ಹಾಲಿ ಕೇಂದ್ರ ಮತ್ತು ರಾಜ್ಯ ಸಚಿವರು, ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಶಾಸಕರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಕರ್ನಾಟಕ ಹೈಕೋರ್ಟ್ ಹಿಂಪಡೆಯಲು ಅನುಮತಿಸಿತು.
ಬೆಂಗಳೂರಿನ ವಕೀಲ ಗಿರೀಶ್ ಭಾರದ್ವಾಜ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಶ್ರೀಧರ್ ಪ್ರಭು ಅವರು ಪ್ರಕರಣದ ಕುರಿತು ಮಾಹಿತಿ ನೀಡಲು ಮುಂದಾದರು. ಆಗ ಪೀಠವು ಸಾಮಾಜಿಕ ಹೋರಾಟಗಾರರು, ರೈತರು, ರಾಜಕಾರಣಿಗಳ ವಿರುದ್ಧದ ಪ್ರಕರಣವನ್ನು ಹಿಂಪಡೆಯಲಾಗಿದೆ. ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು. ಹೀಗಾಗಿ, ಅರ್ಜಿದಾರರು ಮನವಿ ಹಿಂಪಡೆದರು.
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು 43 ಪ್ರಕರಣಗಳನ್ನು ಸಿಆರ್‌ಪಿಸಿ ಸೆಕ್ಷನ್ 321ರ ಅಡಿ ಅಭಿಯೋಜನೆಯಿಂದ ಹಿಂಪಡೆಯಲು ಸಂಬಂಧಿತ ನ್ಯಾಯಾಲಯಗಳಿಗೆ ಅಗತ್ಯ ಅರ್ಜಿ ಸಲ್ಲಿಸಬೇಕು ಸರ್ಕಾರಿ ಅಭಿಯೋಜಕರಿಗೆ 2024ರ ಅಕ್ಟೋಬರ್ 15ರಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರು ಮಾಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್, ಕೇಂದ್ರ ಸಚಿವ ವಿ ಸೋಮಣ್ಣ, ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ, ನರಗುಂದದ ಬಿ ಆರ್ ಯಾವಗಲ್, ಹೆರೇಕೆರೂರು ಶಾಸಕ ಯು ಬಿ ಬಣಕಾರ್, ಕಾಂಗ್ರೆಸ್ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ಮಾಜಿ ಶಾಸಕರಾದ ದಾವಣಗೆರೆಯ ಎಸ್ ಎ ರವೀಂದ್ರನಾಥ್, ಬೆಳಗಾವಿಯ ಸಂಜಯ್ ಪಾಟೀಲ್, ಬಾಗಲಕೋಟೆಯ ಡಾ. ವೀರಣ್ಣ ಚರಂತಿಮಠ.
ಹೊನ್ನಾಳಿ ಎಂ ಪಿ ರೇಣುಕಾಚಾರ್ಯ, ಬೆಳಗಾವಿಯ ಅನಿಲ ಬೆನಕೆ, ಡಾ. ಎಸ್ ಸಿದ್ದಯ್ಯ, ಬೆಂಗಳೂರು ಗಾಮಾಂತರ ಜಿಲ್ಲೆಯ ಬಿ ಶಿವಣ್ಣ, ಭದ್ರಾವತಿಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್ ಆರ್ ಬಸವರಾಜಪ್ಪ, ತುಮಕೂರಿನ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ, ಕಲಬುರ್ಗಿ ಜಿಲ್ಲೆಯ ದರ್ಗಾ ಹಜರತ್ ಮಲಿಕುಲ್ ಮಶಾಲ್‌ಕಹ್ ಮಕ್ದೂಮ್ ಲಾಡಿ ಅನ್ಸಾರಿ (ಸುನ್ನಿ) ಅಧ್ಯಕ್ಷರು ಮತ್ತು ಕಾರ್ಯದರ್ಶಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ, ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಎಂ ಎಸ್ ಅಂಗಡಿ, ಮೈಸೂರಿನ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್ ಭಾಸ್ಕರ್, ಭೀಮ್ ಆರ್ಮಿ ಜಿಲ್ಲಾ ಸಮಿತಿಯ ಅಧ್ಯಕ್ಷ ರಾಘು ಚಾಕ್ರಿ.
ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ, ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ, ಹುಬ್ಬಳ್ಳಿಯ ಅಂಜುಮಾನ ಇ-ಇಸ್ಲಾಂ ಅಡಿ ರಚಿಸಲಾಗಿದ್ದ ಪರಿಹಾರ ಸಮಿತಿಯ ಸದಸ್ಯರು, ರಾಯಚೂರಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಎಸ್ ಪ್ರಸಾದ್, ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪರವಾಗಿ ಚುಕ್ಕಿ ನಂಜುಂಡಸ್ವಾಮಿ ಅವರು ಶಿವಮೊಗ್ಗ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡದ ರೈತರ ವಿರುದ್ಧದ ಪ್ರಕರಣ ಹಿಂಪಡೆಯಲು ಕೋರಿದ್ದನ್ನು ರಾಜ್ಯ ಸರ್ಕಾರ ಪುರಸ್ಕರಿಸಿತ್ತು.