Hathras Gang Rape 
ಸುದ್ದಿಗಳು

[ಹಾಥ್‌ರಸ್‌] ಸೂಕ್ತ ಅಂತ್ಯಕ್ರಿಯೆಗಾಗಿ ಕಟ್ಟುನಿಟ್ಟಿನ ನಿಯಮ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಿ: ಅಲಾಹಾಬಾದ್ ಹೈಕೋರ್ಟ್

ಎಸ್ಒಪಿಯನ್ನು ಶುಷ್ಕವಾಗಿ ಪಾಲಿಸದೇ, ಅದರ ಉದ್ದೇಶವನ್ನು ಸೋಲಿಸುವ ಬದಲು ಗುರಿ ಸಾಧಿಸುವ ರೀತಿಯಲ್ಲಿ ಅನುಸರಿಸಬೇಕು ಎಂದು ನ್ಯಾಯಮೂರ್ತಿಗಳಾದ ಜಸ್‌ಪ್ರೀತ್‌ ಸಿಂಗ್ ಮತ್ತು ರಂಜನ್ ರಾಯ್ ಅವರಿದ್ದ ಪೀಠ ತಿಳಿಸಿತು.

Bar & Bench

ಮೃತದೇಹಗಳ ಅಂತ್ಯಕ್ರಿಯೆ ನಡೆಸುವ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಂವೇದನಾಶೀಲಗೊಳಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಶುಕ್ರವಾರ ಸೂಚಿಸಿರುವ ಅಲಹಾಬಾದ್ ಹೈಕೋರ್ಟ್‌ ಈ ಕುರಿತ ಎಸ್‌ಒಪಿಯನ್ನು (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿತು [ಸಭ್ಯ ಮತ್ತು ಗೌರವಾನ್ವಿತ ರೀತಿಯಲ್ಲಿ ಅಂತ್ಯಕ್ರಿಯೆ ನಡೆಸುವ ಸಂಬಂಧ ಹೈಕೋರ್ಟ್‌ನ ಸ್ವಯಂ ಪ್ರೇರಿತ ಮೊಕದ್ದಮೆ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಎಸ್‌ಒಪಿಯನ್ನು ಶುಷ್ಕವಾಗಿ ಪಾಲಿಸದೇ ಅದರ ಉದ್ದೇಶವನ್ನು ಸೋಲಿಸುವ ಬದಲು ಗುರಿ ಸಾಧಿಸುವ ರೀತಿಯಲ್ಲಿ ಅನುಸರಿಸಬೇಕು ಎಂದು ನ್ಯಾಯಮೂರ್ತಿಗಳಾದ ಜಸ್‌ಪ್ರೀತ್‌ ಸಿಂಗ್ ಮತ್ತು ರಂಜನ್ ರಾಯ್ ಅವರಿದ್ದ ಪೀಠ ತಿಳಿಸಿತು.

“ಸ್ಕೀಂ ಅಥವಾ ಎಸ್‌ಒಪಿಯ ಪಾಲನೆ ಕೇವಲ ಕಣ್ಣೊರೆಸುವಂತಿರಬಾರದು ಅಥವಾ ಬರೀ ಔಪಚಾರಿಕತೆಯದ್ದಾಗಿರಬಾರದು. ಸ್ಕೀಂ ಅಥವಾ ಎಸ್‌ಒಪಿಯ ಉದ್ದೇಶ ಅತ್ಯುನ್ನತವಾಗಿದ್ದು ಈಗಾಗಲೇ ಇಲ್ಲಿ ಉಲ್ಲೇಖಿಸಿರುವ ಮೌಲ್ಯಯುತವಾದ ಸಾಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳನ್ನು ತಿಳಿಸುತ್ತದೆ. ಆದ್ದರಿಂದ ಅಂತಹ ಹಕ್ಕುಗಳಿಗೆ ಸಂಬಂಧಿಸಿದ ಸಂಪೂರ್ಣ ಪ್ರಕ್ರಿಯೆಯನ್ನು ಗಂಭೀರ ರೀತಿಯಲ್ಲಿ ನಡೆಸಬೇಕು ಎಂದು ನ್ಯಾಯಾಲಯ ಹೇಳಿತು.

ವ್ಯಕ್ತಿ ಘನತೆ ಎತ್ತಿಹಿಡಿಯುವ ರೀತಿಯಲ್ಲಿ ಯೋಗ್ಯ ಅಂತ್ಯ ಸಂಸ್ಕಾರ ನಡೆಸುವ ಹಕ್ಕು ಸಂವಿಧಾನದ 21ನೇ ವಿಧಿಯಡಿಯಲ್ಲಿ ಒದಗಿಸಲಾದ ಜೀವಿಸುವ ಹಕ್ಕಿನ ಭಾಗವಾಗಿದೆ. ಸತ್ತ ವ್ಯಕ್ತಿಯೂ ತನ್ನ ದೇಹವನ್ನು ಗೌರವ ಮತ್ತು ಘನತೆಯಿಂದ ಪರಿಗಣಿಸುವ ಹಕ್ಕು ಪಡೆದಿರುತ್ತಾನೆ. ಆತ ಬದುಕಿದ್ದರೆ ಆತ ತನ್ನ ಸಂಪ್ರದಾಯ, ಸಂಸ್ಕೃತಿ ಮತ್ತು ಧರ್ಮಕ್ಕೆ ಒಳಪಟ್ಟಿರುತ್ತಾನೆ. ಈ ಹಕ್ಕುಗಳು ಸತ್ತವರಿಗೆ ಮಾತ್ರವಲ್ಲ, ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಅಂತಿಮ ಸಂಸ್ಕಾರ ಮಾಡುವ ಅವರ ಕುಟುಂಬಕ್ಕೂ ಇವೆ ಎಂದು ಪೀಠ ಹೇಳಿತು.

ಸಂಬಂಧಪಟ್ಟವರು ಸರ್ಕಾರ ಹೊರಡಿಸಿರುವ ಎಸ್‌ಒಪಿ ಬಗ್ಗೆ ತಿಳಿವಳಿಕೆ ಮೂಡಿಸಿಕೊಳ್ಳುವ ನಿಟ್ಟಿನಲ್ಲಿ ಅದನ್ನು ಪೊಲೀಸ್ ಠಾಣೆಗಳು, ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾ ಕೇಂದ್ರಗಳು, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಇತ್ಯಾದಿ ಕಡೆಗಳಲ್ಲಿ ಪ್ರಚುರಪಡಿಸಬೇಕು. ಉತ್ತರಪ್ರದೇಶದೆಲ್ಲೆಡೆ ಈ ಸೂಚನೆಯನ್ನು ಪಾಲಿಸುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತು.

ಹಾಥ್‌ರಸ್‌ ಪ್ರಕರಣದಲ್ಲಿ ಉದ್ಭವಿಸಿರುವಂತಹ ವಿವಾದಗಳು ಮತ್ತು ತೊಡಕುಗಳು ಭವಿಷ್ಯದಲ್ಲಿ ನಡೆಯದಂತೆ ಇಂತಹ ಸ್ಕೀಂ/ಎಸ್‌ಒಪಿ ರೂಪಿಸುವಲ್ಲಿ ಅಮಿಕಸ್ ಕ್ಯೂರಿ, ವಕೀಲರು ಹಾಗೂ ಸರ್ಕಾರಿ ಅಧಿಕಾರಿಗಳ ಶ್ರಮವನ್ನು ಪೀಠ ಶ್ಲಾಘಿಸಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Suo_Moto_Inre_Rigt_To_Decent_And_Dignified_Last_Rites_Cremation_v__State.pdf
Preview