Karnataka HC and Lokayukta 
ಸುದ್ದಿಗಳು

ಎಪಿಪಿ, ಎಜಿಪಿಗಳ ನೇಮಕಾತಿ ಪ್ರಕರಣ: 4 ತಿಂಗಳಲ್ಲಿ ಶಿಸ್ತು ಪ್ರಕ್ರಿಯೆ ಮುಗಿಸಲು ಲೋಕಾಯುಕ್ತಕ್ಕೆ ಹೈಕೋರ್ಟ್‌ ನಿರ್ದೇಶನ

2012ರಲ್ಲಿ ನಡೆದ ಎಪಿಪಿ ಮತ್ತು ಎಜಿಪಿಗಳ ನೇಮಕಾತಿಯಲ್ಲಿ ಮೋಸ, ವಂಚನೆ ನಡೆದಿದ್ದು, ಇದನ್ನು ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ತನಿಖೆ ನಡೆಸಬೇಕು ಎಂದು ಕೋರಿದ್ದ ಅರ್ಜಿದಾರರು.

Bar & Bench

ಲೋಕಾಯುಕ್ತ ಸಂಸ್ಥೆಯಲ್ಲಿ 61 ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಸರ್ಕಾರಿ ಪ್ಲೀಡರ್‌ಗಳ (ಎಪಿಪಿ ಮತ್ತು ಎಜಿಪಿ) ವಿರುದ್ಧ ಬಾಕಿ ಇರುವ ಶಿಸ್ತು ಕ್ರಮ ಪ್ರಕ್ರಿಯೆ ನಾಲ್ಕು ತಿಂಗಳಲ್ಲಿ ಮುಗಿಯಬೇಕು ಎಂದು ಬುಧವಾರ ಕರ್ನಾಟಕ ಹೈಕೋರ್ಟ್‌ ಲೋಕಾಯುಕ್ತಕ್ಕೆ ಗಡುವು ವಿಧಿಸಿದ್ದು, ಮನವಿಗಳನ್ನು ವಿಲೇವಾರಿ ಮಾಡಿದೆ.

2012ರಲ್ಲಿ ನಡೆದ ಎಪಿಪಿ ಮತ್ತು ಎಜಿಪಿಗಳ ನೇಮಕಾತಿಯಲ್ಲಿ ಮೋಸ, ವಂಚನೆ ನಡೆದಿದ್ದು, ಇದನ್ನು ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ತನಿಖೆ ನಡೆಸಬೇಕು ಎಂಬುದು ಸೇರಿದಂತೆ ವಿವಿಧ ಕೋರಿಕೆಗಳನ್ನು ಒಳಗೊಂಡ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪ್ರರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಮತ್ತು ಪೂರಕ ಆರೋಪ ಪಟ್ಟಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಕಾನೂನಿನ ಪ್ರಕಾರ ಅಧೀನ ನ್ಯಾಯಾಲಯ ತುರ್ತಾಗಿ ಕ್ರಮ ಜರುಗಿಸಬೇಕು. ಆರೋಪಿತರ ವಿರುದ್ಧ ಶಿಸ್ತು ಕ್ರಮ ಪ್ರಕ್ರಿಯೆ ಬಾಕಿ ಇರುವಾಗ ಎಪಿಪಿ ಮತ್ತು ಎಜಿಪಿಗಳು ತಮ್ಮ ಕರ್ತವ್ಯ ನಿಭಾಯಿಸಲು ಅವಕಾಶ ಮಾಡಿಕೊಡಬಾರದು ಎಂದು ಪೀಠವು ಆದೇಶಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪ್ರಿನ್ಸ್‌ ಐಸಾಕ್‌ ಅವರು “2012ರಲ್ಲಿ ಪ್ರಾಸಿಕ್ಯೂಷನ್‌ ನಿರ್ದೇಶನಾಲಯದ ಆಯ್ಕೆ ಪ್ರಕ್ರಿಯೆಯಲ್ಲಿ ಹಲವು ಅಭ್ಯರ್ಥಿಗಳು ವಂಚನೆಯ ಮೂಲಕ ನೇಮಕವಾಗಿ ನ್ಯಾಯಿಕ ವಂಚನೆ ನಡೆಸಿದ್ದಾರೆ. ಪ್ರಾಸಿಕ್ಯೂಷನ್‌ ನಿರ್ದೇಶನಾಲಯದ ಆಗಿನ ಸದಸ್ಯ ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಲು ನಿರ್ದೇಶಿಸಬೇಕು” ಎಂದು ಕೋರಿದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಖಾಸಗಿ ದೂರನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಿದ್ದು, 197 ಅಭ್ಯರ್ಥಿಗಳ ಪೈಕಿ 61 ಅಭ್ಯರ್ಥಿಗಳ ವಿರುದ್ಧ 2017ರ ಜೂನ್‌ ಮತ್ತು 2018ರ ಮಾರ್ಚ್‌ನಲ್ಲಿ ಲೋಕಾಯುಕ್ತ ಪೊಲೀಸರು ಆರೋಪ ಪಟ್ಟಿ ಮತ್ತು ಪೂರಕ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ವಿಚಾರಣಾಧೀನ ನ್ಯಾಯಾಲಯದ ಮುಂದೆ ಕ್ರಿಮಿನಲ್‌ ಪ್ರಕ್ರಿಯೆ ಬಾಕಿ ಇದ್ದು, ಲೋಕಾಯುಕ್ತರಿಗೆ ಶಿಸ್ತು ಕ್ರಮ ಜಾರಿ ಪ್ರಕ್ರಿಯೆ ಜವಾಬ್ದಾರಿ ನೀಡಲಾಗಿದೆ. ಶಿಸ್ತು ಕ್ರಮದ ಹಿನ್ನೆಲೆಯಲ್ಲಿ 61 ಎಪಿಪಿ ಮತ್ತು ಎಜಿಪಿಗಳನ್ನು ಅಮಾನತು ಮಾಡಲಾಗಿದೆ” ಎಂದು ನ್ಯಾಯಾಲಯಕ್ಕೆ ವಿವರಿಸಿದರು.