Hathras Gang Rape, Allahabad HC
Hathras Gang Rape, Allahabad HC 
ಸುದ್ದಿಗಳು

ಪ್ರಕರಣ ಬಾಕಿ ಇರುವಾಗ ಹಾಥ್‌ರಸ್‌ ಜಿಲ್ಲಾಧಿಕಾರಿ ಅಲ್ಲಿ ಮುಂದುವರಿಯುವುದು ಸರಿಯೇ? ಪ್ರತಿಕ್ರಿಯೆ ಬಯಸಿದ ಹೈಕೋರ್ಟ್

Bar & Bench

ಹಾಥ್‌ರಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಗತಿಯಲ್ಲಿರುವ ತನಿಖೆಯ ಕುರಿತು ಸ್ಥಿತಿಗತಿ ವರದಿ ಮತ್ತು ತನಿಖೆ ಪೂರ್ಣಗೊಳಿಸಲು ಇನ್ನೆಷ್ಟು ಸಮಯಬೇಕಿದೆ ಎಂಬುದನ್ನು ಒಳಗೊಂಡ ವರದಿ ಸಲ್ಲಿಸುವಂತೆ ಸೋಮವಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಅಲಾಹಾಬಾದ್‌ ಹೈಕೋರ್ಟ್‌ ಸೂಚಿಸಿದೆ.

ಸಂತ್ರಸ್ತೆಯ ಅಕ್ರಮ ಶವಸಂಸ್ಕಾರ ಸೇರಿದಂತೆ ಹಾಥ್‌ರಸ್‌ ಯುವತಿಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಅಲಾಹಾಬಾದ್‌ ಹೈಕೋರ್ಟ್‌ ಪರಿಗಣಿಸಲಿದೆ ಎಂದು ಈಚೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದ್ದ ಬೆನ್ನಿಗೇ ನ್ಯಾಯಮೂರ್ತಿಗಳಾದ ರಂಜನ್‌ ರಾಯ್‌ ಮತ್ತು ಪಂಕಜ್‌ ಮಿತ್ತಲ್‌ ನೇತೃತ್ವದ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್‌ ಆದೇಶವನ್ನು ಪರಿಗಣಿಸಿ ಸಂತ್ರಸ್ತೆಯ ಕುಟುಂಬ ಸದಸ್ಯರು ಮತ್ತು ಸಾಕ್ಷಿಗಳಿಗೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಭದ್ರತೆ ಕಲ್ಪಿಸಬೇಕು ಎಂದಿದೆ. ಈ ಸಂಬಂಧ ಪೊಲೀಸ್‌ ಮಹಾನಿರ್ದೇಶಕ, ದೆಹಲಿಯ ಸಿಆರ್‌ಪಿಎಫ್‌ ಅನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸುವಂತೆ ರಿಜಿಸ್ಟ್ರಿಗೆ ಹೈಕೋರ್ಟ್‌ ಸೂಚಿಸಿದೆ.

“ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಸಿಆರ್‌ಪಿಎಫ್‌ನ ಜವಾಬ್ದಾರಿಯುತ ಅಧಿಕಾರಿಯು ಸಂತ್ರಸ್ತೆಯ ಕುಟುಂಬಸ್ಥರಿಗೆ ಯಾವ ರೀತಿಯ ಭದ್ರತೆ ಕಲ್ಪಿಸಲಾಗಿದೆ ಮತ್ತು ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂಬುದರ ಕುರಿತು ಅಫಿಡವಿಟ್‌ ಸಲ್ಲಿಸಬೇಕು.”
ಅಲಾಹಾಬಾದ್‌ ಹೈಕೋರ್ಟ್‌

ಲಖನೌನಲ್ಲಿರುವ ಸಹಾಯಕ ಸಾಲಿಸಿಟರ್‌ ಜನರಲ್‌ ಅವರಿಗೆ ವಿಚಾರಣೆಯ ಕುರಿತ ನೋಟಿಸ್‌ ಜಾರಿಗೊಳಿಸುವಂತೆ ರಿಜಿಸ್ಟ್ರಿಗೆ ಪೀಠ ಆದೇಶಿಸಿದೆ.

ಸುಪ್ರೀಂ ಕೋರ್ಟ್‌ನ 2020ರ ಅಕ್ಟೋಬರ್‌ 27ರ ಆದೇಶದಲ್ಲಿ ಅಕ್ಟೋಬರ್‌ 12ರ ಹೈಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಸಂತ್ರಸ್ತೆಯ ಕುಟುಂಬಸ್ಥರ ಹೆಸರುಗಳನ್ನು ಡಿಲೀಟ್‌ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿಲಾಗಿದೆ. ಸಂತ್ರಸ್ತೆಯ ಕುಟುಂಬಸ್ಥರ ಹೆಸರುಗಳ ಸ್ಥಾನದಲ್ಲಿ ʼಸಂತ್ರಸ್ತೆಯ ಕುಟುಂಬ ಸದಸ್ಯರುʼ ಎಂದು ದಾಖಲಿಸುವಂತೆ ಸೂಚಿಸಲಾಗಿದೆ.

ತನ್ನ ಮುಂದಿರುವ ವಿಚಾರಣೆಯ ವ್ಯಾಪ್ತಿಯು ಎರಡು ಪ್ರಮುಖ ಭಾಗಗಳನ್ನು ಹೊಂದಿದೆ ಎಂದು ಹೈಕೋರ್ಟ್‌ ಸೋಮವಾರ ಹೇಳಿದೆ:

  • ಮೊದಲಿಗೆ ಆರೋಪಿತ ಅಪಾದನೆಗೆ ಸಂಬಂಧಿಸಿದ ಸಿಬಿಐ ತನಿಖೆಯ ಮೇಲೆ ನಿಗಾ ಇಡುವುದು

  • ಎರಡನೇಯದಾಗಿ ಸಂತ್ರಸ್ತೆಯ ಅಕ್ರಮ ಶವಸಂಸ್ಕಾರ ಮತ್ತು ಇದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳ ವಿಚಾರಣೆ ನಡೆಸುವುದು.

ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳ ಹಕ್ಕುಗಳಿಗೆ ಧಕ್ಕೆಯಾಗಿದ್ದರೆ ಅಥವಾ ಧಕ್ಕೆಯಾಗುವ ಸಂಭವವಿದ್ದರೆ ಅಂಥ ಸಂದರ್ಭದಲ್ಲಿ ಆರೋಪಿತರು/ಅರ್ಜಿದಾರರು ವಿಚಾರಣೆಯ ಹಕ್ಕು ಹೊಂದಿರುತ್ತಾರೆ ಎಂದು ಪ್ರತಿವಾದಿಗಳನ್ನಾಗಿ ಸೇರಿಸುವ ಆರೋಪಿಗಳ ಮನವಿಯನ್ನು ವಿಲೇವಾರಿ ಮಾಡಿತು.

“ಪ್ರಕರಣದ ವಿಚಾರಣೆಯ ಮೇಲೆ ನಿಗಾ ಇರಿಸುವುದು ಮತ್ತು ಅಕ್ರಮವಾಗಿ ಶವಸಂಸ್ಕಾರ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಯ ಈ ಹಂತದಲ್ಲಿ ಆರೋಪಿಗಳಿಗೆ ಹೆಚ್ಚೇನೂ ನ್ಯಾಯಿಕ ಹಕ್ಕು/ಅಧಿಕಾರಗಳು ಇರುವುದಿಲ್ಲ.”
ಅಲಾಹಾಬಾದ್‌ ಹೈಕೋರ್ಟ್‌

ಪ್ರಕರಣದ ಪ್ರಚಾರಕ್ಕೆ ಸಂಬಂಧಿಸಿದಂತೆ ಸುದ್ದಿ ಮಾಧ್ಯಮಗಳನ್ನು ನಿಗ್ರಹಿಸುವುದರ ಕುರಿತು ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯಿಸಿದ ಪೀಠವು ಸಿದ್ಧಾರ್ಥ್‌ ವಶಿಷ್ಠ್‌ @ಮೊನು ಶರ್ಮಾ ವರ್ಸಸ್‌ ರಾಜ್ಯ (ಎನ್‌ಸಿಟಿ ಆಫ್‌ ದೆಹಲಿ), ಎಂ ಪಿ ಲೋಹಿಯಾ ವರ್ಸಸ್‌ ಪಶ್ಚಿಮ ಬಂಗಾಳ ರಾಜ್ಯ ಮತ್ತು ಇತರರು ಪ್ರಕರಣ ಮತ್ತು ಇತರೆ ತೀರ್ಪುಗಳಲ್ಲಿನ ಸುಪ್ರೀಂ ಕೋರ್ಟ್‌ ಆದೇಶವನ್ನು ಮಾಧ್ಯಮಗಳು ಪಾಲಿಸುತ್ತವೆ ಎಂದು ನಿರೀಕ್ಷಿಸಲಾಗಿದೆ ಎಂದು ಪೀಠ ಹೇಳಿದೆ.

ಭದ್ರತೆ ದೃಷ್ಟಿಯಿಂದ ಸಂತ್ರಸ್ತೆಯ ಕುಟುಂಬವು ಉತ್ತರ ಪ್ರದೇಶದಿಂದ ದೆಹಲಿಗೆ ಸ್ಥಳಾಂತರಗೊಳ್ಳಲು ಬಯಸಿದೆ. ನ್ಯಾಯಾಲಯದ ವಿಚಾರಣೆ ಮುಗಿದ ಮೇಲೆ ರಕ್ಷಣೆಯ ಕುರಿತು ಕುಟುಂಬ ಸದಸ್ಯರು ಆತಂಕಗೊಂಡಿದ್ದಾರೆ ಎಂದು ಸಂತ್ರಸ್ತೆ ಕುಟುಂಬದ ಪರ ವಕೀಲೆ ಸೀಮಾ ಕುಶ್ವಾಹಾ ವಾದಿಸಿದರು.

ಸಂತ್ರಸ್ತೆಯ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ, ಈ ಭರವಸೆಯನ್ನು ಇದುವರೆಗೂ ಈಡೇರಿಸಲಾಗಿಲ್ಲ. ಸರ್ಕಾರವು ಅಲ್ಪ ಪ್ರಮಾಣದ ಪರಿಹಾರದ ಹಣವನ್ನು ಕುಟುಂಬಕ್ಕೆ ವಿತರಿಸಿದೆ. ತಮಗೆ ಪರಿಹಾರ ಬೇಡ ಎಂದು ಸಂತ್ರಸ್ತೆಯ ಕುಟುಂಬದ ಕೆಲವು ಸದಸ್ಯರು ಹೇಳಿದ್ದಾರೆ ಎಂದು ಆರೋಪಿಸಿ, ಪರಿಹಾರದ ಮೊತ್ತವನ್ನು ವಾಪಸ್‌ ಮಾಡುವಂತೆ ಒತ್ತಾಯಿಸಲಾಗಿದೆ ಎಂದು ಸೀಮಾ ಅವರು ನ್ಯಾಯಾಲಯದ ಗಮನಸೆಳೆದರು.

ಇದಕ್ಕೆ ಸಂಬಂಧಿಸಿದಂತೆ ವಕೀಲೆ ಸೀಮಾ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರ ಪತ್ರವನ್ನು ಉಲ್ಲೇಖಿಸಿದರು. ಆದರೆ, ಅದನ್ನು ನ್ಯಾಯಾಲಯದ ಮುಂದಿರಿಸಲಿಲ್ಲ. ಇದಕ್ಕೆ ತಗಾದೆ ಎತ್ತಿದ ರಾಜ್ಯ ಸರ್ಕಾರವು ಇಂಥ ಯಾವುದೇ ಸೂಚನೆ ನೀಡಲಾಗಿಲ್ಲ ಎಂದು ಹೇಳಿತು.

ನಡುರಾತ್ರಿಯಲ್ಲಿ ಸಂತ್ರಸ್ತೆಯ ಶವ ಸಂಸ್ಕಾರ ಮಾಡುವ ನಿರ್ಧಾರವನ್ನು ತಾನು ಮತ್ತು ಹಾಥ್ರಸ್‌ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕೈಗೊಂಡಿದ್ದಾಗಿ ಹಾಥ್‌ರಸ್‌ ಹಿಂದಿನ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಾಂತ್‌ ವೀರ್‌ ಅವರು ನ್ಯಾಯಪೀಠಕ್ಕೆ ವಿವರಿಸಿದರು.

ಪ್ರಕರಣದ ವಿಚಾರಣೆ ಬಾಕಿ ಇರುವಾಗ ಹಾಥ್‌ರಸ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮುಂದುವರಿಯಲು ಬಿಡುವುದು ನ್ಯಾಯಯುತ ಮತ್ತು ವಿವೇಕಯುತವೇ ಎಂದು ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಎಸ್‌ ವಿ ರಾಜು ಅವರನ್ನು ಹೈಕೋರ್ಟ್‌ ಪ್ರಶ್ನಿಸಿತು.

ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅನೇಕ ಘಟನಾವಳಿಗಳಲ್ಲಿ ಭಾಗಿಯಾಗಿದ್ದಾರೆ ಎಂದ ನ್ಯಾಯಪೀಠವು ಪ್ರಕರಣದ ವಿಚಾರಣೆ ಬಾಕಿ ಇರುವುದರಿಂದ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವುದು ಕಾರ್ಯಸಾಧುವೇ ಎಂದು ಪ್ರಶ್ನಿಸಿತು. ಪ್ರಕರಣದಲ್ಲಿ ನ್ಯಾಯ ಮತ್ತು ಪಾರದರ್ಶಕತೆ ಎತ್ತಿ ಹಿಡಿಯುವ ದೃಷ್ಟಿಯಿಂದ ಜಿಲ್ಲಾಧಿಕಾರಿಯನ್ನು ವರ್ಗಾಯಿಸುವ ಕ್ರಮಕ್ಕೆ ಕಳಂಕ ಹಚ್ಚಬಾರದು ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯದ ಅಭಿಪ್ರಾಯವನ್ನು ರಾಜ್ಯ ಸರ್ಕಾರಕ್ಕೆ ತಿಳಿಸಿ, ಮುಂದಿನ ವಿಚಾರಣೆಯ ವೇಳೆಗೆ ಪ್ರತಿಕ್ರಿಯೆ ನೀಡುವುದಾಗಿ ರಾಜು ಹೇಳಿದರು. ಹಾಥ್‌ರಸ್‌ ಜಿಲ್ಲಾಧಿಕಾರಿ, ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಸರ್ಕಾರದ ಪರವಾಗಿ ಅಫಿಡವಿಟ್‌ ದಾಖಲೆಗಳನ್ನು ಸಲ್ಲಿಸಲಾಯಿತು.

ನವೆಂಬರ್‌ 25ರ ಮಧ್ಯಾಹ್ನ 3.15ಕ್ಕೆ ಮುಂದಿನ ವಿಚಾರಣೆ ನಿಗದಿಗೊಳಿಸಲಾಗಿದೆ.