CJ Ravi Malimath 
ಸುದ್ದಿಗಳು

ನನಗೆ ಸಾಕಷ್ಟು ಶತ್ರುಗಳಿದ್ದು ಆ ಬಗ್ಗೆ ಹೆಮ್ಮೆ ಇದೆ: ನಿವೃತ್ತಿ ವೇಳೆ ಮ. ಪ್ರದೇಶ ಹೈಕೋರ್ಟ್‌ ಸಿಜೆ ರವಿ ಮಳಿಮಠ್ ಕಿಡಿ

Bar & Bench

ನನಗೆ ಸಾಕಷ್ಟು ಶತ್ರುಗಳಿದ್ದು ಆ ಬಗ್ಗೆ ಹೆಮ್ಮೆ ಇದೆ. ನಾನು ಸಂವಿಧಾನಕ್ಕೆ ಉತ್ತರಿಸುತ್ತೇನೆ ವಿನಾ ಬೇರಾರಿಗೂ ಅಲ್ಲ…

ತಮ್ಮ ನಿವೃತ್ತಿ ದಿನ ಕರ್ನಾಟಕ ಮೂಲದ ಮಧ್ಯಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರವಿ ಮಳಿಮಠ್‌ ಅವರು ಆಡಿದ ನುಡಿಗಳಿವು.

ಕಡ್ಡಿ ತುಂಡಾದಂತೆ ಮಾಡಿದ ತಮ್ಮ ವಿದಾಯ ಭಾಷಣದಲ್ಲಿ ಅವರು ನೈತಿಕವಾಗಿ ಭ್ರಷ್ಟರು ಮತ್ತು ಅಧಃಪತನ ಹೊಂದಿದವರು ತಮ್ಮ ವೃತ್ತಿ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ವರ್ಷಾನುಗಟ್ಟಲೆ ಸಮಯ ವ್ಯಯಿಸಿ ವಿಫಲರಾದರು ಎಂದರು.

"ನನ್ನ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ವರ್ಷಾನುಗಟ್ಟಲೆ ಸಮಯ ವ್ಯಯ ಮಾಡಿದ ಜನರಿದ್ದಾರೆ. ಆದರೆ ಅವರು ದಯನೀಯವಾಗಿ ವಿಫಲರಾಗಿದ್ದಾರೆ. ಏಕೆಂದರೆ ದೇಶದ ಯಾವುದೇ ಮುಖ್ಯ ನ್ಯಾಯಮೂರ್ತಿ ಅಥವಾ ನ್ಯಾಯಾಧೀಶರು ಮಾಡದ ಕೆಲಸವನ್ನು ನಾನು ಮಾಡಿದ್ದೇನೆ. ಎಷ್ಟೇ ಪ್ರಯತ್ನಿಸಿದರೂ ಅವರು ಎಂದಿಗೂ ನನ್ನ ಸಾಧನೆಗಳಿಗೆ ಸ್ಪರ್ಧೆಯೊಡ್ಡಲು ಸಾಧ್ಯವಿಲ್ಲ. ಈ ಸಮಯದಲ್ಲಿ ಬಹಳಷ್ಟು ಹೇಳಬಲ್ಲೆ. ನಾನು ಅವರ ಹೆಸರುಗಳನ್ನು ಹೇಳಿ ಟ್ಯಾಬ್ಲಾಯ್ಡ್‌ ಪತ್ರಿಕೆಗಳ ಕೇಂದ್ರವಸ್ತುವಾಗಿಸಬಲ್ಲೆ. ನನ್ನ ವಿದಾಯ ಭಾಷಣದಲ್ಲಿ ನಾನು ಏನು ಹೇಳಬಹುದು ಎಂಬ ಕುರಿತು ನನ್ನ ವಿರೋಧಿಗಳು ಚಿಂತಿತರಾಗಿದ್ದು, ನಡುಗುತ್ತಾ ನಾನು ಹೇಳುವುದನ್ನು ಗಮನಿಸುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ. ಆದರೆ ನೈತಿಕವಾಗಿ ದಿವಾಳಿಯಾದ, ನಿರ್ಲಜ್ಜ ಹಾಗೂ ಅಧಃಪತನ ಹೊಂದಿದವರು ಚರ್ಚೆಗೆ ಯೋಗ್ಯರಲ್ಲ. ಅವರು ನನಗೆ ಮುಖ್ಯರಲ್ಲ. ನಾನು ಸಂವಿಧಾನಕ್ಕೆ ಸೇವೆ ಸಲ್ಲಿಸುವುದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನನ್ನನ್ನೇ ಬೆಲೆ ತೆತ್ತಾದರೂ ಸರಿ, ನಾನು ಸರಿಯಾದ ಕೆಲಸ ಮಾಡುವುದನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಏಕೆಂದರೆ ನ್ಯಾಯಾಧೀಶರಿಂದ ನಿರೀಕ್ಷಿಸುವುದು ಅದನ್ನೇ” ಎಂದು ಅವರು ನುಡಿದರು.

ನನ್ನನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡಲಾಗುವುದು ಎಂದು ತಿಳಿಸಿ ಕರ್ನಾಟಕದಿಂದ ಉತ್ತರಾಖಂಡಕ್ಕೆ ವರ್ಗಾವಣೆ ಮಾಡಲಾಯಿತು. ಆದರೆ ಅಲ್ಲಿ ಮಾಡಲಿಲ್ಲ. ನಂತರ ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡಲಾಗುತ್ತದೆ ಎಂದು ಹೇಳಿ ಉತ್ತರಾಖಂಡದಿಂದ ಹಿಮಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಿದರು. ಅಲ್ಲಿಯೂ ಆಗಲಿಲ್ಲ. ಕೊನೆಗೆ ಮಧ್ಯಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದೆ. ವರ್ಗಾವಣೆಗಳು ನನ್ನನ್ನು ಕೆರಳಿಸಬಹುದು ಎಂದುಕೊಂಡರು. ಆದರೆ ನಾನು ವಿರೋಧಿಸಲಿಲ್ಲ ಎಂದರು.

ಸ್ವಂತ ಲಾಭಕ್ಕಾಗಿ ನ್ಯಾಯಾಲಯವನ್ನು ಬಳಸಿಕೊಳ್ಳುವ ಕೆಲ ಒಂಬತ್ತು ತೊಂಬತ್ತು ಜನರ ನಡುವೆ ನಾನು ಮಧಪ್ರದೇಶದ 9 ಕೋಟಿ ಜನರಿಗೆ ಸೇವೆ ಸಲ್ಲಿಸಿದೆ. ನನ್ನ ಅದಿಕಾರಾವಧಿಯಲ್ಲಿ ಅನೇಕರು ನ್ಯಾಯಾಲಯದ ಕಾರ್ಯ ನಿರ್ವಹಣೆ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರು. ಸಂಸ್ಥೆಗೆ ಒಳಿತಾಗಲಿ ಎಂಬ ಏಕೈಕ ಉದ್ದೇಶದಿಂದ ಅಂತಹ ಪ್ರತಿಯೊಬ್ಬರನ್ನೂ ನಾನು ದೂರ ಇಟ್ಟೆ. ಅವಕಾಶ ಕೊಟ್ಟರೆ ನಾನು ಮತ್ತೆ ಮತ್ತೆ ಇದನ್ನೇ ಮಾಡುತ್ತೇನೆ” ಎಂದು ಅವರು ದಿಟ್ಟವಾಗಿ ನುಡಿದರು.     

ಬಾಕಿ ಉಳಿದಿರುವ ಪ್ರಕರಣಗಳ ವಿಲೇವಾರಿಗಾಗಿ ನ್ಯಾಯಾಲಯದ ಕೆಲಸದ ಅವಧಿಯಲ್ಲಿ ಅರ್ಧಗಂಟೆ ಹೆಚ್ಚಳ ಮಾಡಿದ್ದು, ಬಾಕಿ ಪ್ರಕರಣಗಳ ವಿಲೇವಾರಿಗಾಗಿ ರೂಪಿಸಿದ ವಿಶಿಷ್ಟ ಯೋಜನೆ, 2047 ರ ವೇಳೆಗೆ ರಾಜ್ಯದಲ್ಲಿ ಯಾವುದೇ ಪ್ರಕರಣ ಒಂದಕ್ಕಿಂತ ಹೆಚ್ಚು ವರ್ಷ ಬಾಕಿ ಇರದಂತೆ ನೋಡಿಕೊಳ್ಳುವ 'ವಿಷನ್ 2047' ಸೇರಿದಂತೆ ತಮ್ಮ ಅವಧಿಯ ಸಾಧನೆಗಳ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ 1987ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡ ನ್ಯಾ. ರವಿ ಮಳಿಮಠ್‌, ಸಾಂವಿಧಾನಿಕ, ಸಿವಿಲ್‌, ಕ್ರಿಮಿನಲ್‌, ಕಾರ್ಮಿಕ, ಸೇವಾ ವಿಷಯಗಳ ಕುರಿತಂತೆ ವಕಾಲತ್ತು ವಹಿಸಿ ಹೆಸರುವಾಸಿಯಾಗಿದ್ದರು. 2008ರಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾದ ಅವರು ಖಾಯಂ ನ್ಯಾಯಾಧೀಶರಾಗಿದ್ದು 2010ರಲ್ಲಿ. 2020ರಲ್ಲಿ ಉತ್ತರಾಖಂಡಕ್ಕೆ ವರ್ಗವಣೆಯಾದ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ 2021ರಲ್ಲಿ ಹಿಮಾಚಲ ಪ್ರದೇಶಕ್ಕೆ ವರ್ಗಾವಣೆಗೊಂಡರು. 2021ರ ಅಕ್ಟೋಬರ್‌ನಲ್ಲಿ ಮಧ್ಯಪ್ರದೇಶ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದು ಈಗ ನಿವೃತ್ತರಾಗುತ್ತಿದ್ದಾರೆ.