High Court of Karnataka 
ಸುದ್ದಿಗಳು

ಮಾಹಿತಿ ಆಯುಕ್ತರ ನೇಮಕಾತಿ: ಸುಪ್ರೀಂನಲ್ಲಿ ಅನುಪಾಲನಾ ಮಾಹಿತಿ ನೀಡಿದ ಬಳಿಕ ವಿಚಾರಣೆಗೆ ಪಟ್ಟಿ ಮಾಡಲು ಹೈಕೋರ್ಟ್ ಸೂಚನೆ

ಮಾರ್ಚ್‌ 4ರಂದು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರವು ಅನುಪಾಲನಾ ವರದಿ ಸಲ್ಲಿಸಬೇಕಿದೆ. ಅಂದು ಸರ್ಕಾರವು ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಮುಂದೆ ಇಡಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

Bar & Bench

ಶೋಧನಾ ಸಮಿತಿ ರಚಿಸದೇ ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಗೆ ನಿವೃತ್ತ ಐಎಎಸ್‌ ಅಧಿಕಾರಿ ಆತಿಶ್‌ ಮೋಹನ್‌ ಪ್ರಸಾದ್‌ ಮತ್ತು ಮಾಹಿತಿ ಆಯುಕ್ತರನ್ನಾಗಿ ಕೆ‌ ರಾಮನ್, ಡಾ.ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ‌.ಚನ್ನಾಳ, ಎಸ್.ರಾಜಶೇಖರ, ಕೆ ಬದ್ರುದ್ದೀನ್ ಮತ್ತು ಬಿ ಆರ್ ಮಮತಾ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಯಾದ ಬಳಿಕ ಪಟ್ಟಿ ಮಾಡುವಂತೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ಬೆಂಗಳೂರಿನ ಜೆ ಪಿ ನಗರದ 7ನೇ ಹಂತದ ನಿವಾಸಿಯಾದ ಸಾಮಾಜಿಕ ಕಾರ್ಯಕರ್ತ ಕೆ ಮಲ್ಲಿಕಾರ್ಜುನ ರಾಜು ಮಾಹಿತಿ ಆಯುಕ್ತರ ನೇಮಕಾತಿಗೆ ಮಧ್ಯಂತರ ಕೋರಿಕೆ ಸಂಬಂಧ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಆರ್ ದೇವದಾಸ್‌ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿತು.

“ಮಾಹಿತಿ ಆಯುಕ್ತರನ್ನು ನೇಮಕ ಮಾಡುವುದಕ್ಕೂ ಮುನ್ನ ಶೋಧನಾ ಸಮಿತಿ ರಚನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕರ್ನಾಟಕಕ್ಕೆ ಯಾವುದೇ ನಿರ್ದಿಷ್ಟ ನಿರ್ದೇಶನ ನೀಡಿಲ್ಲ ಎಂದು ಅಡ್ವೊಕೇಟ್‌ ಜನರಲ್‌ ಹೇಳಿದ್ದಾರೆ. 7.1.2025ರ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಮಾಹಿತಿ ಆಯುಕ್ತರನ್ನು ನೇಮಕ ಮಾಡಿರುವುದಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಿಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ. 4.3.2025ರಂದು ಈ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಅಂದು ರಾಜ್ಯ ಸರ್ಕಾರವು ಅನುಪಾಲನಾ ವರದಿ ಸಲ್ಲಿಸಬೇಕಿದೆ. ಅಂದು ರಾಜ್ಯ ಸರ್ಕಾರವು ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಮುಂದೆ ಇಡಬೇಕು. ಸುಪ್ರೀಂ ಕೋರ್ಟ್‌ ಆದೇಶ ಮಾಡುವುದಕ್ಕೆ ಒಳಪಟ್ಟು ಈ ಅರ್ಜಿಯನ್ನು 5.3.2025ರಂದು ವಿಚಾರಣೆಗೆ ಪಟ್ಟಿ ಮಾಡಬೇಕು” ಎಂದು ಹೈಕೋರ್ಟ್‌ ಆದೇಶ ಮಾಡಿದೆ.

ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಅಶೋಕ್‌ ಪಾಟೀಲ್‌ ಅವರು “ಹಾಗಾದರೆ ನ್ಯಾಯಾಲಯವು ಮಾಹಿತಿ ಆಯುಕ್ತರ ನೇಮಕಾತಿಗೆ ತಡೆ ನೀಡುವ ಸಂಬಂಧದ ವಿಚಾರವನ್ನು ತಡೆ ಹಿಡಿದಿದೆಯೇ” ಎಂದು ಮೌಖಿಕವಾಗಿ ಸ್ಪಷ್ಟನೆ ಕೋರಿದರು. ಅದಕ್ಕೆ ಪೀಠವು ʼಹೌದುʼ ಎಂದು ಹೇಳಿತು.

ರಾಜ್ಯ ಮುಖ್ಯ ಮಾಹಿತಿ ಆಯುಕ್ತರು (ಸಿಐಸಿ) ಮತ್ತು ಮಾಹಿತಿ ಆಯುಕ್ತರ (ಐಸಿ) ನೇಮಕಾತಿಗೂ ಮುನ್ನ ಶೋಧನಾ ಸಮಿತಿ ರಚಿಸಿರಲಿಲ್ಲ ಎಂದು ಅಡ್ವೊಕೇಟ್‌ ಜನರಲ್‌ ಕಳೆದ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದರು.