್ಯಾಯಾಲಯವು ಆಡಳಿತದ ವಿಚಕ್ಷಣೆಗಾಗಿ ಸಂಪೂರ್ಣ ಹೊಸತಾದ ಸಂರಚನೆಯನ್ನೇ ಸೃಜಿಸಿತು. ಇದುವೇ ಮುಂದೆ ಮುಪ್ಪರಿದು ಲೋಕಪಾಲ್‌ ರೂಪು ತಳೆಯುವುದಕ್ಕೆ ಚಾಲನೆ ನೀಡಿತು, ವಿಪರ್ಯಾಸವೆಂದರೆ ಅಷ್ಟೇ ವೇಗವಾಗಿ ಲೋಕಪಾಲ್‌ ಅದೃಶ್ಯವಾಯಿತು ಕೂಡ.

ಹಾಗಾದರೆ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಸಮರ್ಥತೆಯ ಸೋಂಕಿಗೆ ತೀವ್ರವಾಗಿ ತುತ್ತಾದ ವ್ಯವಸ್ಥೆಯ ವಿರುದ್ಧ ಹೋರಾಡುವ ಕೊನೆಯ ಭರವಸೆಯ ಕೋಟೆ ಎಂದು ಚಿಂತಕ ವರ್ಗ ನ್ಯಾಯಾಲಯಕ್ಕೆ ಉತ್ತೇಜನ ತುಂಬುವುದನ್ನು ಯಾವಾಗ ನಿಲ್ಲಿಸಿತು? ಹಾಗಾದರೆ, ಇಂತಹ ಮಹಾನ್‌ ಸಂಸ್ಥೆಯು ಕುಚೋದ್ಯ ಮತ್ತು ಅವಹೇಳನಕ್ಕೆ ಈಡಾಗುವಂತಹ ವಾತಾವರಣ, ಸ್ಟ್ಯಾಂಡ್-ಅಪ್ ಹಾಸ್ಯಗಾರ ಕೂಡ ತನಗೆ ದೊಡ್ಡ ಬೆದರಿಕೆ ಎನ್ನುವಂತಹ ಸನ್ನಿವೇಶ ಸೃಷ್ಟಿಯಾಗಿರುವುದೇಕೆ?

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು (ಎನ್‌ಜೆಎಸಿ) ರಚಿಸುವ ಕಾನೂನನ್ನು ರದ್ದುಪಡಿಸುವ ಅಪರೂಪದ ಜ್ವಾಜಲ್ಯಮಾನ ನಿರ್ಧಾರದ ವೇಳೆ ಕೂಡ ಸಾರ್ವಜನಿಕ ಹಿತಾಸಕ್ತಿ ಕಾಪಾಡುವುದಕ್ಕಿಂತ ಹೆಚ್ಚಾಗಿ ತನ್ನ ಹಿತಾಸಕ್ತಿ ರಕ್ಷಿಸಲು ನಿಂತಂತೆ ಕಂಡ ನ್ಯಾಯಾಲಯ, 'ಕಳೆದ ಆರು ವರ್ಷಗಳಲ್ಲಿ, ರಾಜಕೀಯ ಕಾರ್ಯಾಂಗದೊಂದಿಗೆ (ಪೊಲಿಟಿಕಲ್‌ ಎಕ್ಸಿಕ್ಯುಟಿವ್) ಹೊಂದಿಕೆ, ಹೊಂದಾಣಿಕೆ ಮಾಡಿಕೊಳ್ಳುವ ವಿವರಿಸಲಾಗದ ಹುರುಪನ್ನು ಪ್ರದರ್ಶಿಸಿದೆ.

Justice Muralidhar

ವಿಪರ್ಯಾಸವೆಂದರೆ ನ್ಯಾಯಾಂಗ ಎಲ್ಲೆಯೊಳಗೆ ಶಾಸಕಾಂಗದ ಅತಿಕ್ರಮಣವನ್ನು ಹತ್ತಿಕ್ಕಿದರೂ ಕಾನೂನು ಪಂಡಿತರು ಹೇಳುವಂತೆ ಕಾರ್ಯಾಂಗದ ಇಚ್ಛೆಗೆ ಅದು ತಲೆಬಾಗಿದೆ. ನ್ಯಾಯಿಕ ಸಮುದಾಯದ ಗ್ರಹಿಕೆ ಏನೆಂದರೆ ನ್ಯಾಯಾಂಗ ನೇಮಕಾತಿಗಳ ವಿಷಯದಲ್ಲಿ, ನ್ಯಾಯಾಲಯವು ತನ್ನ ಎನ್‌ಜೆಎಸಿ ತೀರ್ಪು ನೀಡಿದಾಗಿನಿಂದ ಕಾರ್ಯಾಂಗದ ಧ್ವನಿ ಮತ್ತು ಪ್ರಾಮುಖ್ಯತೆ ದಿನೇ ದಿನೇ ಹೆಚ್ಚುತ್ತಿದೆ. ನ್ಯಾ ಅಖಿಲ್‌ ಕುರೇಶಿ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ವಿಚಾರದಲ್ಲಿ ಆದ ಪುನರಾವರ್ತಿತ ವಿಳಂಬ ಮತ್ತು ದೆಹಲಿ ಗಲಭೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಎಸ್ ಮುರಳೀಧರ್ ಅವರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿದ ಎರಡು ಉದಾಹರಣೆಗಳನ್ನು ಗಮನಿಸಬಹುದು.

ವಾಸ್ತವದಲ್ಲಿ, ಅನಪೇಕ್ಷಿತ ಹೆಸರುಗಳ ವಿಚಾರದಲ್ಲಿ ಸರ್ಕಾರವು ತಿಂಗಳುಗಳಟ್ಟಲೆ ಕಡತವನ್ನು ಹಾಗೇ ಇರಿಸಿಕೊಂಡು ಅಂತಿಮವಾಗಿ ಮತ್ತದೇ ಹೆಸರುಗಳನ್ನು ಕೊಲಿಜಿಯಂ ಮರುಪರಿಶೀಲನೆಗೆ ಕಳುಹಿಸಿಕೊಡಲು ಹಿಂದುಮುಂದು ನೋಡಲಿಲ್ಲ. ಇತ್ತೀಚಿನ ದಿನಗಳಲ್ಲಿ, ಸರ್ಕಾರದ ಆಕ್ಷೇಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ತನ್ನ ಶಿಫಾರಸುಗಳನ್ನು ಪುನರುಚ್ಚರಿಸುವ ಪ್ರತಿಪಾದನೆಯಿಂದಲೇ ದೂರಾಗಿದೆ. ಈ ವಿಷಯದಲ್ಲಿ ಕಾರ್ಯವಿಧಾನದ ಜ್ಞಾಪಕ ಪತ್ರವು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಪುಣ್ಯವೆಂದರೆ, ಕೊಲಿಜಿಯಂ ನಡಾವಳಿಗಳ ಪ್ರಕಟಣೆ ಮತ್ತು ದಾಖಲೆ ಮಾಡುವ ಪ್ರಹಸನವನ್ನು ನ್ಯಾಯಾಲಯವು ನಿಲ್ಲಿಸಿದೆ.

ಉಳಿದ ಪ್ರಕರಣಗಳು (ನೋಟು ಅಮಾನ್ಯೀಕರಣ, ಚುನಾವಣಾ ಬಾಂಡ್‌ಗಳು, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಮಾನ್ಯತೆ ನಿರಾಕರಿಸಿರುವುದನ್ನು ಪ್ರಶ್ನಿಸಿದ್ದ ಪ್ರಕರಣಗಳು) ಆಮೆಗತಿಯಲ್ಲಿ ಸಾಗುತ್ತಿರುವಾಗ ಕಾರ್ಯಾಂಗದ ಅನುಕೂಲಕ್ಕಾಗಿ ವಿಚಾರಣಾ ಪಟ್ಟಿಗೆ ವೇಗ (ರಾಜಸ್ಥಾನ್ ವಿಧಾನಸಭಾ ಪ್ರಕರಣ) ನೀಡಲಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಪ್ರತಿಕೂಲ ಸ್ಥಿತಿಯಿಂದ ಕಾರ್ಯಾಂಗ ಹೊರಬರಲು ಸಹಾಯಕವಾಗುವಂತಹ ಅನೇಕ ಪ್ರಕರಣಗಳನ್ನು ಆದೇಶಗಳನ್ನು ಜನ ಕಳವಳದಿಂದಲೇ ನೋಡಿದ್ದಾರೆ (ಉದಾಹರಣೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ಸೇವೆಗಳನ್ನು ಪುನರಾರಂಭಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಕಾರ್ಯಾಂಗವೇ ನಿರ್ಣಯ ತೆಗೆದುಕೊಳ್ಳಲು ಆದೇಶಿಸಿದ್ದು).

ಪ್ರಪಂಚವೇ ಕಿರಿದಾಗಿರುವ ಇಂದಿನ ಅಂತರ್ಜಾಲ ಯುಗದಲ್ಲಿ, ಬ್ರೆಕ್ಸಿಟ್‌ ಪ್ರಕರಣದಲ್ಲಿ ಬ್ರಿಟನ್ ಸುಪ್ರೀಂಕೋರ್ಟ್‌ನ ಹನ್ನೊಂದು ಮಂದಿ ನ್ಯಾಯಮೂರ್ತಿಗಳು ನಿರ್ಲಿಪ್ತ ಮತ್ತು ನಿಷ್ಪಕ್ಷಪಾತ ನಿರ್ಣಯ ಕೈಗೊಂಡಿದ್ದನ್ನು ಜಗತ್ತು ವಿಸ್ಮಯದಿಂದ ನೋಡಿದೆ. ಇದೇ ವೇಳೆ, ಭಾರತದ ಜನತೆ ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಾಗ ದೃಢ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಹೇಗೆ ವರ್ತಿಸಿತು ಎಂಬುದನ್ನು ನೋಡಿದಾಗ ಗಾಬರಿಯಾಗುತ್ತದೆ.

Arnab Goswami, Supreme Court

ಟಿವಿ ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ರೀತಿಯ ಪ್ರಕರಣಗಳಲ್ಲಿ ನೆರವಿಗೆ ಬರಲು ನ್ಯಾಯಾಲಯ ಪದೇ ಪದೇ ಮುಜುಗರವಿಲ್ಲದ ವರ್ತನೆ ತೋರುತ್ತಿದೆ. ದೋಷಯುಕ್ತ ಅರ್ಜಿಗಳನ್ನು ರಾತ್ರೋರಾತ್ರಿ ಪಟ್ಟಿ ಮಾಡುವುದು ಮತ್ತು ದಿನವಿಡೀ ಅಂತಹವುಗಳ ವಿಚಾರಣೆ ನಡೆಸುವುದನ್ನು ನೋಡಿದಾಗ ಮನಸ್ಸಿದ್ದರೆ ಮಾರ್ಗ ಎಂಬುದು ಸ್ಪಷ್ಟವಾಗುತ್ತದೆ!

ಕಾರಣಗಳು (ಕಾಸಸ್) ಮತ್ತು ಪ್ರಕರಣಗಳನ್ನು (ಕೇಸಸ್) ಉಪಚರಿಸುವಲ್ಲಿ ಎದ್ದು ಕಾಣುವ ವ್ಯತ್ಯಾಸವನ್ನು ಗಮನಿಸಿದಾಗ ʼಎಲ್ಲೋ ಏನೋ ತಪ್ಪಾಗಿದೆʼ (“Something is rotten in the state of Denmark” ) ಎಂಬ ಹ್ಯಾಮ್ಲೆಟ್‌ ನಾಟಕದ ಗ್ರಹಿಕೆ ಬಲಗೊಳ್ಳುತ್ತದೆ. ಕಾಶ್ಮೀರದ ಮಾಜಿ ಮುಖ್ಯಮಂತ್ರಿಯವರ (ಮೆಹಬೂಬಾ ಮುಫ್ತಿ) ಹೇಬಿಯಸ್ ಕಾರ್ಪಸ್ ಅರ್ಜಿ ಹೇಗೆ ತಿಂಗಳುಗಟ್ಟಲೆ ಬಾಕಿ ಉಳಿದಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು. ಆ ಮೂಲಕ ಸರ್ಕಾರಕ್ಕೆ ತನ್ನ ಅಕ್ರಮದ ಬಗೆಗೆ ಎದುರಾಗಬಹುದಾದ ತೀರ್ಪಿನಿಂದ ತಪ್ಪಿಸಿಕೊಳ್ಳಲು ಅವಕಾಶವನ್ನು ನ್ಯಾಯಾಲಯ ನೀಡಿತು. ಹಾಗೂ ಅಂತಿಮವಾಗಿ, ಮೆಹಬೂಬಾ ಅವರು ಬಿಡುಗಡೆಯಾದ ನಂತರದ ವಿಚಾರಣೆಯ ವೇಳೆ ಪ್ರಕರಣವು ನಿಷ್ಫಲಕಾರಿಯಾಗಿರುವುಂಥದ್ದು ಎಂದು ವಜಾಗೊಳಿಸಲಾಯಿತು. ಆ ಮುಖೇನ, ಸೂಕ್ಷ್ಮ ರಾಜ್ಯದ ಪ್ರಮುಖ ರಾಜಕಾರಣಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕಾನೂನು ಬದ್ಧತೆಯ ಕುರಿತಾದ ತೀರ್ಪು ಉಂಟು ಮಾಡಬಹುದಾದ ಮುಜುಗರದಿಂದ ಸರ್ಕಾರವನ್ನು ತಪ್ಪಿಸಿತು.

ಆದರೆ ನಾಗರಿಕರ ವಿಷಯಕ್ಕೆ ಬರುವುದಾದರೆ, ಸಂವಿಧಾನದ ಪ್ರತಿ ಮತ್ತು ಬಾಬಾ ಸಾಹೇಬರ ಚಿತ್ರವನ್ನು ಹಿಡಿದು ಚಳಿಗಾಲದ ದೆಹಲಿಯ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ (ಶಾಹೀನ್‌) ಬಾಗ್‌ನ ವೃದ್ಧೆಯರ ವಿಚಾರಕ್ಕೆ ಬರುವುದಾದರೆ, ವುಹಾನ್‌ ಸೋಂಕಿನಿಂದಾಗಿ ಅವರ ಪ್ರತಿಭಟನೆಗಳು ನಿಂತು ಹೋದರೂ 'ಪ್ರಕರಣ ನಿಷ್ಫಲಕಾರಿ' ಎಂದು ನ್ಯಾಯಾಲಯ ಅದಕ್ಕೆ ಮಂಗಳಹಾಡಲಿಲ್ಲ. ಬದಲಿಗೆ, ಸಾರ್ವಜನಿಕರ ಪ್ರತಿಭಟಿಸುವ ಹಕ್ಕಿನ ಮೇಲಿನ ನಿರ್ಬಂಧಗಳ ಬಗ್ಗೆ ವಿವರವಾದ ಅಭಿಪ್ರಾಯ ದಾಖಲಿಸಲು ಲೇಖನಿ ಹಿಡಿದು ಅದು ಮುಂದಾಯಿತು.

ಅಧಿಕಾರದಲ್ಲಿರುವವರ ಜೊತೆಗೆ ಸಂಘರ್ಷಕ್ಕಿಳಿದ ಹೋರಾಟಗಾರರು ಮತ್ತು ಪತ್ರಕರ್ತರಿಗೆ ನ್ಯಾಯಾಲಯದ ಬಾಗಿಲು ಮುಚ್ಚಲಾಯಿತು. ಅಧಿಕಾರದ ಪರವಾಗಿರುವಂತೆ ತೋರುವ ಕೆಲವು ದಾವೆದಾರರಿಗೆ ತರಾತುರಿಯ ಪರಿಹಾರ ನೀಡಲಾಯಿತು. ಇದು ನ್ಯಾಯಿಕ ಅಧಿಕಾರ ಚಲಾಯಿಸುವ ಪ್ರಕ್ರಿಯೆಯಲ್ಲಿ ಇರುವ ಗಂಭೀರ ಕಂದರವನ್ನು ಢಾಳಾಗಿಯೇ ಪ್ರದರ್ಶಿಸಿತು. ಸುಧಾ ಭಾರಧ್ವಾಜ್‌ ಅವರಿಗೆ ಮರಳಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲು ಸೂಚಿಸಿದ ಸರ್ವೋಚ್ಚ ನ್ಯಾಯಾಲಯ ಅದೇ ಅರ್ನಾಬ್‌ ಗೋಸ್ವಾಮಿ ಅವರ ಪ್ರಕರಣವನ್ನು ಲಗುಬಗೆಯಿಂದ ವಿಚಾರಣೆ ನಡೆಸಿ ಪರಿಹಾರವನ್ನೂ ನೀಡಿತು.

ಸಾಂಕ್ರಾಮಿಕ ರೋಗವು ಸುಪ್ರೀಂಕೋರ್ಟ್‌ನತ್ತ ಎಲ್ಲರ ಚಿತ್ತ, ಗಮನ ಹೆಚ್ಚು ಹರಿಯುವಂತೆ ಮಾಡಿತು. ʼಜನತಾ ಕರ್ಫ್ಯೂʼ ಆಚರಿಸಲು ಪಾತ್ರೆಗಳನ್ನು ಬಡಿಯುವಂತೆ ಕರೆಕೊಟ್ಟ ಬಳಿಕ, ಕೇವಲ ನಾಲ್ಕು ಗಂಟೆಗಳ ಮೊದಲು ಗಮನಕ್ಕೆ ತಂದು ಲಾಕ್‌ಡೌನ್‌ ಘೋಷಿಸಲಾಯಿತು. ಪರಿಣಾಮ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಬರಿಗಾಲಲ್ಲಿ ಬಹುದಿನಗಳ ಕಾಲ ನಡೆದು ಹೋಗುವಂತಾಯಿತು. ಎಳೆದೊಯ್ಯಲಾಗುತ್ತಿದ್ದ ಸೂಟ್‌ಕೇಸ್‌ ಮೇಲೆಯೇ ನಿದ್ರೆಗೆ ಜಾರಿದ ಮಗು ಮತ್ತು ಶಾಶ್ವತವಾಗಿ ಕಣ್ಣುಮುಚ್ಚಿದ ಅಮ್ಮನನ್ನು ಎಬ್ಬಿಸಲು ಹೆಣಗುತ್ತಿರುವ ಮತ್ತೊಂದು ಮಗುವಿನ ಚಿತ್ರಗಳು ಮಹಾನ್ ದುರಂತವೊಂದರ ನಿರ್ಣಾಯಕ ಕ್ಷಣಗಳನ್ನು ಸಾರಿದವು. ಸೂಕ್ಷ್ಮತೆ ಕಳೆದುಕೊಂಡ ಆಡಳಿತಕ್ಕೆ ನ್ಯಾಯಾಲಯ ತನ್ನ ಕ್ರಾಂತಿಕಾರಿ ನಿರ್ಣಯದ ಮೂಲಕ ಚುರುಕು ಮುಟ್ಟಿಸಬಹುದು ಎಂದು ಎಲ್ಲ ನಾಗರಿಕರ ನೋಟ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿತ್ತು.

ಏನಾಯಿತು ಎಂಬುದು ನಮಗೆಲ್ಲಾ ತಿಳಿದಿದೆ. ಕಾರ್ಯಾಂಗಕ್ಕೆ ನ್ಯಾಯಾಲಯ ಸಡಿಲ ಅವಕಾಶ ಮಾಡಿಕೊಟ್ಟಿತು. ಸರ್ಕಾರದ ಕಾನೂನು ಅಧಿಕಾರಿ ಎಲ್ಲವೂ ಸರಿಯಾಗಿದೆ ಎಂದು ನೀಡಿದ ಭರವಸೆಯನ್ನೇ ಪರಮ ಸತ್ಯವೆಂದು ಒಪ್ಪಿತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಪ್ರಖ್ಯಾತ ವಕೀಲರು ದಾವೆ ಹೂಡುವಂತಾಯಿತು. ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಮರುಪರಿಶೀಲಿಸುವಂತೆ ನಾಗರಿಕರು ನ್ಯಾಯಾಲಯದ ಮೇಲೆ ಮೇಲುಗೈ ಸಾಧಿಸಲು ಕಾರಣವಾಯಿತು. ಆದರೂ, ಅಷ್ಟು ಹೊತ್ತಿಗಾಗಲೇ ಹಾನಿ ಸಂಭವಿಸಿತ್ತು, ಆನಂತರ ತಗೆದುಕೊಂಡ ಕ್ರಮ ಅತ್ಯಲ್ಪವಾಗಿತ್ತು, ಪೂರ್ತಿ ತಡವಾಗಿತ್ತು.

ಈ ಅವಧಿಯಲ್ಲಿ ಜಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು, ಬಡವರ್ಗಗಳಿಗೆ ಮಾತ್ರ ಉಚಿತ ಕೊರೊನಾ ಪರೀಕ್ಷೆ; ಉಳಿದವರು ಹಣ ತೆರಬೇಕು ಎಂಬಂತಹ ನ್ಯಾಯಾಂಗದ ‘ವ್ಯತಿರಿಕ್ತʼ ಧೋರಣೆಗಳು ಸಾರ್ವಜನಿಕರ ಗಮನಕ್ಕೆ ಬಂದವು.

ವೀಡಿಯೊ ಕಲಾಪದ ಮೂಲಕ ವಿಚಾರಣೆ ನಡೆಸಲು ತಂತ್ರಜ್ಞಾನವನ್ನು ತುಂಬಾ ಚೆನ್ನಾಗಿ ಬಳಸಿದ್ದಕ್ಕಾಗಿ ನ್ಯಾಯಾಲಯವನ್ನು ಮೆಚ್ಚಬೇಕು. ಆದರೆ ಅನೇಕ ಕಾರ್ಮಿಕರು ಮತ್ತು ವಿಚಾರಣಾಧೀನರ ಪ್ರಕರಣಗಳು ವರ್ಷಗಟ್ಟಲೆ ಕೊಳೆಯುತ್ತಿದ್ದರೂ ಸಾರ್ವಜನಿಕ ಹಿತಾಸಕ್ತಿ ಪರ ದನಿ ಎತ್ತುವ ವಕೀಲರೊಬ್ಬರ (ಪ್ರಶಾಂತ್‌ ಭೂಷಣ್‌) ವಿರುದ್ಧ ಹೂಡಲಾದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗಾಗಿ ಗಂಟೆಗಟ್ಟಲೆ ಸಮಯ ವ್ಯಯಿಸಿತು.

ಒಂದೆಡೆ, ಕೃಷಿ ಭೂಮಿಯಲ್ಲಿ ನಿರ್ಮಾಣಗೊಂಡಿದ್ದ ದಕ್ಷಿಣ ದೆಹಲಿಯ ಅಕ್ರಮ ಕಾಲೋನಿಯೊಂದರ ನಿವಾಸಿಗಳಿಗೆ ರಕ್ಷಣೆಯೊದಗಿಸಲು ಮುಂದಾದ ನ್ಯಾಯಾಲಯ ಮತ್ತೊಂದೆಡೆ ಹಂತ ಹಂತವಾಗಿ ಪುನರ್ವಸತಿ ಕಲ್ಪಿಸಬೇಕೆಂಬ ಹೈಕೋರ್ಟ್‌ನ ತೀರ್ಪನ್ನು ತಳ್ಳಿಹಾಕಿ, ಸಾಂಕ್ರಾಮಿಕತೆಯ ಭೀಕರತೆಯನ್ನೂ ಮರೆತು ರೈಲ್ವೆ ಹಳಿಗಳ ಇಕ್ಕೆಲಗಳಲ್ಲಿ ತಲೆ ಎತ್ತಿದ್ದ ಕೊಳೆಗೇರಿಗಳನ್ನು ನೆಲಸಮ ಮಾಡುವಂತೆ ನಿರ್ದೇಶನ ನೀಡಿತು.

ಇದೆಲ್ಲದರ ಹೊರತಾಗಿಯೂ, ನಮ್ಮ ಸುಪ್ರೀಂಕೋರ್ಟ್ ಜಗತ್ತಿನಾದ್ಯಂತ ಇರುವ ಇತರ ನ್ಯಾಯಾಲಯಗಳ ನಡುವೆ ಸ್ಥಾನವನ್ನೂ ಹಾಗೂ ಅವುಗಳ ಗೌರವವನ್ನೂ ಕಳೆದುಕೊಂಡಿದೆ ಎನ್ನುವುದು ಆತುರವಾದೀತು. ಅಮೆರಿಕದ ಸುಪ್ರೀಂಕೋರ್ಟ್‌ನಂತಲ್ಲದೆ ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ಮೆಲಿರುವ ಅಗಾಧ ಪ್ರಕರಣಗಳ ಒತ್ತಡವನ್ನು ಎದುರಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಅದು ತೃತೀಯ ಲಿಂಗಿಗಳ ಹಕ್ಕುಗಳು, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳು, ಮಧ್ಯಸ್ಥಿಕೆ ಕಾನೂನಿನಂತಹ ವಿಚಾರಗಳಲ್ಲಿ ಗುಣಮಟ್ಟದ ತೀರ್ಪುಗಳನ್ನು ನೀಡಿದೆ. ಆದಾಗ್ಯೂ, ಸಾರ್ವಜನಿಕ ಹಿತದೃಷ್ಟಿಯಿಂದ ಹೇಳುವುದಾದರೆ, ನಮ್ಮದು ಕಾರ್ಯಾಂಗ ಸ್ನೇಹಿ ಸಾಂವಿಧಾನಿಕ ನ್ಯಾಯಾಲಯ ಎಂಬ ಸಾರ್ವಜನಿಕ ಗ್ರಹಿಕೆಯನ್ನು ಆರಂಭದಲ್ಲಿಯೇ ತೊಡೆದು ಹಾಕುವುದು ಉತ್ತಮವಾಗಿದೆ.

ಈ ಟೀಕೆ-ಟಿಪ್ಪಣಿ ವೇಳೆ ನಾನು ತುಂಬಾ ಕಠಿಣವಾಗಿ ಮತ್ತು ನಿರ್ದಾಕ್ಷಿಣ್ಯವಾಗಿ ಮಾತನಾಡಿರಬಹುದು. ಈ ಮಹಾನ್‌ ಸಂಸ್ಥೆಯ ಮೇಲಿರುವ ಪ್ರೀತಿ ಮತ್ತು ಗೌರವವೇ ನನ್ನ ಈ ದುಗುಡಕ್ಕೆ ಕಾರಣ. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ, ಸಾಂವಿಧಾನಿಕ ನ್ಯಾಯಾಲಯ ಮಾತ್ರ ಚುನಾಯಿತ ಸರ್ಕಾರದ ಬಹುಸಂಖ್ಯಾತ ಪ್ರವೃತ್ತಿಗಳ ವಿರುದ್ಧ ಅಭಯ ನೀಡುವ ಹೊಣೆಗಾರನಾಗಿ ನಿಲ್ಲುತ್ತದೆ. ಇಂದು, ಹಿಂದೆಂದಿಗಿಂತಲೂ ಹೆಚ್ಚಾಗಿ, ದೇಶಕ್ಕೆ ಸಶಕ್ತ, ನಿರ್ಭೀತ, ಮುಕ್ತ ಸಾಂವಿಧಾನಿಕ ನ್ಯಾಯಾಲಯ ಬೇಕಿದೆ.

-‌ ಸಂಜಯ್‌ ಘೋಷ್

(ಲೇಖಕರು ದೆಹಲಿ ಮೂಲದ ನ್ಯಾಯವಾದಿ.)

ಗಮನಿಸಿ: ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಮತ್ತು ದೃಷ್ಟಿಕೋನ ಖುದ್ದು ಲೇಖಕರವೇ ಹೊರತು ಅವು ʼಬಾರ್‌ ಅಂಡ್‌ ಬೆಂಚ್‌ʼನ ನಿಲುವುಗಳನ್ನು ಪ್ರತಿನಿಧಿಸುವುದಿಲ್ಲ.