ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಬಗರ್ ಹುಕುಂ ಸಾಗುವಳಿಯ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪ ಎದುರಿಸುತ್ತಿರುವ ಪ್ರಕರಣದಲ್ಲಿ ಅಂದಿನ ತಹಶೀಲ್ದಾರ್ ನಿರೀಕ್ಷಣಾ ಜಾಮೀನು ಪಡೆದಿರುವ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣದ ಆರೋಪಿ ಹಾಗೂ ಅಂದಿನ ಬಗರ್ ಹುಕುಂ ಸಮಿತಿ ಸದಸ್ಯರೂ ಆಗಿದ್ದ ವಕೀಲ ಎಸ್ ಎನ್ ಲಿಂಗೇಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು "ಈ ಪ್ರಕರಣದ ಮತ್ತೊಬ್ಬ ಆರೋಪಿ ತಹಶೀಲ್ದಾರ್ ಅವರಿಗೆ ನೀರಿಕ್ಷಣಾ ಜಾಮೀನು ದೊರೆತಿದೆ. ಹಾಗಾಗಿ, ಅರ್ಜಿದಾರ ಎಸ್ ಎನ್ ಲಿಂಗೇಶ್ ಅವರಿಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು" ಎಂಬ ಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು "ಈ ಪ್ರಕರಣದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಹಾಗೂ ಮೂಲ ದಾಖಲೆಗಳನ್ನು ತಿರುಚಿರುವುದೂ ಸೇರಿದಂತೆ ಎಲ್ಲಾ ಅಪಕೃತ್ಯಗಳನ್ನು ಮಾಡಿರುವುದೇ ತಹಶೀಲ್ದಾರ್ ಎಂಬುದನ್ನು ದಾಖಲೆಯ ಅಂಶಗಳು ಹೇಳುತ್ತವೆ. ಹೀಗಿರುವಾಗ ಅವರು ಅದು ಹೇಗೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ" ಎಂದು ರಾಜ್ಯ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರನ್ನು ಪ್ರಶ್ನಿಸಿದರು.
ಅಂತೆಯೇ, "ಪ್ರಕರಣದಲ್ಲಿ ತಹಶೀಲ್ದಾರ್‌ಗೆ ನಿರೀಕ್ಷಣಾ ಜಾಮೀನು ಲಭ್ಯವಾದ ಬಗ್ಗೆ ವಿವರಣೆ ನೀಡಿ" ಎಂದು ಜಗದೀಶ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದರು.
ಪ್ರಕರಣದ ಹಿನ್ನೆಲೆ: ಬೇಲೂರು ತಾಲ್ಲೂಕಿನಲ್ಲಿ 2,750 ಎಕರೆ ಜಮೀನನ್ನು 1,430 ಮಂದಿ ನಕಲಿ ಮತ್ತು ಅಕ್ರಮ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ ಸಿ ರಾಜಣ್ಣ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರನ್ನು ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಇದರನ್ವಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 468, 464, 465, 471, 409, 420, 120ಬಿ ಅಡಿ ಪ್ರಕರಣ ದಾಖಲಿಸಲಾಗಿದೆ.
ಬೇಲೂರು ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾಗಿದ್ದ ಮೊದಲ ಆರೋಪಿ ಮಾಜಿ ಶಾಸಕ ಲಿಂಗೇಶ್ 750 ಎಕರೆಗಿಂತ ಹೆಚ್ಚಿನ ಸರ್ಕಾರಿ ಜಮೀನಿನ ಅನುದಾನವನ್ನು ಅನುಮೋದಿಸಿದ್ದಾರೆ. ಉಳಿದ ಆರೋಪಿಗಳೆಲ್ಲರೂ ಅಧಿಕಾರಿಗಳ ಜೊತೆ ಶಾಮೀಲಾಗಿ ತಮ್ಮ ಅಧಿಕಾರ ಮತ್ತು ಸ್ಥಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಲು ಸಹಕಾರ ನೀಡಿದ್ದ, ಸರ್ಕಾರಕ್ಕೆ ವಂಚಿಸುವ ಉದ್ದೇಶದಿಂದ ಅಪರಾಧಿಕ ಒಳಸಂಚು ನಡೆಸಿದ್ದಾರೆ. ಮಾಜಿ ಶಾಸಕ ವೈ ಎನ್ ರುದ್ರೇಶ್ ಗೌಡ ಅವರೂ ಅಕ್ರಮ ವಹಿವಾಟಿನ ಭಾಗವಾಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.