Karnataka HC, Chief Justice Ritu Raj Awasthi and S R Krishna Kumar

 
ಸುದ್ದಿಗಳು

ಕೇಂದ್ರ ಠೇವಣಿ ಇಟ್ಟಿರುವ ₹3 ಕೋಟಿಯನ್ನು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಬಿಡುಗಡೆ ಮಾಡಲು ಹೈಕೋರ್ಟ್‌ ಸೂಚನೆ

ಎಲ್‌ಎಸ್‌ಡಿಯಿಂದ ನರಳುತ್ತಿರುವ ಮಕ್ಕಳ ಚಿಕಿತ್ಸೆಗೆ ₹3 ಕೋಟಿಯನ್ನು ಹೈಕೋರ್ಟ್ ಮೂಲಕ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ. ಅದನ್ನು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಬಿಡುಗಡೆ ಮಾಡಬೇಕು ಎಂದ ಕೇಂದ್ರ.

Bar & Bench

ಅಪರೂಪದ ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ (ಎಲ್‌ಎಸ್‌ಡಿ) ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ಠೇವಣಿ ಇಟ್ಟಿರುವ ಮೂರು ಕೋಟಿ ರೂಪಾಯಿಗಳನ್ನು ಬಡ್ಡಿ ಸಮೇತ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಬಿಡುಗಡೆ ಮಾಡುವಂತೆ ಈಚೆಗೆ ರಿಜಿಸ್ಟ್ರಾರ್ ಜನರಲ್‌ಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಎಲ್‌ಎಸ್‌ಡಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ನೆರವು ಕಲ್ಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ ಬಿ ನರಗುಂದ್‌ ಅವರು “ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನಿರ್ದೇಶನದಂತೆ ಎಲ್‌ಎಸ್‌ಡಿ ಕಾಯಿಲೆಯಿಂದ ನರಳುತ್ತಿರುವ ಮಕ್ಕಳ ಚಿಕಿತ್ಸೆಗೆ ರೂ. ಮೂರು ಕೋಟಿ ಹಣವನ್ನು ಹೈಕೋರ್ಟ್ ಮೂಲಕ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ. ಅದನ್ನು ಮಕ್ಕಳಿಗೆ ಚಿಕಿತ್ಸೆ ಕಲ್ಪಿಸುತ್ತಿರುವ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಬಿಡುಗಡೆ ಮಾಡಬೇಕು” ಎಂದು ಕೋರಿದರು.

ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಪರ ವಕೀಲರು “ಹಣ ಬಿಡುಗಡೆಗೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮುಂದೆ ಸೂಕ್ತ ಅರ್ಜಿ ಸಲ್ಲಿಸಲಾಗುವುದು” ಎಂದರು.

ಇದನ್ನು ಪರಿಗಣಿಸಿದ ಪೀಠವು ಹಣ ಬಿಡುಗಡೆಗಾಗಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಸೂಕ್ತ ಅರ್ಜಿ ಸಲ್ಲಿಸಬಹುದು. ಒಂದೊಮ್ಮೆ ಅರ್ಜಿ ಸಲ್ಲಿಕೆಯಾದರೆ ಅದನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿದ ನಂತರ ಬಡ್ಡಿ ಸಮೇತ ಹಣ ಬಿಡುಗಡೆ ಮಾಡಬೇಕು ಎಂದು ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.