Karnataka High Court 
ಸುದ್ದಿಗಳು

ಕೆ ಸಿ ವ್ಯಾಲಿ ಮತ್ತು ಎಚ್‌ ಎನ್‌ ವ್ಯಾಲಿ: ಪರಿಸರ ಪರಿಣಾಮ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದ ಹೈಕೋರ್ಟ್‌

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಣ್ಣ ನೀರಾವರಿ ಟ್ಯಾಂಕ್‌ಗಳಿಗೆ ಶುದ್ದೀಕರಿಸಿದ ನೀರನ್ನು ತುಂಬಿಸುವುದು ಕೆ ಸಿ ವ್ಯಾಲಿ ಮತ್ತು ಎಚ್‌ ಎನ್‌ ವ್ಯಾಲಿ ಉದ್ದೇಶವಾಗಿದೆ.

Bar & Bench

ಕೋರಮಂಗಲ ಮತ್ತು ಚಲ್ಲಘಟ್ಟ ವ್ಯಾಲಿ (ಕೆ ಸಿ ವ್ಯಾಲಿ) ಮತ್ತು ಹೆಬ್ಬಾಳ ಮತ್ತು ನಾಗವಾರ ವ್ಯಾಲಿಗೆ (ಎಚ್‌ ಎನ್‌ ವ್ಯಾಲಿ) ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಿದ್ಧಪಡಿಸಿರುವ ಪರಿಸರ ಪರಿಣಾಮ ಪರಿಶೀಲನಾ ವರದಿ ಸಲ್ಲಿಸಲು ಮಂಗಳವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಕೆ ಸಿ ವ್ಯಾಲಿ ಮತ್ತು ಎಚ್‌ ಎನ್‌ ವ್ಯಾಲಿ ಯೋಜನೆಯು ಅವೈಜ್ಞಾನಿಕವಾಗಿದೆ. ಇದರಿಂದ ಸಾಕಷ್ಟು ಜನರು ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದ್ದು, ಇದು ಜನರ ಶುದ್ದ ಕುಡಿಯುವ ನೀರಿನ ಹಕ್ಕಿಗೆ ಕಂಟಕ ಪ್ರಾಯವಾಗಲಿದೆ ಎಂದು ಆಕ್ಷೇಪಿಸಿ ಆರ್‌ ಆಂಜನ ರೆಡ್ಡಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸರ್ಕಾರಿ ವಕೀಲೆ ಎಚ್‌ ವಾಣಿ ಅವರು “ನ್ಯಾಯಾಲಯದ ನಿರ್ದೇಶನದಂತೆ ಐಐಎಸ್‌ಸಿ ರೂ. 2.37 ಕೋಟಿ ಬಿಡುಗಡೆ ಮಾಡಲಾಗಿದ್ದು, ಅವರು ಬೃಹತ್‌ ವರದಿಯನ್ನು ನೀಡಿದ್ದಾರೆ. ಸದರಿ ವರದಿಯನ್ನು ಒಂದು ವಾರದಲ್ಲಿ ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಬಳಿಕ ಪ್ರಕರಣವನ್ನು ವಿಲೇವಾರಿ ಮಾಡಬಹುದು” ಎಂದರು.

ಮಧ್ಯಪ್ರವೇಶ ಕೋರಿ ಮನವಿ ಸಲ್ಲಿಸಿರುವ ಹಿರಿಯ ವಕೀಲ ಎಕ್ಸ್‌ ಎಂ ಜೋಸೆಫ್‌ “ಯಾವುದೇ ತೆರನಾದ ಪರಿಶೀಲನಾ ವರದಿಯನ್ನು ಪಡೆಯದೇ ರಾಜ್ಯ ಸರ್ಕಾರವು ಟೆಂಡರ್‌ ಕರೆದಿದೆ. ಇದನ್ನು ಮುಂದುವರಿಸಲು ಅವಕಾಶ ನೀಡಬಾರದು” ಎಂದು ಕೋರಿದರು.

ವಕೀಲ ಪ್ರಿನ್ಸ್‌ ಐಸಾಕ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಪರವಾಗಿ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಟಿ ಆರ್‌ ಗಿರೀಶ್‌ ಅವರು “2020ರ ಜನವರಿ 28 ಮತ್ತು ಮಾರ್ಚ್‌ 10ರಂದು ಕರ್ನಾಟಕ ಹೈಕೋರ್ಟ್‌ ಮನವಿಯನ್ನು ಸ್ವಯಂಪ್ರೇರಿತ ಪ್ರಕರಣ ಎಂದು ಪರಿಗಣಿಸಿ ಅರ್ಜಿದಾರರನ್ನು ನಿರ್ಬಂಧಿಸಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇವೆ. ಸದರಿ ಮನವಿಯು ಸುಪ್ರೀಂ ಕೋರ್ಟ್‌ನಲ್ಲಿ ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ, ಮೂರು ವಾರಗಳ ಬಳಿಕ ವಿಚಾರಣೆಗೆ ನಿಗದಿಪಡಿಸಬೇಕು” ಎಂದು ಕೋರಿದರು.

ಪಕ್ಷಕಾರರ ವಾದವನ್ನು ಆಲಿಸಿದ ಪೀಠವು, ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಹೈಕೋರ್ಟ್‌ ನಿರ್ದಿಷ್ಟ ಆದೇಶ ಹೊರಡಿಸಲು ಬಯಸುವುದಿಲ್ಲ ಎಂದು ಹೇಳಿ ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮುಂದೂಡಿತು.

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಣ್ಣ ನೀರಾವರಿ ಕೆರೆ ಕುಂಟೆಗಳಿಗೆ ಶುದ್ದೀಕರಿಸಿದ ನೀರನ್ನು ತುಂಬಿಸುವುದು ಕೆ ಸಿ ವ್ಯಾಲಿ ಮತ್ತು ಎಚ್‌ ಎನ್‌ ವ್ಯಾಲಿ ಉದ್ದೇಶವಾಗಿದೆ.