Surrogacy  
ಸುದ್ದಿಗಳು

ದಾನಿಗಳ ವೀರ್ಯ, ಅಂಡಾಣು ಪಡೆದು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಹೊಂದಲು 13 ಜೋಡಿಗೆ ಹೈಕೋರ್ಟ್‌ ಅನುಮತಿ

Bar & Bench

ದಾನಿಗಳ ವೀರ್ಯ, ಅಂಡಾಣುಗಳನ್ನು ಪಡೆದು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡು ಮಕ್ಕಳನ್ನು ಹೊಂದಲು ಕರ್ನಾಟಕ ಹೈಕೋರ್ಟ್ ಈಚೆಗೆ 13 ಜೋಡಿಗೆ ಅವಕಾಶ ಕಲ್ಪಿಸಿದೆ.

2023ರ ಮಾರ್ಚ್‌ 14ರಿಂದ ಜಾರಿಗೆ ಬಂದಿರುವ ಬಾಡಿಗೆ ತಾಯ್ತನ ತಿದ್ದುಪಡಿ ನಿಯಮ 7 ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಹೊಸ ಬಾಡಿಗೆ ತಾಯ್ತನ (ಸರೋಗೆಸಿ) ತಿದ್ದುಪಡಿ ಕಾನೂನಿನ ಪ್ರಕಾರ ದಾನಿಗಳ ವೀರ್ಯ ಪಡೆಯಲು ನಿರ್ಬಂಧವಿದೆ. ಆದರೆ, ಅದನ್ನು ಎಲ್ಲ ಪ್ರಕರಣಗಳನ್ನೂ ಏಕರೂಪವಾಗಿ ಅನ್ವಯಿಸುವುದು ಸರಿಯಲ್ಲ, ಪ್ರತಿಯೊಂದು ಪ್ರಕರಣಗಳನ್ನು ಆಧರಿಸಿ ನಿಯಮಗಳನ್ನು ಸಡಿಲಗೊಳಿಸಬಹುದು ಎಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರರು ತಿದ್ದುಪಡಿಯನ್ನು ಪ್ರಶ್ನಿಸಿದ್ದಾರೆ. ಆದರೆ, ಹೊಸ ತಿದ್ದುಪಡಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಹಿನ್ನೆಲೆಯಲ್ಲಿ ನಿಯಮವನ್ನು ಸ್ವಲ್ಪ ಸಡಿಲಿಕೆ ಮಾಡಿ ನ್ಯಾಯಾಲಯದ ಮೊರೆ ಹೋಗಿದ್ದ 13 ದಂಪತಿಗೆ ಮಕ್ಕಳನ್ನು ಹೊಂದಲು ಹೈಕೋರ್ಟ್‌ ಅವಕಾಶ ಕಲ್ಪಿಸಿದೆ.

“ಮಕ್ಕಳನ್ನು ಹೊಂದಬೇಕು ಎನ್ನುವ ದಂಪತಿಗಳ ವೈದ್ಯಕೀಯ ಸ್ಥಿತಿಗತಿ ಆಧರಿಸಿ ನಿಯಮದಲ್ಲಿರುವ ನಿರ್ಬಂಧವನ್ನು ತೆಗೆದು ಹಾಕಬೇಕಾಗುತ್ತದೆ ಅಥವಾ ಸಡಿಲಿಸಬೇಕಾಗುತ್ತದೆ. ಅದಕ್ಕಾಗಿ ನಿಯಮ 14ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಾಯಿದೆಯಲ್ಲಿ ವೈದ್ಯಕೀಯ ಸ್ಥಿತಿಗತಿ ಬಗ್ಗೆ ವ್ಯಾಖ್ಯಾನ ಇಲ್ಲದಿದ್ದರೂ ಸಹ ನಿಯಮ 14ರಲ್ಲಿ ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಳ್ಳಲು ಬಯಸುವ ಮಹಿಳೆಯ ಆರೋಗ್ಯ ಸ್ಥಿತಿಗತಿ ಅಂಶ ಪ್ರಸ್ತಾಪಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ನ್ಯಾಯಾಲಯದ ಮುಂದೆ ಹಲವು ಅರ್ಜಿದಾರ ದಂಪತಿಗಳಿದ್ದಾರೆ. ಅವರ ವೈದ್ಯಕೀಯ ಸ್ಥಿತಿಗತಿಗಳನ್ನು ಪರಿಗಣಿಸಿ ಅವರಿಗೆ ಗರ್ಭಾವಸ್ಥೆಯ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಅವಕಾಶ ನೀಡಲಾಗುವುದು. ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಅಗತ್ಯ ಪ್ರಮಾಣಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಇಂತಹದ್ದೇ ವಿಚಾರಗಳು ಕೇರಳ, ದೆಹಲಿ ಸೇರಿದಂತೆ ಹಲವು ಹೈಕೋರ್ಟ್‌ಗಳ ಮುಂದೆ ಬಂದಿವೆ. ದೆಹಲಿ ಹೈಕೋರ್ಟ್‌ ಮೇಲ್ನೋಟಕ್ಕೆ ಹೊಸ ನಿಯಮಗಳು ದಂಪತಿಗಳ ಹಕ್ಕುಗಳನ್ನು ಕಸಿದುಕೊಂಡಿವೆ ಎಂದು ಹೇಳಿದ್ದರೆ, ಕೇರಳ ಹೈಕೋರ್ಟ್ ಈ ತಿದ್ದುಪಡಿಯ ಹಿಂದಿನ ಸರ್ಕಾರದ ಉದ್ದೇಶವೇನು ಎಂದು ಪ್ರಶ್ನಿಸಿದೆ. ಇದೇ ವಿಚಾರ ಸುಪ್ರೀಂ ಕೋರ್ಟ್ ಮುಂದೆಯೂ ಬಾಕಿ ಇದೆ. ಅಲ್ಲಿ ಮಧ್ಯಂತರ ಆದೇಶವಾಗಿ ಮಹಿಳೆಯೊಬ್ಬರಿಗೆ ದಾನಿಗಳಿಂದ ಅಂಡಾಣು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹೇಳಿರುವ ಹೈಕೋರ್ಟ್ ಈ ಸಂಬಂಧದ ಹಲವು ತೀರ್ಪುಗಳನ್ನು ಉಲ್ಲೇಖಿಸಿದೆ.