ಸುದ್ದಿಗಳು

ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲು ಸರ್ಕಾರಕ್ಕೆ ಹೈಕೋರ್ಟ್‌ ಅನುಮತಿ

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಸರ್ಕಾರ ಹಾಗೂ ಬಿಡಿಎ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ ನಾಗಪ್ರಸನ್ನ ಮತ್ತು ಟಿ ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠ ನಡೆಸಿತು.

Bar & Bench

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಅನುಮತಿ ನೀಡಿದ್ದು, ಮಧ್ಯಂತರ ಆದೇಶ ಮಾಡಿದೆ.

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಸರ್ಕಾರ ಹಾಗೂ ಬಿಡಿಎ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿಗಳಾದ ಎಂ ನಾಗಪ್ರಸನ್ನ ಮತ್ತು ಟಿ ವೆಂಕಟೇಶ್‌ ನಾಯಕ್‌ ಅವರ ವಿಶೇಷ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಶಿವರಾಮ ಕಾರಂತ ಬಡಾವಣೆಯಲ್ಲಿ ಬಿಡಿಎ ನಿವೇಶನ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು ಅನುಮತಿ ನೀಡಬೇಕು. ಬಡಾವಣೆಯ ಅಭಿವೃದ್ಧಿ ಕಾಮಗಾರಿಗಾಗಿ 1,100 ಕೋಟಿ ರೂಪಾಯಿ ಸಾಲ ಪಡೆದು ಬಡ್ಡಿ ಕಟ್ಟಲಾಗುತ್ತಿದೆ. ಬಡಾವಣೆ ಕಾಮಗಾರಿ ಅಂತಿಮ ಹಂತದಲ್ಲಿದೆ. ನಿವೇಶನ ಹಂಚಿಕೆಗೆ ಸಾಕಷ್ಟು ಸಮಯ ಹಿಡಿಯಲಿದೆ. ಹೀಗಾಗಿ, ಅರ್ಜಿ ಸ್ವೀಕರಿಸಲು ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಅದಕ್ಕೆ ಒಪ್ಪಿದ ಪೀಠವು ದುಬಾರಿ ಅರ್ಜಿ ಶುಲ್ಕ ವಿಧಿಸದಂತೆ ಸರ್ಕಾರಕ್ಕೆ ಸಲಹೆ ನೀಡಿ ಅರ್ಜಿಗೆ ಸ್ವೀಕರಿಸಲು ಅನುಮತಿ ನೀಡಿತು. ಹಾಗೇಯೆ, ಅರ್ಜಿ ಸ್ವೀಕರಿಸಿದರೂ ನಿವೇಶನ ಹಂಚಿಕೆಗೆ ಈ ಹಿಂದೆ ನೀಡಲಾಗಿರುವ ನಿರ್ಬಂಧವನ್ನು ಇದೇ ವೇಳೆ ಮುಂದುವರಿಸಿದೆ.

ಈ ಹಿಂದೆಯೂ ಬಿಡಿಎ ಎರಡು ಬಾರಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಲು ನ್ಯಾಯಾಲಯದ ಅನುಮತಿ ಕೋರಿತ್ತು. ಆದರೆ, ನ್ಯಾಯಾಲಯ ಅನುಮತಿ ನೀಡಿರಲಿಲ್ಲ. ಬದಲಿಗೆ ಬಡಾವಣೆ ಅಭಿವೃದ್ಧಿ ವಿಧಿ ವಿಧಾನಗಳ ಬಗ್ಗೆ ಸಮಗ್ರ ವಿವರಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ನಿವೇಶನ ಹಂಚಿಕೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ 2024ರಲ್ಲಿ ಮಧ್ಯಂತರ ಅದೇಶ ಆದೇಶಿಸಿತ್ತು.