ಕೊಡಗಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಚಾರುಲತಾ ಸೋಮಲ್ ಅವರು ಕುಂದಾಪುರದ ವಕೀಲ ಶಿರಿಯಾರ ಮುದ್ದಣ್ಣ ಶೆಟ್ಟಿ ಅವರಿಗೆ ಕ್ಷಮಾಪಣೆ ಅರ್ಜಿ ಸಲ್ಲಿಸುವುದರೊಂದಿಗೆ ಮಾನಹಾನಿ ಪ್ರಕರಣವು ಹಾಲಿ ಹಂತದಲ್ಲೇ ಸಮಾಪ್ತಿಗೊಳ್ಳಲಿದೆ ಎಂಬ ಭರವಸೆ ಮತ್ತು ನಂಬಿಕೆ ಹೊಂದಿರುವುದಾಗಿ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶದಲ್ಲಿ ಹೇಳಿದೆ.
ಉಡುಪಿ ಜಿಲ್ಲೆಯ ಕುಂದಾಪುರದ ಉಪವಿಭಾಗಾಧಿಕಾರಿಯಾಗಿದ್ದಾಗ ಚಾರುಲತಾ ಸೋಮಲ್ ಅವರು ಕಂದಾಯ ಸಂಬಂಧಿತ ಪ್ರಕರಣದ ವಿಚಾರಣೆಯ ವೇಳೆ ವಕೀಲರಾದ ಶಿರಿಯಾರ ಮುದ್ದಣ್ಣ ಶೆಟ್ಟಿ ಅವರ ವಿರುದ್ಧ ಮಾನಹಾನಿ ಪದ ಬಳಕೆ ಸಂಬಂಧ ಖಾಸಗಿ ದೂರನ್ನು ಪರಿಗಣಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿರ್ದೇಶಿಸಿದ್ದ ಆದೇಶವನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠವು ಬದಿಗೆ ಸರಿಸಿದೆ.
“ಘಟನೆ ನಡೆದ ದಿನ ಚಾರುಲತಾ ಸೋಮಲ್ ಅವರು ಅರೆ ನ್ಯಾಯಾಂಗ ಕೆಲಸದಲ್ಲಿದ್ದರು. ಆದ್ದರಿಂದ ಅವರನ್ನು ನ್ಯಾಯಾಧೀಶರ (ರಕ್ಷಣಾ) ಕಾಯಿದೆ 1985ರ ಸೆಕ್ಷನ್ 2ರಲ್ಲಿ ನ್ಯಾಯಾಧೀಶರ ವ್ಯಾಖ್ಯಾನದ ಆಧಾರದಲ್ಲಿ ಚಾರುಲತಾ ಅವರನ್ನು ನ್ಯಾಯಾಧೀಶೆ ಎಂದು ಪರಿಗಣಿಸಬಹುದು” ಎಂದು ನ್ಯಾಯಾಲಯ ಹೇಳಿದೆ.
“ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ವಕೀಲ ಮುದ್ದಣ್ಣ ಶೆಟ್ಟಿ ಅವರಿಗೆ ಸದ್ಯ 70 ವರ್ಷ ವಯಸ್ಸಾಗಿದ್ದು, ಪ್ರಕರಣದ ಮರು ವಿಚಾರಣೆಗೆ ಸೂಚಿಸಿವುದು ವ್ಯರ್ಥ ಪ್ರಯತ್ನವಾಗಲಿದೆ. ಹೀಗಾಗಿ, ಕುಂದಾರಪುರ ವಕೀಲರ ಪರಿಷತ್‌ನಲ್ಲಿ ಹಿರಿಯ ಸದಸ್ಯರಾಗಿರುವ ಮುದ್ದಣ್ಣ ಶೆಟ್ಟಿ ಅವರಿಗೆ ಕ್ಷಮಾಪಣಾ ಪತ್ರ ಕಳುಹಿಸುವಂತೆ ಚಾರುಲತಾ ಸೋಮಲ್ ಅವರಿಗೆ ನಿರ್ದೇಶಿಸುವುದು ಸೂಕ್ತವಾಗಿದೆ. ಇದಕ್ಕೆ ಮುದ್ದಣ್ಣ ಶೆಟ್ಟರು ಒಪ್ಪಿದರೆ ಪ್ರಕರಣವು ಅಲ್ಲಿಗೆ ಮುಗಿಯಲಿದೆ” ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ: 27.07.2015ರಂದು ಶೀಲಾವತಿ ಶೇಡ್ತಿ ಎಂಬವರ ಕಂದಾಯ ಮೇಲ್ಮನವಿಯು ಕುಂದಾಪುರದ ಉಪವಿಭಾಗಾಧಿಕಾರಿಯಾದ ಚಾರುಲತಾ ಸೋಮಲ್ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಶೇಡ್ತಿ ಅವರನ್ನು ಪ್ರತಿನಿಧಿಸಿದ್ದ ವಕೀಲ ಮುದ್ದಣ್ಣ ಶೆಟ್ಟಿ ಅವರು ವಾದ ಮಾಡುತ್ತಿರುವ ಸಂದರ್ಭದಲ್ಲಿ ಸೋಮಲ್ ಅವರು ಏರುಧ್ವನಿಯಲ್ಲಿ “ನಿಮ್ಮ ವಾದ ನಿಲ್ಲಿಸಿ. ನಿಮ್ಮ ಮೌಖಿಕ ವಾದ ಆಲಿಸಲು ನನಗೆ ಸಮಯವಿಲ್ಲ. ಏನು ಹೇಳಬೇಕು ಎಂದಿದ್ದೀರಿ ಅದನ್ನು ಲಿಖಿತವಾಗಿ ಸಲ್ಲಿಸಿ” ಎಂದಿದ್ದರು.
ಆಗ ಮುದ್ದಣ್ಣ ಶೆಟ್ಟಿ ಅವರು ಐದು ನಿಮಿಷದಲ್ಲಿ ವಾಸ್ತವಿಕ ವಿಚಾರಗಳನ್ನು ತಿಳಿಸಲಾಗುವುದು ಎಂದು ಪರಿಪರಿಯಾಗಿ ಬೇಡಿದ್ದರು. ಇದರಿಂದ ಕುಪಿತಗೊಂಡ ಸೋಮಲ್ ಅವರು ಮುದ್ದಣ್ಣ ಶೆಟ್ಟಿ ಅವರ ವಿರುದ್ಧ “ಕಿರುಚಾಡಿ, ಇಲ್ಲಿಂದ ಹೊರಹೋಗಿ” ಎಂದಿದ್ದರು. ಈ ಮಾತು ಕೇಳಿ ಮುದ್ದಣ್ಣ ಶೆಟ್ಟಿ ಅವರು ಆಘಾತ ಮತ್ತು ಆಶ್ಚರ್ಯಕ್ಕೆ ಒಳಗಾಗಿದ್ದರು. ಪ್ರಕರಣ ಇಲ್ಲಿಗೆ ನಿಲ್ಲದೇ, ಸೋಮಲ್ ಅವರು ದಫೇದಾರ್‌ಗೆ ಮುದ್ದಣ್ಣ ಶೆಟ್ಟರನ್ನು ಹೊರ ಹಾಕುವಂತೆ ಸೂಚಿಸಿದ್ದರು. ಮುಜುಗರದ ಸನ್ನಿವೇಶದಿಂದ ಪಾರಾಗಲು ಅವರು ಅಲ್ಲಿಂದ ಹೊರ ನಡೆದಿದ್ದರು.
ಈ ಸಂದರ್ಭದಲ್ಲಿ ಹಲವು ವಕೀಲರು ಮತ್ತು ಅಧಿಕಾರಿಗಳು ಹಾಜರಿದ್ದರು. ಸೋಮಲ್ ಆಡಿದ್ದ ಮಾತುಗಳು ಮಾನಹಾನಿಕಾರಕವಾಗಿದ್ದವು ಎಂದು 2015ರ ಜುಲೈ 30ರಂದು ಮುದ್ದಣ್ಣ ಶೆಟ್ಟಿ ಖಾಸಗಿ ದೂರು ದಾಖಲಿಸಿದ್ದರು. ಇದನ್ನು ಪರಿಗಣಿಸಿದ್ದ ನ್ಯಾಯಾಲಯವು 2015ರ ಆಗಸ್ಟ್ 12ರಂದು ಪೂರ್ವಾನುಮತಿ ಅಗತ್ಯವಿಲ್ಲ ಎಂದು ಸಂಜ್ಞೇ ಪರಿಗಣಿಸಿ, ಐಪಿಸಿ ಸೆಕ್ಷನ್‌ಗಳಾದ 499, 500 ಮತ್ತು 504 ಅಡಿ ಪ್ರಕರಣ ದಾಖಲಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸೋನಲ್ ಅವರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.