ಉತ್ತರ ಪ್ರದೇಶದ ಹಾಥ್‌ರಸ್‌ನ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ಮತ್ತು ಆಕೆಯ ಮೃತದೇಹವನ್ನು ರಾತ್ರೋರಾತ್ರಿ ಅಂತ್ಯಕ್ರಿಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಅಲಾಹಾಬಾದ್ ಹೈಕೋರ್ಟ್ ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ, ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲಾ ಅವರು ಲಕ್ನೋ ಪೀಠಕ್ಕೆ ಪತ್ರ ಬರೆದಿದ್ದಾರೆ. ಜೊತೆಗೆ ಸಂತ್ರಸ್ತೆಯನ್ನು ದಹನ ಮಾಡಿದ ದಿನ ಕರ್ತವ್ಯದ ಉಸ್ತುವಾರಿಯಲ್ಲಿದ್ದ ಪೊಲೀಸ್ ಅಧಿಕಾರಿಗಳ ಹಾಜರಾತಿಯನ್ನು ಖಚಿತಪಡಿಸಿಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ಅಲಾಹಾಬಾದ್ ಹೈಕೋರ್ಟ್ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಳ್ಳುವಂತೆ ಸೂಚಿಸಿದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶಿಸಿದೆ. ಜೊತೆಗೆ ಕೋರ್ಟ್ ಎದುರು ಹಾಜರಾಗಬೇಕೆಂದು ಸೂಚಿಸಲಾಗಿದ್ದ ಉನ್ನತ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಹೈಕೋರ್ಟ್‌ನ ಆದೇಶದಲ್ಲಿ ಅಧಿಕಾರಿಗಳ ಪದವಿಯನ್ನು ಉಲ್ಲೇಖಿಸಿ ಹಾಜರಾತಿಗೆ ತಿಳಿಸಲಾಗಿತ್ತೇ ಹೊರತು ಹೆಸರಿನಿಂದ ಅಲ್ಲ ಎನ್ನುವುದು ಇಲ್ಲಿ ಗಮನಾರ್ಹ.
ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದರಿಂದ ಇಲ್ಲವೇ ಅಮಾನತುಗೊಳಿಸಿರುವುದರಿಂದ ಅಂತ್ಯಕ್ರಿಯೆ ವೇಳೆ ಹಾಜರಿದ್ದ ಅವರು ಕೋರ್ಟಿನಲ್ಲಿ ಹಾಜರಾಗದಿರಬಹುದು ಎಂಬ ಆತಂಕವಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪೂನಾವಾಲಾ ಅವರು ಅಕ್ಟೋಬರ್ 5 ರಂದು ಬರೆದಿರುವ ಪತ್ರದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸುತ್ತಿರುವ ಹಿನ್ನೆಲೆಯಲ್ಲಿ ಕೋರ್ಟ್ ನೇತೃತ್ವದಲ್ಲಿಯೇ ತನಿಖೆ ನಡೆಸಬೇಕೆಂದು ಕೋರಿದ್ದಾರೆ. ಇದಲ್ಲದೆ ಸಂತ್ರಸ್ತೆಯ ಕುಟುಂಬದ ರಕ್ಷಣೆಗಾಗಿ ನಿರ್ದೇಶನ ನೀಡುವಂತೆ
ಅಕ್ಟೋಬರ್ 1ರ ಆದೇಶದಲ್ಲಿ ಸಂತ್ರಸ್ತೆಯ ಕುಟುಂಬದ ಮೇಲೆ ಒತ್ತಡ ಅಥವಾ ಪ್ರಭಾವ ಬೀರುವಂತಿಲ್ಲ ಎಂದು ಕೋರ್ಟ್ ಸೂಚಿಸಿರುವ ಹೊರತಾಗಿಯೂ ಸಂತ್ರಸ್ತೆಯ ಕುಟುಂಬ ಸದಸ್ಯರು ಒತ್ತಡ ಅನುಭವಿಸುತ್ತಿದ್ದು ಮನೆಯಿಂದ ಹೊರಬರುತ್ತಿಲ್ಲ ಎಂಬ ಮಾಧ್ಯಮ ವರದಿಗಳನ್ನು ಅವರು ಕೋರ್ಟಿನ ಗಮನಕ್ಕೆ ತಂದಿದ್ದಾರೆ.
ಸಂತ್ರಸ್ತೆಯ ಕುಟುಂಬವನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದಕ್ಕೆ ತಡೆ ನೀಡಬೇಕೆಂದು ಕೂಡ ಪೂನಾವಾಲಾ ನ್ಯಾಯಲಯವನ್ನು ಕೋರಿದ್ದಾರೆ.