ನರೇಶ್ ಗೋಯಲ್ ಮತ್ತು ಇಡಿ
ನರೇಶ್ ಗೋಯಲ್ ಮತ್ತು ಇಡಿ 
ಸುದ್ದಿಗಳು

ಎಲ್ಲಾ ಭರವಸೆ ಕಳೆದುಕೊಂಡಿರುವೆ, ಜೈಲಿನಲ್ಲೇ ಸಾಯಲು ಬಿಡಿ: ಪಿಎಂಎಲ್ಎ ನ್ಯಾಯಾಲಯಕ್ಕೆ ನರೇಶ್ ಗೋಯಲ್ ಮನವಿ

Bar & Bench

ಮುಂಬೈನ ನ್ಯಾಯಾಲಯದೆದುರು ಶುಕ್ರವಾರ ಕಣ್ಣೀರಿಟ್ಟ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಅವರು ತಾವು ಜೀವನದಲ್ಲಿ ಎಲ್ಲಾ ಭರವಸೆ ಕಲೆದುಕೊಂಡಿದ್ದು ಸಾಯಲು ಬಯಸಿರುವುದರಿಂದ ಯಾವುದೇ ವೈದ್ಯಕೀಯ ಚಿಕಿತ್ಸೆ ನೀಡದಂತೆ ಮನವಿ ಮಾಡಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಗೋಯಲ್, ಜಾಮೀನು ಕೋರಿ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿಯಲ್ಲಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯಕ್ಕೆ ವರ್ಚುವಲ್‌ ವಿಧಾನದಲ್ಲಿ ಹಾಜರಾದರು.

ತಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂದು ಅವರು ಮನವಿ ಮಾಡಿದರು. ಜೈಲಿನಿಂದ ಮುಂಬೈನ ಜೆಜೆ ಆಸ್ಪತ್ರೆಗೆ ಪ್ರಯಾಣಿಸುವುದು ಒತ್ತಡದ ಬೇಸರದ ತ್ರಾಸದಾಯಕವಾಗಿದ್ದು ಸರದಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆಯುವುದ ತಮಗೆ ಅಸಾಧ್ಯವಾಗಿರುವುದರಿಂದ ತಮ್ಮನ್ನು ಆ ಆಸ್ಪತ್ರೆಗೆ ಕಳುಹಿಸದಂತೆ ಅವರು ನ್ಯಾಯಾಲಯವನ್ನು ಕೋರಿದರು. ಬದಲಿಗೆ ತಮ್ಮನ್ನು ಜೈಲಿನಲ್ಲಿಯೇ ಇರಿಸುವಂತೆ ಮನವಿ ಮಾಡಿದರು.

ತನಗೆ ಈಗ 75 ವರ್ಷ ವಯಸ್ಸಾಗಿದ್ದು ಒಳ್ಳೆಯ ಭವಿಷ್ಯದ ಭರವಸೆ ಇಲ್ಲದಿರುವುದರಿಂದ ಜೈಲಿನಲ್ಲೇ ಸಾಯಲುಯ ಅವಕಾಶ ಮಾಡಿಕೊಡುವಂತೆ ಅವರು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

"ತಮ್ಮನ್ನು ಜೆಜೆ ಆಸ್ಪತ್ರೆಗೆ ಕಳುಹಿಸಬಾರದು. ಜೈಲಿನಲ್ಲೇ ಸಾಯಲು ಅವಕಾಶ ನೀಡಬೇಕು. ಈಗ ತಾವು ಜೀವನದ ಎಲ್ಲಾ ಭರವಸೆಯನ್ನು ಕಳೆದುಕೊಂಡಿದ್ದು ಇಂತಹ ಪರಿಸ್ಥಿತಿಯಲ್ಲಿ ತಾವು ಬದುಕಿರುವುದಕ್ಕಿಂತಲೂ ಸಾಯುವುದು ಉತ್ತಮ ಎಂದು ವಿಶೇಷ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ ಅವರೆದುರು ತಮ್ಮ ಹೇಳಿಕೆ ದಾಖಲಿಸಿದರು.

ಆದರೆ ನ್ಯಾಯಾಲಯ, ಬಂಧನದ ವೇಳೆ ಸೂಕ್ತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಗೋಯಲ್‌ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ರಕ್ಷಣೆಗೆ ಸಾಧ್ಯವಿರುವ ಎಲ್ಲ ಸಹಾಯ ನೀಡಲಾಗುವುದು ಎಂದು ಭರವಸೆ ನೀಡಿತು.

7,000 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆಂದು ಆರೋಪಿಸಿ ಕೆನರಾ ಬ್ಯಾಂಕ್ ನೀಡಿದ ದೂರಿನ ಆಧಾರದ ಮೇಲೆ ಗೋಯೆಲ್‌ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಇದನ್ನು ಆಧರಿಸಿ ಅವರನ್ನು ಸೆಪ್ಟೆಂಬರ್ 1ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.

ತನ್ನ ಬಂಧನ ಪ್ರಶ್ನಿಸಿ ಮತ್ತು ತನ್ನ ಬಿಡುಗಡೆ ಕೋರಿ ಗೋಯಲ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಅವರು ಜಾಮೀನಿಗಾಗಿ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಿದರು.

ನ್ಯಾಯಾಧೀಶರು ಶುಕ್ರವಾರ ಗೋಯಲ್ ಅವರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಸೂಕ್ತ ಚಿಕಿತ್ಸೆಯ ಭರವಸೆ ನೀಡಿತು. ಗೋಯಲ್ ಅವರ ವೈದ್ಯಕೀಯ ಆರೋಗ್ಯದ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅವರ ಪತ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಜಾಮೀನು ಅರ್ಜಿಯ ಮುಂದಿನ ವಿಚಾರಣೆ ಜನವರಿ ೧೬ರಂದು ನಡೆಯಲಿದೆ.

ಗೋಯಲ್ ಪರವಾಗಿ ಹಿರಿಯ ವಕೀಲ ಅಬಾದ್ ಪೊಂಡಾ, ವಕೀಲರಾದ ಅಮೀತ್ ನಾಯಕ್, ಅಭಿಷೇಕ್ ಕಾಳೆ, ಹರೀಶ್ ಖೇಡೇಕರ್ ಮತ್ತು ಪರೀಕ್ಷಿತ್ ವಾದ ಮಂಡಿಸಿದ್ದರು. ಜಾರಿ ನಿರ್ದೇಶನಾಲಯದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸುನಿಲ್ ಗೊನ್ಸಾಲ್ವೆಸ್‌ ಹಾಜರಾಗಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Naresh Goyal v. ED.pdf
Preview