Hathras Gang Rape 
ಸುದ್ದಿಗಳು

ಹಾಥ್‌ರಸ್‌ ಅತ್ಯಾಚಾರ ಸಂತ್ರಸ್ತೆಯ ಸಂಬಂಧಿಗಳಿಗೆ ಉದ್ಯೋಗ, ಕುಟುಂಬ ಸ್ಥಳಾಂತರ ಪರಿಗಣಿಸಲು ಅಲಾಹಾಬಾದ್ ಹೈಕೋರ್ಟ್ ಸೂಚನೆ

ಕುಟುಂಬಕ್ಕೆ ಉದ್ಯೋಗದ ಅವಶ್ಯಕತೆಯಿದ್ದು ಸರ್ಕಾರ ನೀಡಿದ ಭರವಸೆಯು ತತ್ಕಾಲೀನ ನಿರ್ಧಾರ ಅಥವಾ ಉತ್ಸಾಹದಿಂದ ಕೈಗೊಂಡಿದುದಾಗಿರಲಿಲ್ಲ ಎಂದ ನ್ಯಾಯಾಲಯ.

Bar & Bench

ಹಾಥ್‌ರಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬ ಸದಸ್ಯರೊಬ್ಬನಿಗೆ ಉದ್ಯೋಗ ನೀಡಬೇಕು ಮತ್ತು ಸಾಮಾಜಿಕ ಆರ್ಥಿಕ ಅಂಶಗಳನ್ನು ಪರಿಗಣಿಸಿ ಕುಟುಂಬವನ್ನು ರಾಜ್ಯದ ಮತ್ತೊಂದು ಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಅಲಾಹಾಬಾದ್‌ ಹೈಕೋರ್ಟ್‌ ಲಖನೌ ಪೀಠ ಮಂಗಳವಾರ ಸೂಚಿಸಿದೆ [ಹೈಕೋರ್ಟ್‌ ಸ್ವಯಂಪ್ರೇರಿತ ದೂರು ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವಣ ಪ್ರಕರಣ].

ಕಾನೂನು ಸಮಸ್ಯೆಗಳು ಶಾಸನಬದ್ಧ ನಿಯಮಾವಳಿಗಳ ವ್ಯಾಖ್ಯಾನ ಒಳಗೊಂಡಿರುವ ಕಾರಣ ಈ ಅಂಶಗಳನ್ನು ಪರಿಗಣಿಸಲು ವಿಶೇಷ ನ್ಯಾಯಾಲಯಕ್ಕಿಂತಲೂ ಹೈಕೋರ್ಟ್ ಸೂಕ್ತವೆಂದು ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಜಸ್‌ಪ್ರೀತ್‌ ಸಿಂಗ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ನ್ಯಾಯಾಲಯ ಅವಲೋಕನದ ಮುಖ್ಯ ಅಂಶಗಳು

  • ಸಂತ್ರಸ್ತೆಯ ಕುಟುಂಬ ಸಮಾಜದ ದೀನ ವರ್ಗಕ್ಕೆ ಸೇರಿದೆ. ʼಕುಟುಂಬದ ವೈಯಕ್ತಿಕ ಕುಂದುಕೊರತೆಗಳನ್ನು ಆಲಿಸಲಾಗದುʼ ಎಂಬ ರಾಜ್ಯ ಸರ್ಕಾರದ ವಾದ ಒಪ್ಪುವಂತದ್ದಲ್ಲ. ಅಪರಾಧ ಎಸಗಿದ್ದಕ್ಕಾಗಿ ಪರಿಹಾರ ಪಡೆಯಲಾಗುತ್ತಿದೆ.

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರ ವಿರುದ್ಧದ ದೌರ್ಜನ್ಯ ತಡೆಯಲು ಈಗಾಗಲೇ ಕಾಯಿದೆ ರೂಪುಗೊಂಡಿದೆ. ಎಸ್‌ಸಿ/ಎಸ್‌ಟಿ ಕಾಯಿದೆ ಮತ್ತು ಅದರಡಿ ರೂಪಿಸಲಾದ ನಿಯಮಗಳ ಪ್ರಕಾರ ಅವರಿಗೆ ಪರಿಹಾರ ಒದಗಿಸುವುದು ಸರ್ಕಾರದ ಹೊಣೆ.

  • ಕುಟುಂಬ ಅಲೆದಾಡುವಂತೆ ಮಾಡುವುದಕ್ಕೆ ನ್ಯಾಯಾಲಯದ ಒಪ್ಪಿಗೆ ಇಲ್ಲ. ಯಾವುದೇ ಸಂಕೀರ್ಣ ಮತ್ತು ವಾಸ್ತವಿಕ ಸಮಸ್ಯೆ ಇಲ್ಲದಿರುವುದರಿಂದ ಮನವಿ ಪುರಸ್ಕರಿಸಲಾಗುತ್ತಿದೆ.

  • ಉದ್ಯೋಗಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಭರವಸೆ ನೀಡದಿದ್ದರೂ ಕೂಡ ಕುಟುಂಬ ಸದಸ್ಯರು ಉದ್ಯೋಗ ಪಡೆಯಲು ಅರ್ಹರಾಗಿದ್ದಾರೆ. ಸಹೋದರ ಮತ್ತು ಸಹೋದರಿಯನ್ನು ಕೈಬಿಟ್ಟು ಬಂಧುಗಳು ಎಂಬ ಪದವನ್ನು ನಿರ್ಬಂಧಿತ ಅರ್ಥದಲ್ಲಿ ನೋಡುವ ಅಗತ್ಯವಿಲ್ಲ.

  • ಅಸ್ಪಷ್ಟತೆಯ ಸಂದರ್ಭದಲ್ಲಿ ಕಾಯಿದೆಯ ಉದ್ದೇಶವನ್ನು ಹೇಳುವ ವ್ಯಾಖ್ಯಾನಕ್ಕೆ ಆದ್ಯತೆ ನೀಡಬೇಕು ಮತ್ತು ಕಾಯಿದೆಯ ಉದ್ದೇಶ ಸೋಲಿಸುವಂತಹ ವ್ಯಾಖ್ಯಾನಕ್ಕಲ್ಲ.

  • ಕುಟುಂಬಕ್ಕೆ ಉದ್ಯೋಗದ ಅವಶ್ಯಕತೆಯಿದ್ದು ಸರ್ಕಾರ ನೀಡಿದ ಭರವಸೆ ತತ್ಕಾಲೀನ ನಿರ್ಧಾರ ಅಥವಾ ಉತ್ಸಾಹದಿಂದ ಕೈಗೊಂಡಿದ್ದಾಗಿರಲಿಲ್ಲ.

  • ನ್ಯಾಯಾಲಯದ ಆದೇಶ ಸ್ವೀಕರಿಸಿದ ಮೂರು ತಿಂಗಳೊಳಗೆ ಕುಟುಂಬದ ಸದಸ್ಯರ ಅರ್ಹತೆಗೆ ಸೂಕ್ತವಾದ ಉದ್ಯೋಗ ಒದಗಿಸಬೇಕು.

  • ಘಟನೆ ಬೆಳಕಿಗೆ ಬಂದ ನಂತರ ಕುಟುಂಬ ಅದೇ ಹಳ್ಳಿಯಲ್ಲಿ ವಾಸ ಮಾಡುತ್ತಿರುವುದು ಸುಲಭವಲ್ಲ ಎಂದು ಯಾರು ಬೇಕಾದರೂ ಊಹಿಸಬಹುದು. ಕುಟುಂಬದ ಸಾಮಾಜಿಕ ಆರ್ಥಿಕ ಅಂಶಗಳನ್ನು ಪರಿಗಣಿಸಿ, ಮಕ್ಕಳ ವಿದ್ಯಾಭ್ಯಾಸದ ವಿಚಾರವನ್ನು ಗಣನೆಗೆ ತೆಗೆದುಕೊಂಡು ಆ ಕುಟುಂಬವನ್ನು ಹಾಥ್‌ರಸ್‌ ಗ್ರಾಮದ ಆಚೆಗೆ ರಾಜ್ಯದ ಮತ್ತೊಂದು ಭಾಗಕ್ಕೆ ಸ್ಥಳಾಂತರಿಸುವುದನ್ನು ಆರು ತಿಂಗಳೊಳಗೆ ಪರಿಗಣಿಸಬೇಕು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Suo_Moto_Inre_Right_To_Decent_And_Dignified_Last_Rites__Cremation_v__State.pdf
Preview