Hathras Gang Rape 
ಸುದ್ದಿಗಳು

ಹಾಥ್‌ರಸ್‌ ಅತ್ಯಾಚಾರ ಪ್ರಕರಣ: ಸಿಬಿಐ, ಜಿಲ್ಲಾ ನ್ಯಾಯಾಲಯದಿಂದ ವಿಚಾರಣಾ ಪ್ರಗತಿ ವರದಿ ಕೇಳಿದ ಅಲಾಹಾಬಾದ್‌ ಹೈಕೋರ್ಟ್‌

ಉತ್ತರ ಪ್ರದೇಶದ ಹಾಥ್‌ರಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ಹಾಗೂ ರಾತ್ರೋರಾತ್ರಿ ಸಂತ್ರಸ್ತೆಯ ಅಂತ್ಯಸಂಸ್ಕಾರ ಮಾಡಿದ ಜಿಲ್ಲಾಡಳಿತದ ನಡೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದೆ.

Bar & Bench

ಹಾಥ್‌ರಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ವಿಚಾರಣೆಯಲ್ಲಿ ಅಗಿರುವ ಪ್ರಗತಿಯ ಕುರಿತು ಅಫಿಡವಿಟ್‌ ಸಲ್ಲಿಸುವಂತೆ ಅಲಾಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಮಂಗಳವಾರ ಸೂಚಿಸಿದೆ [ಸ್ವಯಂಪ್ರೇರಿತ ಪ್ರಕರಣ: ಸಭ್ಯತೆಯ, ಘನತೆಯ ಅಂತ್ಯಸಂಸ್ಕಾರದ ಹಕ್ಕು].

ಉತ್ತರ ಪ್ರದೇಶದ ಹಾಥ್‌ರಸ್‌ನಲ್ಲಿ ಯುವತಿಯ ಮೇಲೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ಹಾಗೂ ರಾತ್ರೋರಾತ್ರಿ ಸಂತ್ರಸ್ತೆಯ ಅಂತ್ಯಸಂಸ್ಕಾರ ಮಾಡಿದ ಜಿಲ್ಲಾಡಳಿತದ ನಡೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದೆ.

ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ರಂಜನ್‌ ರಾಯ್‌ ಮತ್ತು ಜಸ್‌ಪ್ರೀತ್‌ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ವಿಚಾರಣಾ ನ್ಯಾಯಾಲಯದಿಂದ ಪ್ರಕರಣದ ಕುರಿತ ವಿಚಾರಣೆಯ ಸ್ಥಿತಿಗತಿ ವರದಿಯನ್ನು ಪಡೆಯುವಂತೆಯೂ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿತು.

"ಮುಂದಿನ ವಿಚಾರಣೆಗೂ ಮುನ್ನ ತನಿಖೆಯ ಪ್ರಗತಿಯ ಕುರಿತು ಸಿಬಿಐನ ಸಕ್ಷಮ ಅಧಿಕಾರಿಯ ಅಫಿಡವಿಟ್‌ ಅನ್ನು ಸಿಬಿಐ ಪರ ವಕೀಲರು ಸಲ್ಲಿಸಬೇಕು. ಜಿಲ್ಲಾ ನ್ಯಾಯಾಧೀಶರ ಮುಖೇನ ವಿಚಾರಣಾ ನ್ಯಾಯಾಲಯದಲ್ಲಿನ ಪ್ರಕರಣದ ಸ್ಥಿತಿಗತಿ ವರದಿಗೆ ಸಹ ಮನವಿ ಮಾಡಬೇಕು," ಎಂದು ನ್ಯಾಯಾಲಯ ನಿರ್ದೇಶಿಸಿತು.

ಮೃತದೇಹಗಳ ಅಂತ್ಯಕ್ರಿಯೆ ನಡೆಸುವ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಂವೇದನಾಶೀಲಗೊಳಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಈ ಹಿಂದಿನ ವಿಚಾರಣೆ ವೇಳೆ ಅಲಹಾಬಾದ್ ಹೈಕೋರ್ಟ್‌ ಸೂಚಿಸಿತ್ತು. ಈ ಕುರಿತ ಎಸ್‌ಒಪಿಯನ್ನು (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿತ್ತು. ಎಸ್‌ಒಪಿಯ ಪಾಲನೆ ಕೇವಲ ಕಣ್ಣೊರೆಸುವಂತಿರಬಾರದು ಅಥವಾ ಬರೀ ಔಪಚಾರಿಕತೆಯದ್ದಾಗಿರಬಾರದು ಎಂದು ನ್ಯಾಯಾಲಯ ತಿಳಿ ಹೇಳಿತ್ತು.

ಇದಕ್ಕೂ ಮೊದಲು ಜುಲೈನಲ್ಲಿ ನಡೆದಿದ್ದ ವಿಚಾರಣೆ ವೇಳೆ ನ್ಯಾಯಾಲಯವು ಪ್ರಕರಣದ ಸಂತ್ರಸ್ತೆಯ ಕುಟುಂಬ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕು ಮತ್ತು ಸಾಮಾಜಿಕ ಆರ್ಥಿಕ ಅಂಶಗಳನ್ನು ಪರಿಗಣಿಸಿ ಕುಟುಂಬವನ್ನು ರಾಜ್ಯದ ಮತ್ತೊಂದು ಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಸೂಚಿಸಿದ್ದನ್ನು ನೆನೆಯಬಹುದು.