Hathras Gang Rape, Allahabad HC
Hathras Gang Rape, Allahabad HC 
ಸುದ್ದಿಗಳು

ಹಾಥ್‌ರಸ್ ಪ್ರಕರಣದ ತನಿಖೆಯಲ್ಲಿ ನೇರವಾಗಿ ಪಾಲ್ಗೊಳ್ಳದವರು ಸಾರ್ವಜನಿಕವಾಗಿ ಮಾತನಾಡುವಂತಿಲ್ಲ - ಅಲಾಹಾಬಾದ್ ಹೈಕೋರ್ಟ್

Bar & Bench

ಹಾಥ್‌ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶ ಆಡಳಿತ ನಡೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಅಲಾಹಾಬಾದ್ ಹೈಕೋರ್ಟ್‌ ಆರೋಪಿಸಲಾದ ಅಪರಾಧ ಅಥವಾ ಸಾಕ್ಷ್ಯ ಸಂಗ್ರಹಿಸಲ್ಪಟ್ಟಿರುವುದನ್ನು ಆಧರಿಸಿ ತನಿಖೆಯ ಜೊತೆ ನೇರವಾಗಿ ಭಾಗಿಯಾಗಿರದ ಯಾವುದೇ ಅಧಿಕಾರಿಯು ಸಾರ್ವಜನಿಕವಾಗಿ ಮಾತನಾಡಬಾರದು ಎಂದು ತಾಕೀತು ಮಾಡಿದೆ. ಇದರಿಂದ ಸಾರ್ವಜನಿಕವಾಗಿ ಅನವಶ್ಯಕ ಅಂತೆಕಂತೆಗಳು ಸೃಷ್ಟಿಯಾಗಿ ಅನುಮಾನಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ. ಜನರಿಗೆ ಕಾನೂನಿನ ಸೂಕ್ಷ್ಮತೆಯ ಅರಿವಿರುವುದಿಲ್ಲ. ಇದರಿಂದ ಉಭಯ ಕಡೆಯವರು ಭಾವನಾತ್ಮಕವಾಗಿ ಪ್ರಚೋದನೆಗೆ ಒಳಗಾಗಬಹುದು” ಎಂದು ಈಚೆಗೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ.

ಘಟನೆ ನಡೆದ ಬೆನ್ನಿಗೆ ಅಕ್ಟೋಬರ್ 1ರಂದು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ರಾಜನ್ ರಾಯ್ ನೇತೃತ್ವದ ವಿಭಾಗೀಯ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ವಲಯ ಹಾಗೂ ಸರ್ಕಾರಕ್ಕೆ ಹಲವು ಗಂಭೀರ ಸಲಹೆ-ಸೂಚನೆಗಳನ್ನು ನೀಡಿದ್ದು, ನವೆಂಬರ್ 2ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದೆ.

ಹಾಥ್‌ರಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ದಲಿತ ಯುವತಿಯ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸದೇ ಅವರ ಅನುಮತಿಯನ್ನೂ ಪಡೆಯದೇ ಮಧ್ಯರಾತ್ರಿಯಲ್ಲಿ ಆಕೆಯ ಅಂತ್ಯ ಸಂಸ್ಕಾರ ನಡೆಸಿದ್ದ ಉತ್ತರ ಪ್ರದೇಶ ಆಡಳಿತವು ದೇಶಾದ್ಯಂತ ಖಂಡನೆಗೆ ಒಳಗಾಗಿತ್ತು. ಸ್ಥಳೀಯ ಆಡಳಿತವು ಜಂಟಿಯಾಗಿ ಸಂತ್ರಸ್ತೆಯ ಅಂತ್ಯಸಂಸ್ಕಾರ ನಡೆಸುವ ನಿರ್ಧಾರ ಕೈಗೊಂಡಿದ್ದು, ಹಾಥ್‌ರಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ಅನ್ವಯ ಚಿತೆಗೆ ಬೆಂಕಿ ಇಡಲಾಗಿದೆ ಎಂಬುದನ್ನು ವಿಭಾಗೀಯ ಪೀಠವು ಪರಿಗಣಿಸಿದ್ದು, ಹೀಗೆ ಹೇಳಿದೆ.

“ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ರಾಜ್ಯ ಸರ್ಕಾರದ ಅಧಿಕಾರಿ ವಲಯವು ಕೈಗೊಂಡಿರುವ ನಿರ್ಧಾರವು ಮೇಲ್ನೋಟಕ್ಕೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರ ಮಾನವ ಹಕ್ಕುಗಳನ್ನು ಕಸಿಯುವ ಪ್ರಯತ್ನವಾಗಿದೆ. ಸಂತ್ರಸ್ತೆಯು ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಗೌರವಯುತವಾಗಿ ಶವಸಂಸ್ಕಾರಕ್ಕೊಳಪಡುವ ಹಕ್ಕು ಹೊಂದಿದ್ದು, ಅದನ್ನು ಕುಟುಂಬ ಸದಸ್ಯರೇ ಪ್ರಮುಖವಾಗಿ ನಡೆಸಬೇಕು. ಸಂಸ್ಕಾರಗಳಲ್ಲಿ ಒಂದಾದ ಅಂತಿಮ ಸಂಸ್ಕಾರದಂಥ ಪ್ರಮುಖ ವಿಧಿವಿಧಾನಗಳನ್ನು ಕಾನೂನು ಮತ್ತು ಸುವ್ಯವಸ್ಥೆಯ ನೆಪವೊಡ್ಡಿ ತಡೆಯಲಾಗದು.”
ಅಲಾಹಾಬಾದ್ ಹೈಕೋರ್ಟ್‌
“ಸಂತ್ರಸ್ತೆಯ ಶವವನ್ನು ಕನಿಷ್ಠ ಅರ್ಧ ಗಂಟೆಯವರೆಗೆ ಕುಟುಂಬ ಸದಸ್ಯರಿಗೆ ನೀಡಿದ ಬಳಿಕ ಅವರು ತಮ್ಮ ಮನೆಯಲ್ಲಿ ಸಂಪ್ರದಾಯಬದ್ಧವಾಗಿ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಅದೇ ರಾತ್ರಿ ಅಥವಾ ಮಾರನೇಯ ದಿನ ಸಂಸ್ಕಾರ ನೆರವೇರಿಸುವುದಕ್ಕೆ ಆಡಳಿತಶಾಹಿ ಏಕೆ ಅವಕಾಶ ಮಾಡಿಕೊಟ್ಟಿಲ್ಲ ಎಂಬುದಕ್ಕೆ ಈ ಸಂದರ್ಭದಲ್ಲಿ ನಮಗೆ ಯಾವುದೇ ತೆರನಾದ ಸರಿಯಾದ ಉತ್ತರ ಸಿಗುತ್ತಿಲ್ಲ.”
ಅಲಾಹಾಬಾದ್ ಹೈಕೋರ್ಟ್‌

ವಿಚಾರಣೆಗೆ ಒಳಪಟ್ಟಿರುವ ಕ್ರಿಮಿನಲ್ ಘಟನೆಯಾಚೆಗೆ ತಡರಾತ್ರಿಯಲ್ಲಿ ತರಾತುರಿಯಲ್ಲಿ ಸಂತ್ರಸ್ತೆಯ ಅಂತ್ಯ ಸಂಸ್ಕಾರ ನಡೆಸಿರುವುದು ಸಂವಿಧಾನದತ್ತವಾಗಿ ದೊರೆತಿರುವ 21 ಮತ್ತು 25ನೇ ವಿಧಿಯ ಅಡಿ ಮೂಲಭೂತ ಹಕ್ಕುಗಳ ಉಲ್ಲಂಘನೆಯೇ ಎಂಬದನ್ನು ಪರಿಶೀಲಿಸಬೇಕಿದೆ ಎಂದು ಹೈಕೋರ್ಟ್ ಹೇಳಿದೆ.

“ಸಂವಿಧಾನ ಪರಿಗಣಿಸಿರುವ ಜನರ ಸೂಕ್ಷ್ಮ ವಿಚಾರಗಳಾದ ಕುಟುಂಬದ ಸಂಪ್ರದಾಯಗಳಿಗೆ ಅನುಗುಣವಾಗಿ ಗೌರವಯುತ ಅಂತ್ಯಸಂಸ್ಕಾರ ನಡೆಸುವುದನ್ನು ಗೌರವಿಸಬೇಕು. ಇದಕ್ಕಾಗಿ ಕಾನೂನು ಮತ್ತು ಸಮಸ್ಯೆ ಉದ್ಭವಿಸುತ್ತದೆ ಎಂದಾದರೆ ಎರಡೂ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಜವಾಬ್ದಾರಿಯುತವಾಗಿ ಮುನ್ನಡೆಯಬೇಕು. ಇಂಥ ಅಮೂಲ್ಯವಾದ ಹಕ್ಕುಗಳನ್ನು ವಿವೇಚನಾರಹಿತವಾಗಿ ಅಥವಾ ಆಕಸ್ಮಿಕವಾಗಿ ಬುಡಮೇಲು ಮಾಡಲಾಗದು. ಅದರಲ್ಲೂ ವಿಶೇಷವಾಗಿ ತಳವರ್ಗದವರು, ಅವಿದ್ಯಾವಂತರು ಮತ್ತು ಬಡವರು ಇದರಿಂದ ವಂಚಿತವಾಗುವ ಸಾಧ್ಯತೆ ಇರುತ್ತದೆ” ಎಂದು ನ್ಯಾಯಪೀಠವು ಒತ್ತಿ ಹೇಳಿದೆ.

ಭವಿಷ್ಯದಲ್ಲಿ ಇಂಥದ್ದೇ ಸಂದರ್ಭ ನಿರ್ಮಾಣವಾದರೆ ಜಿಲ್ಲಾಡಳಿತ ಅನುಸರಿಸಬೇಕಾದ ಕ್ರಮಗಳನ್ನು ಒಳಗೊಂಡ ಮಾರ್ಗಸೂಚಿಯ ಕರಡನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ಇದೇ ಸಂದರ್ಭದಲ್ಲಿ ಕುಟುಂಬ ಸದಸ್ಯರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಗಮನಹರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ಅಥವಾ ಕೇಂದ್ರೀಯ ತನಿಖಾ ದಳ ಸೇರಿದಂತೆ ಬೇರಾವುದೇ ಸಂಸ್ಥೆ ತನಿಖೆ ನಡೆಸಿದರೂ ಗೌಪ್ಯತೆ ಕಾಪಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಯಾವುಧೇ ವರದಿಯನ್ನು ಸಾರ್ವಜನಿಕಗೊಳಿಸಬಾರದು ಎಂದು ನ್ಯಾಯಪೀಠ ಹೇಳಿದೆ.

ಸಮಾಜದಲ್ಲಿನ ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಹಾಗೂ ಸಂತ್ರಸ್ತೆಯ ಕುಟುಂಬದ ಸದಸ್ಯರ ಹಕ್ಕಿಗೆ ಧಕ್ಕೆಯಾಗದ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳಿಗೆ ನ್ಯಾಯಪೀಠ ಸೂಚಿಸಿದೆ.

ಸಂತ್ರಸ್ತೆಯ ಕುಟುಂಬಕ್ಕೆ ಘೋಷಿಸಲಾಗಿರುವ ಪರಿಹಾರದ ಹಣವನ್ನು ಶೀಘ್ರವಾಗಿ ಅವರಿಗೆ ತಲುಪಿಸಬೇಕು. ಒಂದೊಮ್ಮೆ ಸಂತ್ರಸ್ತೆಯ ಕುಟುಂಬಸ್ಥರು ಪರಿಹಾರ ಪಡೆಯಲು ನಿರಾಕರಿಸಿದರೆ ಅದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಡಬೇಕು. ನ್ಯಾಯಾಲಯದ ಸೂಚನೆಯಂತೆ ಅದನ್ನು ಖರ್ಚು ಮಾಡುವಂತೆ ಸೂಚಿಸಲಾಗಿದೆ.

ಘಟನೆ ನಡೆದ ಸಂದರ್ಭದಲ್ಲಿ ಹಾಥ್‌ರಸ್ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ, ಅಮಾನತುಗೊಂಡಿರುವ ವಿಕ್ರಾಂತ್ ವೀರ್ ಅವರು ವಿಚಾರಣೆಯಲ್ಲಿ ಪಾಲ್ಗೊಂಡಿರಲಿಲ್ಲ. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿರುವಂತೆ ವಿಕ್ರಾಂತ್ ವೀರ್‌ಗೆ ತಿಳಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ವಿಕ್ರಾಂತ್ ವೀರ್ ಮತ್ತು ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಲಕ್ಸ್‌ಕರ್ ಅವರಿಗೆ ಘಟನೆಗೆ ಸಂಬಂಧಿಸಿದಂತೆ ತಮ್ಮದೇ ಆದ ಅಫಿಡವಿಟ್ ಸಲ್ಲಿಸುವ ಸ್ವಾತಂತ್ರ್ಯವನ್ನೂ ನ್ಯಾಯಾಲಯ ಕಲ್ಪಿಸಿದೆ.

ವಿಚಾರಣೆಯ ಸಂದರ್ಭದಲ್ಲಿ ಸಂತ್ರಸ್ತೆಯ ಕುಟುಂಬಸ್ಥರು ಅಂದು ನಡೆದ ಘಟನೆಯನ್ನು ಎಳೆಎಳೆಯಾಗಿ ನ್ಯಾಯಾಲಯದ ಮುಂದೆ ಬಿಡಿಸಿಟ್ಟರು. ಹಾಥ್ ರಸ್ ಜಿಲ್ಲಾಧಿಕಾರಿಯು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವಾದಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿದರು.

ಹಾಥ್‌ ರಸ್ ಹಂಗಾಮಿ ಜಿಲ್ಲಾ ನ್ಯಾಯಾಧೀಶ ಆಶೀಶ್ ಜೈನ್, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್ ಎಸ್‌ ವೀರ್ವನ್ ಅವರು ಸಂತ್ರಸ್ತೆಯ ಕುಟುಂಬಸ್ಥರನ್ನು ಅವರ ಹಳ್ಳಿಯಿಂದ ಲಖನೌನ ಅಲಹಾಬಾದ್ ನ್ಯಾಯಾಲಯಕ್ಕೆ ರಕ್ಷಣೆಯಲ್ಲಿ ಕರೆತಂದಿದ್ದರು.

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಸ್ಥಿ, ಪೊಲೀಸ್ ಮಹಾನಿರ್ದೇಶಕ ಎಚ್‌ ಸಿ ಅವಸ್ಥಿ, ಲಖನೌನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್, ಹಾಥ್ ರಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ಹಾಜರಿದ್ದರು.

ಹಿರಿಯ ವಕೀಲ ಜೆ ಎನ್ ಮಾಥೂರ್ ಮತ್ತು ವಕೀಲ ಅಭಿನವ್ ಭಟ್ಟಾಚಾರ್ಯ ಅವರು ಅಮಿಕಸ್ ಕ್ಯೂರಿಯಾಗಿ ಭಾಗಿಯಾಗಿದ್ದರು. ವಕೀಲೆ ಸೀಮಾ ಕುಶ್ವಾಹಾ ಅವರು ಸಂತ್ರಸ್ತೆಯ ಕುಟುಂಬವನ್ನು ಪ್ರತಿನಿಧಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲೆ ಐಶ್ವರ್ಯಾ ಭಟಿ ನ್ಯಾಯಾಲಯದಲ್ಲಿ ಹಾಜರಿದ್ದರು. ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿನೋದ್ ಕುಮಾರ್ ಮತ್ತು ಸ್ಥಾಯಿ ವಕೀಲರಾದ ಮನೀಷ್ ಮಿಶ್ರಾ ಅವರು ಐಶ್ವರ್ಯಾ ಅವರಿಗೆ ನೆರವು ನೀಡಿದರು.