Justice S Ravindra Bhat
Justice S Ravindra Bhat 
ಸುದ್ದಿಗಳು

ತುರ್ತು ಪರಿಸ್ಥಿತಿ ಕಂಡಿರುವುದರಿಂದ ಗಂಭೀರ ಪ್ರಶ್ನೆಗಳನ್ನು ಎತ್ತುವುದರಲ್ಲಿ ನನಗೆ ನಂಬಿಕೆ ಇದೆ: ನ್ಯಾ. ರವೀಂದ್ರ ಭಟ್‌

Bar & Bench

ಸದಾಕಾಲ ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಹಾಗೂ ಸಾಂವಿಧಾನಿಕ ತತ್ವಗಳನ್ನು ಎತ್ತಿ ಹಿಡಿಯುವಂತೆ ಯುವ ಕಾನೂನು ಪದವೀಧರರು ಮತ್ತು ಯುವ ವಕೀಲರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌ ರವೀಂದ್ರ ಭಟ್‌ ಶನಿವಾರ ಕಿವಿಮಾತು ಹೇಳಿದರು.

ದೆಹಲಿಯ ಕಾನೂನು ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ನ್ಯಾಯಮೂರ್ತಿ ಭಟ್‌ ಅವರು ಪ್ರಧಾನ ಭಾಷಣ ಮಾಡಿದರು.

ಯುವಪೀಳಿಗೆಯನ್ನು ಉದ್ದೇಶಿಸಿ ಅವರು “ನೀವು ಪಡೆಯುವ ಪುರಸ್ಕಾರಗಳಿಂದ ನಿಮ್ಮ ಬದುಕು ನಿರ್ಧಾರವಾಗುವುದಿಲ್ಲ. ಆದರೆ, ನೀವು ಮಾಡುವ ಆಯ್ಕೆಗಳಿಂದ ಅದು ನಿರ್ಧಾರವಾಗುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭಕ್ಕೆ ನಾನು ಸಾಕ್ಷಿಯಾಗಿದ್ದೇನೆ, ಹಾಗಾಗಿ, ಗಂಭೀರ ಮತ್ತು ಪ್ರಾಮಾಣಿಕ ಪ್ರಶ್ನೆಗಳನ್ನು ಒಗ್ಗೂಡಿ ಎತ್ತುವ ನಮ್ಮ ಸಾಮರ್ಥ್ಯವು ನಾವು ರೂಪಿಸಬೇಕೆಂದುಕೊಂಡಿರುವ ಸಮಾಜವು ಸಾಕಾರಗೊಳ್ಳಲು ಕಾರಣವಾಗುತ್ತದೆ ಎಂದು ನಂಬಿದ್ದೇನೆ. ಖಚಿತ ಉತ್ತರಗಳನ್ನು ಹುಡುಕುವಂತೆ ನಾನು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಹೇಳಬಯಸುತ್ತೇನೆ. ಕಾನೂನು ಅನುಸರಿಸುವ ಮೂಲಕ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಸ್ವಾತಂತ್ರ್ಯ ಮತ್ತು ಸಮಾನತೆಯ ದೀವಿಗೆಯನ್ನು ಪ್ರತಿಯೊಂದು ತಿರುವಿನಲ್ಲಿಯೂ ನೀವುಗಳು ಪುನಶ್ಚೇತನಗೊಳಿಸಬೇಕು” ಎಂದರು.

“ಈ ಹಿಂದೆ ಕೆಲವೇ ಕೆಲವು ಮಹಿಳೆಯರು ಕಾನೂನು ಶಿಕ್ಷಣ ಪಡೆಯುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ವೃತ್ತಿ ಜೀವನದಲ್ಲಿ ಅನಗತ್ಯ ಅಡೆತಡೆಗಳನ್ನು ಎದುರಿಸದಂತೆ ನಾವು ಶ್ರಮಿಸಬೇಕು. ಆಗ ಮಾತ್ರ ಮಹಿಳೆಯರು ಪದವಿ ಪಡೆದ ನಂತರವೂ ಅಡೆತಡೆಗಳಿಲ್ಲದೆ ಕಾನೂನು ಅಭ್ಯಾಸ ಮಾಡಬಹುದು” ಎಂದರು.

“ಜೀವನ ಎಂಬುದು ಎರಡು ನಿಮಿಷಗಳಲ್ಲಿ ಸಿದ್ಧಪಡಿಸುವ ನೂಡಲ್ಸ್‌ ರೀತಿಯದ್ದಲ್ಲ. ಜ್ಞಾನ ಸಂಪಾದಿಸಲು ಕಾಲ ಮತ್ತು ತಾಳ್ಮೆ ಬೇಕಾಗುತ್ತದೆ. ನೀವು ದಾವೆ ಅಥವಾ ಕಾರ್ಪೊರೇಟ್‌ ವಲಯದಲ್ಲಿ ಉದ್ಯೋಗ ಕಂಡುಕೊಂಡರೂ ಸಮಾಜದ ಏಳಿಗೆಗೆ ಹೇಗೆ ಕೆಲಸ ಮಾಡಬಹುದು ಎಂಬುದರ ಬಗ್ಗೆ ಯೋಚಿಸಿ” ಎಂದು ನ್ಯಾ. ಭಟ್‌ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.