ಓಲಾ, ಉಬರ್ ಮತ್ತು ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಸೇವೆಯನ್ನು ಸಂಬಂಧಿತ ಸಂಸ್ಥೆಗಳು ಆರು ವಾರಗಳಲ್ಲಿ ನಿರ್ಬಂಧಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಮಹತ್ವದ ಆದೇಶ ಮಾಡಿದೆ.
ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿಗೆ ನಿರ್ದೇಶನ ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮಪ್ರಸಾದ್ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ನಿಯಂತ್ರಣ ಕ್ರಮ ರೂಪಿಸಲು ಮತ್ತು ಸಾರಿಗೇತರ ವಾಹನಗಳನ್ನು ಸಾರಿಗೆ ವಾಹನಗಳನ್ನಾಗಿ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗದು. ಅಂತೆಯೇ, ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿರುವ ಓಲಾ, ಉಬರ್ ಮತ್ತಿತರ ಸಂಸ್ಥೆಗಳು ಆರು ವಾರಗಳ ಒಳಗೆ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.
2022ರ ಫೆಬ್ರವರಿಯಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು “ನ್ಯಾಯಾಲಯವು ಸದರಿ ವಿಚಾರ ಕುರಿತಾದ ಮೇಲ್ಮನವಿಯಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸುವ ಮನವಿಗಳನ್ನು ಪರಿಗಣಿಸಬೇಕು ಎಂದು ಸಾರಿಗೆ ಇಲಾಖೆಗೆ ಸ್ಪಷ್ಟವಾದ ನಿರ್ದೇಶನ ನೀಡಿದೆ. ಇದನ್ನು ಆಧರಿಸಿ ಎಎನ್‌ಐ ಸಂಸ್ಥೆಯು 2021ರ ಏಪ್ರಿಲ್ 19ರಂದು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದೆ. ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು ಎಂದು 2021ರ ಆಗಸ್ಟ್ 11ರಂದು ನ್ಯಾಯಾಲಯವು ಮಧ್ಯಂತರ ಆದೇಶ ಮಾಡಿದೆ. ಹಾಲಿ ಪ್ರಕರಣದಲ್ಲಿ ಈ ಅರ್ಜಿದಾರರು ಬೈಕ್ ಟ್ಯಾಕ್ಸಿ ಸೇವೆಯನ್ನೇ ನೀಡುತ್ತಿರುವುದರಿಂದ ಅವರಿಗೂ ಮಧ್ಯಂತರ ರಕ್ಷಣೆಗೆಯ ಅಗತ್ಯವಿದೆ. ಹೀಗಾಗಿ, ಅರ್ಜಿಯಲ್ಲಿ ಉಲ್ಲೇಖಿಸಿರುವ ಪ್ರದೇಶಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡಲಿರುವ ಎಎನ್‌ಐ ವಿರುದ್ಧ ಮುಂದಿನ ಆದೇಶವರೆಗೆ ಸಾರಿಗೆ ಇಲಾಖೆ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು” ಎಂದು ಪೀಠವು ಆದೇಶಿಸಿತ್ತು.
ಈ ಆದೇಶದ ಅನ್ವಯ ಇಲ್ಲಿಯವರೆಗೆ ಬೈಕ್ ಟ್ಯಾಕ್ಸಿ ಸೇವೆಗಳು ಮುಂದುವರಿದಿದ್ದವು.