ಸುದ್ದಿಗಳು

ಕಾಲ್ತುಳಿತ ಪ್ರಕರಣ: ಕೆಎಸ್‌ಸಿಎ ಪದಾಧಿಕಾರಿಗಳ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ಆದೇಶ

ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌, ಕಾರ್ಯದರ್ಶಿ ಎ ಶಂಕರ್‌, ಖಜಾಂಚಿ ಇ ಎಸ್‌ ಜಯರಾಂ ಅವರು ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ತೊರೆಯುವಂತಿಲ್ಲ. ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿರುವ ನ್ಯಾಯಾಲಯ.

Bar & Bench

ಆರ್‌ಸಿಬಿ ವಿಜಯೋತ್ಸವಕ್ಕೂ ಮುನ್ನ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗದಲ್ಲಿ ನಡೆದಿರುವ ಕಾಲ್ತುಳಿತ ಪ್ರಕರಣದ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ಬಲವಂತ ಕ್ರಮಕೈಗೊಳ್ಳಬಾರದು ಎಂದು ಶುಕ್ರವಾರ ಹೈಕೋರ್ಟ್‌ ಆದೇಶಿಸಿದೆ. ಈ ನಡುವೆ, ಕೆಎಸ್‌ಸಿಎ ಪದಾಧಿಕಾರಿಗಳು ನ್ಯಾಯಾಲಯದ ವ್ಯಾಪ್ತಿ ತೊರೆಯಬಾರದು ಮತ್ತು ತನಿಖೆಗೆ ಎಲ್ಲಾ ರೀತಿಯ ಸಹಕರಿಸಬೇಕು ಎಂದೂ ಹೈಕೋರ್ಟ್‌ ಸೂಚಿಸಿದೆ.

ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌, ಕಾರ್ಯದರ್ಶಿ ಎ ಶಂಕರ್‌, ಖಜಾಂಚಿ ಇ ಎಸ್‌ ಜಯರಾಂ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice S R Krishna Kumar

“ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಆಕ್ಷೇಪಣೆ ಸಲ್ಲಿಸಬೇಕು. ಅರ್ಜಿದಾರರ ವಿರುದ್ಧ ಸರ್ಕಾರ ಬಲವಂತದ ಕ್ರಮಕೈಗೊಳ್ಳಬಾರದು. ಅರ್ಜಿದಾರರು ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ತೊರೆಯುವಂತಿಲ್ಲ. ತನಿಖೆಗೆ ಸಹಕರಿಸಬೇಕು” ಎಂದು ಆದೇಶಿಸಿರುವ ಹೈಕೋರ್ಟ್‌, ವಿಚಾರಣೆಯನ್ನು ಜೂನ್‌ 16ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಕೆಎಸ್‌ಸಿಎ ಪದಾಧಿಕಾರಿಗಳನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಅಶೋಕ ಹಾರನಹಳ್ಳಿ ಮತ್ತು ಎಂ ಎಸ್‌ ಶ್ಯಾಮ್‌ಸುಂದರ್‌ ಅವರು “ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಫ್ರಾಂಚೈಸಿಯ ಪದಾಧಿಕಾರಿಗಳು, ಕಾರ್ಯಕ್ರಮ ಆಯೋಜನೆಯ ಜವಾಬ್ದಾರಿ ಹೊತ್ತಿದ್ದ ಡಿಎನ್‌ಎ ಸಂಸ್ಥೆಯ ವಿರುದ್ಧವೂ ಪ್ರತ್ಯೇಕವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ಮುಖ್ಯಮಂತ್ರಿ ಬಂಧಿಸುವಂತೆ ನಿರ್ದೇಶಿಸಿದ್ದಾರೆ. ಇದರಿಂದ ತಮ್ಮ ಹಕ್ಕುಗಳಿಗೆ ಹಾನಿಯಾಗಲಿದೆ. ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಬಂಧನಕ್ಕೆ ಅವಕಾಶ ನೀಡಬಾರದು. ಈ ನಡುವೆ ಎಫ್‌ಐಆರ್‌ ದಾಖಲಿಸಿರುವ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯ ಅಧಿಕಾರಿಯನ್ನು ಸರ್ಕಾರವೇ ಅಮಾನತು ಮಾಡಿದೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ, ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಮತ್ತು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಮ್ಯಾಜಿಸ್ಟೀರಿಯಲ್‌ ತನಿಖೆಯ ಜೊತೆಗೆ ಹೈಕೋರ್ಟ್‌ ನಿವೃತ್ತ ನ್ಯಾ. ಮೈಕೆಲ್‌ ಕುನ್ಹಾ ನೇತೃತ್ವದ ಸಮಿತಿಗೆ ನ್ಯಾಯಾಂಗ ತನಿಖೆಯ ಹೊಣೆ ವಹಿಸಲಾಗಿದೆ. ಅಗತ್ಯವಿಲ್ಲದೇ ಎಲ್ಲರನ್ನೂ ಬಂಧಿಸುವುದಿಲ್ಲ. ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಅರ್ಜಿದಾರರಿಗೆ ಆತಂಕವಿದ್ದರೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬಹುದು” ಎಂದರು.

ನಿಖಿಲ್ ಸೋಸಲೆ ಅರ್ಜಿ ವಿಚಾರಣೆ ಮುಂದೂಡಿಕೆ

ಆರ್‌ಸಿಬಿ ಫ್ರಾಂಚೈಸಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್‌ ಸೋಸಲೆ ಬಂಧವನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ನಿಖಿಲ್‌ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಸಂದೇಶ್‌ ಚೌಟ ಮತ್ತು ಸಿ ಕೆ ನಂದಕುಮಾರ್‌ ಅವರು “ಮುಖ್ಯಮಂತ್ರಿ ನಿರ್ದೇಶನದ ಹಿನ್ನೆಲೆಯಲ್ಲಿ ನಿಖಿಲ್‌, ಡಿಎನ್‌ಎ ಈವೇಂಟ್‌ ಮ್ಯಾನೇಜ್‌ಮೆಂಟ್‌ನ ಕಿರಣ್‌ ಮತ್ತು ಸುನೀಲ್‌ ಮ್ಯಾಥ್ಯೂ ಅವರನ್ನು ಬಂಧಿಸಲಾಗಿದೆ. ಸ್ವಯಂಪ್ರೇರಿತ ಎಫ್‌ಐಆರ್‌ ದಾಖಲಿಸಿದ್ದ ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿಯನ್ನು ಸರ್ಕಾರವೇ ಅಮಾನತು ಮಾಡಿದೆ. ಹೀಗಿರುವಾಗ ಸೋಸಲೆ ಮತ್ತು ಇತರರ ಬಂಧನವು ಅಕ್ರಮವಾಗುತ್ತದೆ” ಎಂದು ಆಕ್ಷೇಪಿಸಿದರು.

ಇದಕ್ಕೆ ಶೆಟ್ಟಿ ಅವರು “ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಅಮಾನತಿನ ಹಿನ್ನೆಲೆಯಲ್ಲಿ ಉಸ್ತುವಾರಿ ತನಿಖಾಧಿಕಾರಿಯನ್ನಾಗಿ ಅಶೋಕ ನಗರ ಠಾಣೆಯ ಅಧಿಕಾರಿಯನ್ನು ನೇಮಿಸಲಾಗಿದೆ. ಅವರು ಬಂಧನ ಮಾಡಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು” ಎಂದು ಕೋರಿದರು.

ಉಭಯ ಪಕ್ಷಕಾರರ ವಾದ ಆಲಿಸಿದ ಪೀಠವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಕೆಎಸ್‌ಸಿಎ ಪದಾಧಿಕಾರಿಗಳ ಪರವಾಗಿ ವಕೀಲೆ ಪಿ ಎಲ್‌ ವಂದನಾ ಅವರು ವಕಾಲತ್ತು ವಹಿಸಿದ್ದಾರೆ.