ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4ರಂದು ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ ಆರೋಪಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಅವರಿಗೆ ಕೆಲಸದ ನಿಮಿತ್ತ ದೇಶದ ವಿವಿಧೆಡೆ ಪ್ರಯಾಣ ಕೈಗೊಳ್ಳಲು ಬುಧವಾರ ಕರ್ನಾಟಕ ಹೈಕೋರ್ಟ್ ಅನುಮತಿಸಿದೆ.
ಕೆಲಸದ ಕಾರಣಗಳಿಗಾಗಿ ದೇಶದ ವಿವಿಧೆಡೆ ಪ್ರಯಾಣ ಕೈಗೊಳ್ಳಬೇಕಿದ್ದು, ಪ್ರಕರಣದಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯದ ವ್ಯಾಪ್ತಿ (ಬೆಂಗಳೂರು) ತೊರೆಯದಂತೆ ವಿಧಿಸಿದ್ದ ಷರತ್ತು ಸಡಿಲಿಸುವಂತೆ ಕೋರಿ ನಿಖಿಲ್ ಸೋಸಲೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸೋಸಲೆ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು “ಪ್ರಕರಣದ ಇತರ ಆರೋಪಿಗಳಿಗೂ ಜಾಮೀನು ಮಂಜೂರು ಮಾಡುವಾಗ ವ್ಯಾಪ್ತಿ ತೊರೆಯದಂತೆ ಷರತ್ತು ವಿಧಿಸಲಾಗಿತ್ತು. ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳಲ್ಲಿ ಈ ಜಾಮೀನು ಷರತ್ತುಗಳನ್ನು ಸಡಿಲಿಕೆ ಮಾಡಲಾಗಿದೆ” ಎಂದು ತಿಳಿಸಿದರು.
ದಾಖಲೆಗಳನ್ನು ಪರಿಶೀಲಿಸಿದ ಪೀಠವು “ಅರ್ಜಿದಾರರು ಕೆಲಸದ ನಿಮಿತ್ತ ಆಗಿಂದಾಗ ದೇಶದಾದ್ಯಂತ ಪ್ರಯಾಣಿಸಬೇಕಾಗುತ್ತದೆ ಎಂಬುದನ್ನು ಗಮನಿಸಲಾಗಿದೆ. ಪ್ರಯಾಣ ಸಂಬಂಧಿತ ಎಲ್ಲ ವಿವರಗಳನ್ನು ತನಿಖಾಧಿಕಾರಿಗೆ ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಆದ್ದರಿಂದ, ಅರ್ಜಿದಾರರು ನಗರವನ್ನು ಬಿಡುವ ಮೊದಲು ಹಾಗೂ ನಗರಕ್ಕೆ ಹಿಂದಿರುಗಿದ ನಂತರ ತನಿಖಾಧಿಕಾರಿಗೆ ಆ ಬಗ್ಗೆ ಮಾಹಿತಿ ನೀಡುವುದಕ್ಕೆ ಒಳಪಟ್ಟಂತೆ ಜಾಮೀನು ಷರತ್ತು ಸಡಿಲಿಕೆ ಮಾಡಲಾಗಿದೆ” ಎಂದು ಆದೇಶಿಸಿತು.
ನಿಖಿಲ್ ಸೋಸಲೆಗೆ ಜಾಮೀನು ಮಂಜೂರು ಮಾಡುವಾಗ ಅವರ ಪಾಸ್‌ಪೋರ್ಟ್ ಒಪ್ಪಿಸುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು. ಆ ಷರತ್ತಿನಲ್ಲಿ ಯಾವುದೇ ಬದಲಾವಣೆ ಮಾಡದ ಕಾರಣ, ಸೋಸಲೆ ಅವರು ಕೆಲಸದ ನಿಮಿತ್ತ ದೇಶದಲ್ಲಿ ಪ್ರಯಾಣ ಕೈಗೊಳ್ಳಬಹುದೇ ಹೊರತು, ದೇಶ ತೊರೆಯಲು ಅವಕಾಶವಿಲ್ಲದಂತಾಗಿದೆ.