Justice S Sunil Dutt Yadav and Karnataka High Court
Justice S Sunil Dutt Yadav and Karnataka High Court 
ಸುದ್ದಿಗಳು

ವಿದ್ಯುತ್‌ ಸ್ಪರ್ಶದಿಂದ ಸಾವು, ವೈಕಲ್ಯ: ₹1.28 ಕೋಟಿ ಪರಿಹಾರ ಪಾವತಿಸಲು ಕೆಪಿಟಿಸಿಎಲ್‌, ಬೆಸ್ಕಾಂಗೆ ಹೈಕೋರ್ಟ್‌ ಆದೇಶ

Bar & Bench

ವಿದ್ಯುತ್‌ ಸ್ಪರ್ಶದಿಂದ ಅಸುನೀಗಿದ ಒಬ್ಬ ವ್ಯಕ್ತಿಯ ಪತ್ನಿ ಹಾಗೂ ಗಾಯಾಳುಗಳಾಗಿರುವ ಇಬ್ಬರು ಅಪ್ರಾಪ್ತ ಸಂತ್ರಸ್ತರಿಗೆ ನೆರವಿಗೆ ಧಾವಿಸಿರುವ ಕರ್ನಾಟಕ ಹೈಕೋರ್ಟ್‌, 2017-18ರ ಅವಧಿಯಲ್ಲಿ ನಡೆದಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ₹1.28 ಕೋಟಿ ಪರಿಹಾರ ಪಾವತಿಸಲು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) ಮತ್ತು ಬೆಂಗಳೂರು ವಿದ್ಯುತ್‌ ಪೂರೈಕೆ ಕಂಪೆನಿಗೆ (ಬೆಸ್ಕಾಂ) ಈಚೆಗೆ ನಿರ್ದೇಶಿಸಿದೆ.

ಹಾಸನ ಜಿಲ್ಲೆಯ ಸಕಲೇಶಪುರದ ಕಾಫಿ ಎಸ್ಟೇಟ್‌ನಲ್ಲಿ ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿದ್ದ ಕೂಲಿಕಾರರೊಬ್ಬರ ಪತ್ನಿ ರೇಖಾ, ಗಾಯಾಳುಗಳಾಗಿರುವ ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯ 15 ವರ್ಷದ ಬಾಲಕಿ ಚಂದನಾ ಕೆ ಮತ್ತು ಏಳು ವರ್ಷದ ಮುಯಿಜ್‌ ಅಹ್ಮದ್‌ ಶರೀಫ್‌ ಅವರು ಸಲ್ಲಿಸಿದ್ದ ಪ್ರತ್ಯೇಕ ಮನವಿಗಳನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಹಾರ ವಿತರಿಸದಿರುವ ಪ್ರತಿವಾದಿಗಳ ಕ್ರಮವು ಮನಸೋಇಚ್ಛೆಯಿಂದ ಕೂಡಿದೆ. ಪರಿಹಾರ ವಿತರಿಸದಿರುವುದು ಪರಿಹಾರ ವಿತರಿಸುವ ಉದ್ದೇಶವನ್ನೇ ವಿಫಲಗೊಳಿಸುತ್ತದೆ” ಎಂದು ಪೀಠ ಹೇಳಿದೆ.

“ಮಗುವು ಹೈ-ಟೆನ್ಶನ್ ಎಲೆಕ್ಟ್ರಿಕಲ್ ಲೈನ್ (ಎಚ್‌ಟಿ ಲೈನ್) ಹತ್ತಿರ ಹೋಗದಂತೆ ಮತ್ತು ಇಂಡಕ್ಷನ್ ವಲಯದೊಳಗೆ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಲಾಗದು. ಮಕ್ಕಳು ಬಫರ್ ಜೋನ್‌ ವಲಯದಿಂದ ದೂರ ಇರಬೇಕು ಎಂದು ನಿರೀಕ್ಷಿಸಲಾಗದು” ಎಂದು ಪೀಠ ಹೇಳಿದೆ.

“ಓವರ್‌ಹೆಡ್‌ ಲೈನ್‌ಗಳಿಂದ ಅವಘಡ ಸಂಭವಿಸಿದರೆ ಮುಖ್ಯ ಎಲೆಕ್ಟ್ರಿಕಲ್‌ ನಿರೀಕ್ಷಣಾ ಕಚೇರಿಯ ವರದಿಗೆ ಕಾಯದೇ ಎರಡು ತಿಂಗಳಲ್ಲಿ ವಿದ್ಯುತ್‌ ಪೂರೈಕೆ ಕಂಪೆನಿಗಳು ಪರಿಹಾರ ಪಾವತಿಸಬೇಕು” ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ಮಾಡಿದೆ.

2020ರ ಮಾರ್ಚ್‌ನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಧ್ಯಪ್ರವೇಶಿಸಿದ್ದರಿಂದ ಶೇ.79ರಷ್ಟು ವೈಕಲ್ಯಕ್ಕೆ ತುತ್ತಾಗಿರುವ ಚಂದನಾಗೆ ₹2.5 ಲಕ್ಷ ಮತ್ತು ಶೇ. 80ರಷ್ಟು ಸುಟ್ಟಗಾಯಕ್ಕೆ ಒಳಗಾಗಿರುವ ಮುಯಿಜ್‌ಗೆ ₹5 ಲಕ್ಷ ಪರಿಹಾರವನ್ನು ಕೆಪಿಟಿಸಿಎಲ್‌ ಮತ್ತು ಬೆಸ್ಕಾಂ ಪಾವತಿಸಿದ್ದವು.

ಈಗ ಚಂದನಾಳಿಗೆ ₹51.76 ಲಕ್ಷ ಪರಿಹಾರ ಪಾವತಿಸಲು ಬೆಸ್ಕಾಂಗೆ, ಮುಯಿಜ್‌ ಅಹ್ಮದ್‌ ಶರೀಫ್‌ಗೆ ₹50.82 ಲಕ್ಷ ಪರಿಹಾರ ಪಾವತಿಸಲು ಕೆಪಿಟಿಸಿಎಲ್‌ ಹೈಕೋರ್ಟ್‌ ಆದೇಶ ಮಾಡಿದೆ. ಅಲ್ಲದೆ, ಕಾಳು ಮೆಣಸು ಒಕ್ಕಣೆ ಮಾಡುತ್ತಿದ್ದಾಗ ವಿದ್ಯುತ್‌ ಸ್ಪರ್ಶದಿಂದ ಅಸುನೀಗಿದ್ದ 36 ವರ್ಷದ ಸುಬ್ರಹ್ಮಣ್ಯ ಅವರ ಪತ್ನಿ ರೇಖಾ ಅವರಿಗೆ ₹25.52 ಲಕ್ಷ ಪರಿಹಾರ ಪಾವತಿಸಲು ಕೆಪಿಟಿಎಸ್‌ಎಲ್‌ಗೆ ನ್ಯಾಯಾಲಯ ನಿರ್ದೇಶಿಸಿದೆ.