Uttar Pradesh  
ಸುದ್ದಿಗಳು

ಹಾಥ್‌ರಸ್‌ ಕಾಲ್ತುಳಿತ: ತ್ರಿಸದಸ್ಯ ಆಯೋಗದಿಂದ ನ್ಯಾಯಾಂಗ ತನಿಖೆಗೆ ಉ. ಪ್ರದೇಶ ಸರ್ಕಾರ ಆದೇಶ

Bar & Bench

ಉತ್ತರ ಪ್ರದೇಶದ ಹಾಥ್‌ರಸ್‌ ಜಿಲ್ಲೆಯ ಫೂಲರಾಯ್‌ ಗ್ರಾಮದಲ್ಲಿ ಮಂಗಳವಾರ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದ ವೇಳೆ ಉಂಟಾದ ಕಾಲ್ತುಳಿತದಲ್ಲಿ 121 ಜನ ಪ್ರಾಣತೆತ್ತ ಘಟನೆಯ ನ್ಯಾಯಾಂಗ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ತ್ರಿಸದಸ್ಯ ಆಯೋಗ ರಚಿಸಿದೆ.

ಅಲಾಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ್ (II) ನೇತೃತ್ವದ ಆಯೋಗದಲ್ಲಿ ಐಎಎಸ್ ಅಧಿಕಾರಿ ಹೇಮಂತ್ ರಾವ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಭವೇಶ್ ಕುಮಾರ್ ಅವರು ಸದಸ್ಯರಾಗಿದ್ದಾರೆ.

ಈ ಹಿಂದೆ ಸೂರಜ್ ಪಾಲ್ ಎಂದು ಕರೆಯಲಾಗುತ್ತಿದ್ದ ಸ್ವಯಂ-ಘೋಷಿತ ದೇವಮಾನವ ನಾರಾಯಣ್ ಸಾಕರ್ ಹರಿ ಅಲಿಯಾಸ್ 'ಭೋಲೆ ಬಾಬಾ' ಅವರ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ದುರಂತ ಉಂಟಾಗಿತ್ತು. 80,000 ಮಂದಿಗೆ ಪಾಲ್ಗೊಳ್ಳಲು ಅನುಮತಿ ನೀಡಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು ಎರಡು ಲಕ್ಷ ಜನ ಭಾಗಿಯಾಗಿದ್ದರು. ಈ ಸಂಬಂಧ ಉತ್ತರ ಪ್ರದೇಶ ಪೊಲೀಸರು ಕಾರ್ಯಕ್ರಮದ ಆಯೋಜಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.  

ಆಯೋಗ ಎರಡು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ.  ಘಟನೆ ಆಕಸ್ಮಿಕವೇ ಅಥವಾ ಪಿತೂರಿ ಇಲ್ಲವೇ ಇನ್ನಾವುದೇ ಯೋಜಿತ ಅಪರಾಧದ ಫಲವೇ? ಜನದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತ ಮತ್ತು ಪೊಲೀಸರು ಮಾಡಿದ್ದ ವ್ಯವಸ್ಥೆ ಸಮರ್ಪಕವಾಗಿತ್ತೇ? ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ತಡೆಯುವ ಕ್ರಮಗಳು ಯಾವುವು ಎಂಬುದನ್ನು ತಿಳಿಸುವಂತೆ ಆಯೋಗವನ್ನು ಕೋರಲಾಗಿದೆ.

ಘಟನೆ ಸಂಬಂಧ ನ್ಯಾಯಾಂಗ ತನಿಖೆ ಕೋರಿ ಸುಪ್ರೀಂ ಕೋರ್ಟ್‌ ಮತ್ತು ಅಲಾಹಾಬಾದ್‌ ಹೈಕೋರ್ಟ್‌ಗೆ ವಕೀಲರಿಬ್ಬರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ಕೋರಿದ್ದರೆ ಅಲಾಹಾಬಾದ್‌ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಯ ಜೊತೆಗೆ ಸಿಬಿಐ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು.