Karnataka High Court and Hate speech
Karnataka High Court and Hate speech 
ಸುದ್ದಿಗಳು

[ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆ, ಉದ್ಯಮಕ್ಕೆ ನಿಷೇಧ] ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಹೈಕೋರ್ಟ್‌ಗೆ ಮನವಿ

Siddesh M S

ಅಲ್ಪಸಂಖ್ಯಾತ ಸಮುದಾಯ ವಿರುದ್ಧ ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮದಾಯದ ವಿರುದ್ಧ ದ್ವೇಷ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ, ಸಮುದಾಯಗಳ ನಡುವೆ ದ್ವೇಷ ಹರಡುತ್ತಿರುವ ಬಿಜೆಪಿ ಶಾಸಕರು ಮತ್ತು ಸಂಸದರ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲಾಗಿದೆ (ಮೊಹಮ್ಮದ್ ಖಲೀವುಲ್ಲಾ ವರ್ಸಸ್‌ ಕರ್ನಾಟಕ ರಾಜ್ಯ).

ಅಲ್ಪಸಂಖ್ಯಾತ ಸಮುದಾಯದ ಉದ್ಯಮಕ್ಕೆ ನಿಷೇಧ ಹೇರುವ ಮೂಲಕ ಸಾವಿರಾರು ಜನರ ಬದುಕಿಗೆ ತೊಂದರೆ ಉಂಟು ಮಾಡುತ್ತಿರುವವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ಮಧ್ಯಂತರ ಆದೇಶ ಮಾಡುವಂತೆಯೂ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ನಿವಾಸಿ ಮೊಹಮ್ಮದ್ ಖಲೀವುಲ್ಲಾ ಅವರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ ಎಸ್ ಈಶ್ವರಪ್ಪ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಂ‌ ಪಿ ರೇಣುಕಾಚಾರ್ಯ, ಸಿ ಟಿ ರವಿ, ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ರಿಷಿಕುಮಾರ್ ಸ್ವಾಮಿ ಅಲಿಯಾಸ್‌ ಕಾಳಿ ಸ್ವಾಮಿ, ಯುವ ಬ್ರಿಗೇಡ್‌ ಮುಖಂಡ ಚಕ್ರವರ್ತಿ ಸೂಲಿಬೆಲೆ ಮತ್ತು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತಿತರರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

K S Eshwarappa, M P Renukacharya, C T Ravi, Prathap Simha, Rishikumara Swamy, Pramod Mutalik, Basanagouda Patil Yatnal, Shobha Karandlaje, Tejasvi Surya, Chakravarti Sulibele

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ, ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ ಶಾಸಕರು, ಸಚಿವರು ಹಾಗೂ ಸಂಸದರನ್ನು ಮನವಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ನ್ಯಾಯಮೂರ್ತಿ ಎಸ್‌ ಜಿ ಪಂಡಿತ್‌ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದ ಅರ್ಜಿದಾರ ಪರ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ಅವರು ತುರ್ತಾಗಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು. ಇದಕ್ಕೆ ಒಪ್ಪದ ಪೀಠವು ನಿಗದಿತ ಕ್ರಮದಲ್ಲೇ ಅರ್ಜಿಗೆ ವಿಚಾರಣೆಗೆ ಬರಲಿ ಎಂದರು.

ಅರ್ಜಿದಾರರ ಮನವಿ ಮತ್ತು ಮಧ್ಯಂತರ ಮನವಿ

ಸಚಿವ ಕೆ ಎಸ್ ಈಶ್ವರಪ್ಪ ಸೇರಿದಂತೆ ಬಿಜೆಪಿಯ ರಾಜ್ಯ ಮತ್ತು ಕೇಂದ್ರದ ನಾಯಕರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಪದೇ ಪದೇ ಪ್ರಚೋದನಾಕಾರಿ, ದ್ವೇಷದ ಭಾಷಣ ಮಾಡುತ್ತಿದ್ದು, ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಸಮಾಜದಲ್ಲಿ ತಾರತಮ್ಯ ಉಂಟು ಮಾಡಲು, ಕೋಮು ಭಾವನೆ ಕೆರಳಿಸಲು ಮತ್ತು ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಸಮಾಜದಲ್ಲಿ ಕೋಮು ದ್ವೇಷ ಕೆರಳಿಸುವ ಮತ್ತು ಅಶಾಂತಿ ಮೂಡಿಸುವುದನ್ನು ತಡೆಯಲು ತಹ್ಸೀನ್‌ ಪೂನಾವಾಲಾ ಮತ್ತು ಕೇಂದ್ರ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿ ರೂಪಿಸಿದೆ. ಅದರಂತೆ ಕೆ ಎಸ್ ಈಶ್ವರಪ್ಪ ಸೇರಿದಂತೆ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹುಟ್ಟಿಸುವ ಹೇಳಿಕೆ ನೀಡುತ್ತಿರುವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಮಾರ್ಚ್‌ 28ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಪತ್ರ ನೀಡಲಾಗಿದೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಹೀಗಾಗಿ, ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಿಬೇಕು ಎಂದು ನ್ಯಾಯಾಲಯಕ್ಕೆ ಕೋರಲಾಗಿದೆ.

ಸಮಾಜದಲ್ಲಿ ದ್ವೇಷ ಭಾಷಣ, ಗುಂಪು ಹಲ್ಲೆ, ಗುಂಪು ಹತ್ಯೆಗಳು ಗಂಭೀರ ಪರಿಣಾಮ ಉಂಟು ಮಾಡಲಿದ್ದು, ಇದನ್ನು ತಡೆಯುವ ಸಂಬಂಧ ಟಿವಿ, ರೇಡಿಯೊ, ಇತರೆ ಮಾಧ್ಯಮ ವೇದಿಕೆ ಮತ್ತು ರಾಜ್ಯ ಸರ್ಕಾರದ ಗೃಹ ಇಲಾಖೆ ಮತ್ತು ಪೊಲೀಸ್‌ ಇಲಾಖೆಯ ವೆಬ್‌ಸೈಟ್‌ನಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಆದೇಶಿಸಬೇಕು ಎಂದು ಮನವಿ ಮಾಡಲಾಗಿದೆ.

ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು. ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ಪ್ರತಿವಾದಿ ಬಿಜೆಪಿ ನಾಯಕರ ವಿರುದ್ಧ ಕ್ರಮ ಜರುಗಿಸದೆ ಕರ್ತವ್ಯ ಲೋಪ ಎಸಗಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ.

ದ್ವೇಷ ಹುಟ್ಟಿಸುವಂಥ ಹೇಳಿಕೆ ನೀಡಿದವರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನ್ಯಾಯಾಲಯವೊಂದನ್ನು ಗೊತ್ತುಪಡಿಸಬೇಕು. ಆ ನ್ಯಾಯಾಲಯವು ಪ್ರತಿದಿನ ಆಧಾರದ ಮೇಲೆ ವಿಚಾರಣೆ ನಡೆಸಿ ಆರು ತಿಂಗಳ ಒಳಗೆ ಪ್ರಕರಣ ಇತ್ಯರ್ಥ ಮಾಡಲು ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಪ್ರಸಾರ ಮಾಡಲಾಗುತ್ತಿರುವ ಎಲ್ಲಾ ದ್ವೇಷ ಭಾಷಣವನ್ನು ಪರಿಗಣಿಸಿ, ಅಲ್ಪಸಂಖ್ಯಾತ ಸಮುದಾಯದ ಉದ್ಯಮಕ್ಕೆ ನಿಷೇಧ ಹೇರುವ ಮೂಲಕ ಸಾವಿರಾರು ಜನರ ಬದುಕಿಗೆ ತೊಂದರೆ ಉಂಟು ಮಾಡುತ್ತಿರುವವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ಒಂದರಿಂದ ಏಳನೇ ಪ್ರತಿವಾದಿಗಳಿಗೆ ಮಧ್ಯಂತರ ಆದೇಶ ಮಾಡಬೇಕು ಎಂದು ಮನವಿ ಮಾಡಲಾಗಿದೆ.