Hate Speech 
ಸುದ್ದಿಗಳು

ದ್ವೇಷಭಾಷಣದ ವಿರುದ್ಧ ಸ್ವಪ್ರೇರಿತ ಪ್ರಕರಣ ದಾಖಲಿಸಲು ನೀಡಿದ್ದ ನಿರ್ದೇಶನ ಎಲ್ಲಾ ರಾಜ್ಯಗಳಿಗೂ ಅನ್ವಯ: ಸುಪ್ರೀಂ

ಈ ಹಿಂದೆ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಪೊಲೀಸರಿಗೆ ಮಾತ್ರ ಸೀಮಿತವಾಗಿದ್ದ ಮಧ್ಯಂತರ ಆದೇಶದ ವ್ಯಾಪ್ತಿಯನ್ನು ಸರ್ವೋಚ್ಚ ನ್ಯಾಯಾಲಯ ವಿಸ್ತರಿಸಿದೆ.

Bar & Bench

ಅಪರಾಧಿಗಳ ಧರ್ಮ ಯಾವುದು ಎಂಬುದನ್ನು ಲೆಕ್ಕಿಸದೆ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದ ತನ್ನ ಹಿಂದಿನ ಆದೇಶದ ವ್ಯಾಪ್ತಿಯನ್ನು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ವಿಸ್ತರಿಸಿದೆ [ಶಹೀನ್ ಅಬ್ದುಲ್ಲಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಮೊದಲು ದೆಹಲಿ, ಉತ್ತರಪ್ರದೇಶ ಹಾಗೂ ಉತ್ತರಾಖಂಡ ಪೊಲೀಸರಿಗೆ ಮಾತ್ರ ಸೀಮಿತವಾಗಿದ್ದ ಮಧ್ಯಂತರ ಆದೇಶದ ವ್ಯಾಪ್ತಿಯನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಇಡೀ ದೇಶಕ್ಕೆ ವಿಸ್ತರಿಸಿತು.

ವಿಚಾರಣೆ ವೇಳೆ ಪೀಠ ಸಂವಿಧಾನಕ್ಕೆ ತನ್ನ ಏಕೈಕ ನಿಷ್ಠೆ ಎಂದು ಹೇಳಿತು. ನಾವಿಬ್ಬರೂ (ನ್ಯಾಯಮೂರ್ತಿಗಳು) ಸಂಪೂರ್ಣ ರಾಜಕೀಯೇತರರು. ಪಕ್ಷಕಾರರು ಎ ಬಿ ಅಥವಾ ಸಿಯೇ ಇರಲಿ ಅದು ನಮಗೆ ಸಂಬಂಧಿಸಿದ್ದಲ್ಲ. ಸಂವಿಧಾನ ಮತ್ತು ದೇಶದ ಕಾನೂನಿನ ಬಗ್ಗೆ ಮಾತ್ರ ನಮ್ಮ ಕಾಳಜಿ” ಎಂದು ಪೀಠ ನುಡಿಯಿತು.

ಅಕ್ಟೋಬರ್‌ 2022ರ ಆದೇಶ ಪಾಲಿಸದಿದ್ದಲ್ಲೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿಗಳು ಸಲ್ಲಿಕೆಯಾಗಿದ್ದವು.  

ಇವುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಪ್ರತಿ ಅಫಿಡವಿಟ್ ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಮೇ 12ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ದ್ವೇಷಭಾಷಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.