OLA Electric 
ಸುದ್ದಿಗಳು

ಭಾವಿಶ್‌ ವಿರುದ್ಧದ ಪ್ರಕರಣ: ಎಫ್‌ಎಸ್‌ಎಲ್‌ ವರದಿ ಆಧರಿಸಿ ತನಿಖೆ ಮುಂದುವರಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

“ಅರವಿಂದ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿದ್ದ ಪತ್ರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದೆ. ಕೈಬರಹದ ತಜ್ಞರ ವರದಿಗಾಗಿ ಕಾಯಲಾಗುತ್ತಿದೆ” ಎಂದ ಪ್ರಸನ್ನಕುಮಾರ್.‌

Bar & Bench

ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೃತ ಉದ್ಯೋಗಿ ಕೆ ಅರವಿಂದ್ ಸಾಯುವ ಮುನ್ನ ಬರೆದಿಟ್ಟಿದ್ದರು ಎನ್ನಲಾದ ಆತ್ಮಹತ್ಯೆ ಪತ್ರದ ಕುರಿತಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ (ಎಫ್‌ಎಸ್‌ಎಲ್‌) ಏನು ಹೊರಬರುತ್ತದೆಯೋ ಅದನ್ನು ಆಧರಿಸಿ ತನಿಖೆ ಮುಂದುವರಿಸಿ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಭಾವಿಶ್ ಅಗರ್ವಾಲ್‌, ಸುಬ್ರತ್‌ ಕುಮಾರ್‌ ದಾಸ್‌ ಮತ್ತು ಓಲಾ ಎಲೆಕ್ಟ್ರಿಕ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ನಡೆಸಿತು.

ಪ್ರತಿವಾದಿ ಅಶ್ವಿನ್‌ ಕಣ್ಣನ್‌ (ಮೃತ ಅರವಿಂದ್ ಸಹೋದರ) ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರು “ಅರವಿಂದ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿದ್ದ ಪತ್ರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದೆ. ಕೈಬರಹದ ತಜ್ಞರ ವರದಿಗಾಗಿ ಕಾಯಲಾಗುತ್ತಿದೆ” ಎಂದರು.

ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಎಂ ಎಸ್ ಶ್ಯಾಮಸುಂದರ್ ಅವರು “ಈ ಪ್ರಕರಣವು ಭಾರತೀಯ ದಂಡ ಸಂಹಿತೆ–1860ರ (ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ) ಸೆಕ್ಷನ್‌ 306ಕ್ಕೆ ಅನ್ವಯ ಆಗುವುದಿಲ್ಲ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಅಂತಿಮ ವರದಿ ಕೈಸೇರಲಿ. ಒಂದು ವೇಳೆ ಪ್ರಾಸಿಕ್ಯೂಷನ್‌ ಆರೋಪ ಪಟ್ಟಿ ಸಲ್ಲಿಸಿದರೆ ಅದನ್ನು ಸಕ್ಷಮ ನ್ಯಾಯಾಲಯದಲ್ಲಿ ಪ್ರಶ್ನಿಸಿ. ಆಗ ಬೇಕಿದ್ದರೆ ಈ ಅರ್ಜಿಯನ್ನು ವಜಾಗೊಳಿಸುತ್ತೇನೆ” ಎಂದು ‌ಶ್ಯಾಮಸುಂದರ್‌ ಅವರಿಗೆ ಸೂಚಿಸಿತು.

ಅಂತೆಯೇ, ಎಫ್‌ಎಸ್‌ಎಲ್‌ ವರದಿ ಆಧರಿಸಿ ತನಿಖೆ ಮುಂದುವರಿಸಬಹುದು ಎಂದು ರಾಜ್ಯ ಪ್ರಾಸಿಕ್ಯೂಷನ್‌ ಪರ ವಕೀಲ ಕೆ ರಾಹುಲ್‌ ರೈ ಅವರಿಗೆ ನಿರ್ದೇಶಿಸಿ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿತು. ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಈ ಹಿಂದಿನ ಮಧ್ಯಂತರ ಆದೇಶವನ್ನು ಇದೇ ವೇಳೆ ಪೀಠ ವಿಸ್ತರಿಸಿತು.