Hathras Gang Rape 
ಸುದ್ದಿಗಳು

[ಹಾಥ್‌ರಸ್‌] ನ್ಯಾಯಾಲಯಕ್ಕೆ ನುಗ್ಗಿದ ಗುಂಪು, ವಕೀಲರಿಗೆ ಬೆದರಿಕೆ: ಗೋಪ್ಯ ವಿಚಾರಣೆಗೆ ಹೈಕೋರ್ಟ್‌ ಆದೇಶ

ಸದ್ಯಕ್ಕೆ ಗೋಪ್ಯ ವಿಚಾರಣೆ ನಡೆಸುವಂತೆ ಪೀಠವು ಆದೇಶಿಸುವುದರ ಜೊತೆಗೆ ಹಾಥ್‌ರಸ್‌‌ನ ಜಿಲ್ಲಾ ನ್ಯಾಯಾಧೀಶರು ಮತ್ತು ಸಿಆರ್‌ಪಿಎಫ್‌ ಮಹಾನಿರ್ದೇಶಕರಿಗೆ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಆದೇಶಿಸಿದೆ.

Bar & Bench

ಹಾಥ್‌ರಸ್‌ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ಮತ್ತು ಸಾಕ್ಷ್ಯಗಳು ಹಾಗೂ ವಕೀಲರ ರಕ್ಷಣೆಗೆ ಸಂಬಂಧಿಸಿದಂತೆ ಅಲಾಹಾಬಾದ್‌ ಹೈಕೋರ್ಟ್‌ ಶುಕ್ರವಾರ ಹಲವು ನಿರ್ದೇಶನಗಳನ್ನು ನೀಡಿದೆ (ವಿರೋಧದ ಹಕ್ಕು ಮತ್ತು ಗೌರವಯುತ ಅಂತ್ಯ ಸಂಸ್ಕಾರ).

ವಿಚಾರಣೆಯ ಸಂದರ್ಭದಲ್ಲಿ ವಕೀಲರನ್ನು ಒಳಗೊಂಡ ಪುಂಡರ ಗುಂಪು ನ್ಯಾಯಾಲಯದ ಒಳನುಗ್ಗಿ ಸಾಕ್ಷಿಗಳು ಮತ್ತು ದೂರುದಾರರ ವಕೀಲರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಧೀಶರು ವಿಚಾರಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕಾಯಿತು ಎಂದು ಸಂತ್ರಸ್ತೆಯ ಸಹೋದರ ಆರೋಪಿಸಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ರಾಜನ್‌ ರಾಯ್‌ ಮತ್ತು ಜಸ್‌ಪ್ರೀತ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠ ನಿರ್ದೇಶನಗಳನ್ನು ನೀಡಿದೆ.

ವಕೀಲ ಶರದ್‌ ಭಟ್ನಾಗರ್‌ ಅವರು ಸಂತ್ರಸ್ತೆಯ ಸಹೋದರನ ಪರವಾಗಿ ಅಫಿಡವಿಟ್‌ ಸಲ್ಲಿಸಿದ್ದು, ಕೆಲವು ಮಧ್ಯಂತರ ನಿರ್ದೇಶನಗಳನ್ನು ನೀಡುವಂತೆ ಅಫಿಡವಿಟ್‌ನಲ್ಲಿ ನ್ಯಾಯಾಲಯವನ್ನು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ, ಸದ್ಯಕ್ಕೆ ಗೋಪ್ಯ ವಿಚಾರಣೆ ನಡೆಸುವಂತೆ ಪೀಠವು ಆದೇಶಿಸಿದ್ದು, ಅದರ ಜೊತೆಗೆ ಹಾಥ್‌ರಸ್‌‌ನ ಜಿಲ್ಲಾ ನ್ಯಾಯಾಧೀಶರು ಮತ್ತು ಕೇಂದ್ರ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಮಹಾನಿರ್ದೇಶಕರಿಗೆ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಆದೇಶಿಸಿದೆ. ವಿಚಾರಣಾಧೀನ ನ್ಯಾಯಾಲಯದಲ್ಲಿನ ಕಲಾಪಕ್ಕೆ ಅಡ್ಡಿಪಡಿಸಿದರೆ ಅಥವಾ ಸಂತ್ರಸ್ತೆಯ ಕುಟುಂಬ ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಹ ನ್ಯಾಯಾಲಯವು ಎಚ್ಚರಿಸಿದೆ.

ಹಾಥ್‌ರಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ಕೊಲೆ ಹಾಗೂ ಆನಂತರ ತಡರಾತ್ರಿಯಲ್ಲಿ ಕುಟುಂಬದವರಿಗೆ ಶವದ ಮುಖ ನೋಡಲು ಅವಕಾಶ ಮಾಡಿಕೊಡದೇ ಆಕೆಯ ಅಂತ್ಯಸಂಸ್ಕಾರ ಮಾಡಿದ್ದಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸ್ವಯಂಪ್ರೇರಿತವಾಗಿ ಅಲಾಹಾಬಾದ್‌ ಹೈಕೋರ್ಟ್‌ ದೂರು ದಾಖಲಿಸಿಕೊಂಡಿತ್ತು.