Kambala & Karnataka HC 
ಸುದ್ದಿಗಳು

ಪಿಲಿಕುಳದ ಜೈವಿಕ ಪಾರ್ಕ್‌ನಲ್ಲಿ ಕಂಬಳ ಆಯೋಜನೆ: ಜನವರಿ 21ಕ್ಕೆ ವಿಚಾರಣೆ ಮುಂದೂಡಿಕೆ

ಅಡ್ವೊಕೇಟ್ ಜನರಲ್ ಅವರು ಪ್ರಕರಣದಲ್ಲಿ ವಾದ ಮಂಡಿಸಬೇಕಿದ್ದು, ಅವರು ಲಭ್ಯವಿಲ್ಲದ ಕಾರಣ ವಿಚಾರಣೆಯನ್ನು ಮುಂದೂಡಿದ ನ್ಯಾಯಾಲಯ.

Bar & Bench

ಪಿಲಿಕುಳ ಜೈವಿಕ ಪಾರ್ಕ್‌ ಸಮೀಪ ಕಂಬಳ ಓಟಕ್ಕೆ ಅವಕಾಶ ನೀಡಬಾರದು ಮತ್ತು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹೊರಗೂ ಕಂಬಳ ನಿಷೇಧಿಸಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜನವರಿ 21ಕ್ಕೆ ಮುಂದೂಡಿದೆ.

ಪ್ರಾಣಿ ದಯಾ ಸಂಘಟನೆಯಾದ ಪೀಪಲ್ ಫಾರ್ ದ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ (ಪೆಟಾ) ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿತ್ತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲೆ ನಿಲೋಫರ್‌ ಅಕ್ಬರ್‌ ಅವರು “ಅಡ್ವೊಕೇಟ್ ಜನರಲ್ ಅವರು ಈ ಪ್ರಕರಣದಲ್ಲಿ ವಾದ ಮಂಡಿಸಬೇಕಿದ್ದು, ಅವರು ಇಂದು ಲಭ್ಯವಿಲ್ಲ. ಆದ್ದರಿಂದ, ವಿಚಾರಣೆಯನ್ನು ಮುಂದೂಡಬೇಕು” ಎಂದು ಕೋರಿದರು. ಇದನ್ನು ಪುರಸ್ಕರಿಸಿದ ಪೀಠವು ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿತು.

ಮೊದಲಿಗೆ ಬೆಂಗಳೂರಿನಲ್ಲಿ ಕಳೆದ ನವೆಂಬರ್‌ನಲ್ಲಿ ಕಂಬಳ ಆಯೋಜಿಸುವ ತೀರ್ಮಾನವನ್ನು ಬೆಂಗಳೂರು ಕಂಬಳ ಆಯೋಜನಾ ಸಮಿತಿ ತೆಗೆದುಕೊಂಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪಿಲಿಕುಳದಲ್ಲಿ ಡಿಸೆಂಬರ್‌ನಲ್ಲಿ ಕಂಬಳ ನಡೆಸುವುದಾಗಿ ಸಮಿತಿಯು ಹೇಳಿಕೊಂಡಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಕಂಬಳ ಸ್ಪರ್ಧೆಯನ್ನು ಪ್ರಾಣಿ ಸಂಗ್ರಹಾಲಯದ ಸಮೀಪ ನಡೆಸಲಾಗುತ್ತಿರುವುದರಿಂದ ಅಲ್ಲಿನ ಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಬೇರೆ ಸ್ಥಳದಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲು ಆಕ್ಷೇಪವಿಲ್ಲ ಎಂದು ಪೆಟಾ ಆಕ್ಷೇಪಿಸಿತು. ಈ ಸಂಬಂಧ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಅದರ ವರದಿಗಾಗಿ ನಿರೀಕ್ಷಿಸಲಾಗಿದೆ.