High Court of Karnataka
High Court of Karnataka 
ಸುದ್ದಿಗಳು

ಲಾಕ್‌ಡೌನ್‌ ವೇಳೆ ಕಾಲುವೆ ರಿಪೇರಿಗೆ ₹5.02 ಕೋಟಿ ವೆಚ್ಚ ಮಾಡಿದ ಎಂಜಿನಿಯರ್‌: ದಾಖಲೆ ಸಲ್ಲಿಸಲು ಹೈಕೋರ್ಟ್‌ ಆದೇಶ

Bar & Bench

ಕೋವಿಡ್‌ನಿಂದ ಇಡೀ ದೇಶದಲ್ಲಿ ಲಾಕ್‌ಡೌನ್‌ ಜಾರಿಯಿದ್ದಾಗ ಟೆಂಡರ್‌ ಆಹ್ವಾನಿಸದೇ ₹5.02 ಕೋಟಿ ಮೊತ್ತದ ಕಾರ್ಯಾದೇಶ ನೀಡಿ ಕೆಲಸ ಮಾಡಿಸಿದ್ದ ಕಾರ್ಯಕಾರಿ ಎಂಜಿನಿಯರ್‌ ವಿರುದ್ಧ ತನಿಖೆಗೆ ಅನುಮತಿ ನಿರಾಕರಿಸಿರುವ ಕುರಿತಾದ ದಾಖಲೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯ ನಾಗೇಗೌಡ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಧ್ಯಂತರ ಆದೇಶ ಮಾಡಿದೆ.

“ಕಾರ್ಯಕಾರಿ ಎಂಜಿನಿಯರ್‌ ಆಗಲಿ ಅಥವಾ ಅನುಮತಿ ನಿರಾಕರಿಸಿದ ಸಕ್ಷಮ ಪ್ರಾಧಿಕಾರವಾಗಲಿ ತನ್ನ ಹಣ ಕಳೆದುಕೊಂಡಿಲ್ಲ. ಸಾರ್ವಜನಿಕರ ಹಣ ಇಲ್ಲಿ ವಿನಿಯಮಯವಾಗಿದೆ. ಲೋಕಾಯುಕ್ತರ ಮುಂದಿದ್ದ ಪ್ರಕ್ರಿಯೆಯು ಈಗಾಗಲೇ ಮುಕ್ತಾಯವಾಗಿದ್ದರೂ ಸಕ್ಷಮ ಪ್ರಾಧಿಕಾರವು ಅನುಮತಿ ನೀಡಲು ನಿರಾಕರಿಸಿರುವುದಕ್ಕೆ ನಮಗೆ ಆಘಾತವಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.  

ಹೇಮಾವತಿ ಎಡದಂಡೆ ಕಾಲುವೆ ಘಟಕದ ತ್ಯಾಜ್ಯ ವಿಯರ್ ಕಾಲುವೆ ಮತ್ತು ಅದರ ಗೋಡೆಯ ದುರಸ್ತಿ ಕಾರ್ಯಗಳಿಗೆ, ತೂಬು ಕಾಲುವೆಯ ರಿಪೇರಿಗೆ ಮತ್ತಿತರ ಕೆಲಸಕ್ಕಾಗಿ 2020ರ ಮಾರ್ಚ್‌ 27ರಂದು ಗುತ್ತಿಗೆದಾರ ಪಿ ಕೆ ಶಿವರಾಮು ಎಂಬವರಿಗೆ ಈಗ ನಿವೃತ್ತರಾಗಿರುವ ಕಾರ್ಯಕಾರಿ ಎಂಜಿನಿಯರ್‌ ಕೆ ಶ್ರೀನಿವಾಸ್‌ ಅವರು ಕಾರ್ಯಾದೇಶವನ್ನು ನೀಡಿದ್ದಾರೆ ಎಂದು ಅಧಿಕೃತ ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿದು ಬಂದಿದೆ ನ್ಯಾಯಾಲಯ ಹೇಳಿದೆ.

2020ರ ಮಾರ್ಚ್‌ 24ರಂದು ಇಡೀ ದೇಶ ಲಾಕ್‌ಡೌನ್‌ನಲ್ಲಿದ್ದಾಗ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯಿದೆಯಲ್ಲಿ ವಿನಾಯಿತಿ ನಿಬಂಧನೆಯ ಲಾಭ ಪಡೆದು ಈ ಕೆಲಸ ಮಾಡಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

2020ರ ಮಾರ್ಚ್‌ನಲ್ಲಿ ಇಡೀ ದೇಶ ಲಾಕ್‌ಡೌನ್‌ನಲ್ಲಿದ್ದಾಗ ಟೆಂಡರ್‌ ಕರೆಯದೇ ಕಾರ್ಯಾದೇಶ ನೀಡಿರುವ ಕಾರ್ಯಕಾರಿ ಎಂಜಿನಿಯರ್ ಅವರ ವಿರುದ್ಧದ ತನಿಖೆಗೆ ಅನುಮತಿ ನೀಡಲು ನಿರಾಕರಿಸಿರುವ ದಾಖಲೆಗಳನ್ನು ಸಲ್ಲಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.

ಮೂರು ದಿನದಲ್ಲಿ ಕೆಲಸ ಮುಗಿಸಿದ್ದು, ಇದಕ್ಕಾಗಿ ₹5.02 ವೆಚ್ಚವಾಗಿದೆ ಎಂದು ಗುತ್ತಿಗೆದಾರ ಬಿಲ್‌ ಸಲ್ಲಿಸಿದ್ದರು. ಇದನ್ನು ಒಪ್ಪಿ ಮಾರ್ಚ್‌ 31ರಂದು ಕಾರ್ಯಕಾರಿ ಎಂಜಿನಿಯರ್‌ ಅವರು ಬಿಲ್‌ ಪಾವತಿ ಮಾಡಿದ್ದರು.

ಇದನ್ನು ಪ್ರಶ್ನಿಸಿ ಅರ್ಜಿದಾರರು ಶ್ರೀನಿವಾಸ್‌ ಮತ್ತು ಇತರರ ವಿರುದ್ಧ ವಿಚಾರಣಾಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ತನಿಖೆಗೆ ಆದೇಶಿಸಿತ್ತು. ಲೋಕಾಯುಕ್ತರ ಮುಂದೆ ಇದೇ ರೀತಿಯ ಪ್ರಕರಣ ವಿಚಾರಣೆಗೆ ಬಾಕಿ ಇದೆ ಎಂದು ಸಕ್ಷಮ ಪ್ರಾಧಿಕಾರವು ಅನುಮತಿ ನೀಡಲು ತನಿಖಾಧಿಕಾರಿ ಕೋರಿಕೆಗೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಕದತಟ್ಟಿದ್ದರು.